ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ರೀತಿಯ ತೀರ್ಮಾನಗಳು ಹಾಗೂ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕೆಸರುಮಯವಾಗಿದ್ದು, ವಾಹನ ಸವಾರರ ಪಾಡಂತೂ ಹೇಳತೀರದಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸ್ವಲ್ಪವೂ ಲೋಕ ಜ್ಞಾನ ಇಲ್ಲ ಎಂಬುದಾಗಿ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಮಳೆ ಬರುವಾಗಲೇ ಇದ್ದ ಡಾಂಬರ್ ರಸ್ತೆಯನ್ನು ಅಗೆದು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಮುಂದಾದ ಪರಿಣಾಮ ಆನೇಮಹಲ್ ನಿಂದ ಸಕಲೇಶಪುರ ಕಡೆ ಹಾಗೂ ಆನೇಮಹಲ್ ನಿಂದ ದೋಣಿಗಾಲ್ ಕಡೆಗಿನ 5-6 ಕಿ.ಮೀ ಉದ್ದದ ರಸ್ತೆಗಳು ಟ್ರಾಫಿಕ್ ಗೆ ಸಿಲುಕುವುದು ಮಾಮೂಲಿಯಾಗಿದೆ. ಈ ರಸ್ತೆಯಲ್ಲಿ ಹಾದು ಹೋಗುವ ಆಂಬುಲೆನ್ಸ್ ಪರದಾಟ ನೋಡುವಾಗ ಅಯ್ಯೋ ಅನಿಸುತ್ತದೆ. ಆಸ್ಪತ್ರೆಗೆ ಹೋಗುವ ಮುನ್ನವೇ ರೋಗಿಯ ಮಸಣ ಸೇರುವುದಂತು ಗ್ಯಾರಂಟಿ.! ಇದಕ್ಕೆಲ್ಲ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೇ ನೇರ ಜವಾಬ್ದಾರರಾಗಿದ್ದಾರೆ. ಇನ್ನು ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳು ಪರೀಕ್ಷೆ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೂ ಹಾಜರಾಗಲು ಕಷ್ಟ ಪಡುತ್ತಿದ್ದಾರೆ.

ಹಾಸನ-ಮಾರನಹಳ್ಳಿ ನಡುವಿನ ಚತುಷ್ಪಥ ರಸ್ತೆ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಆನೇಮಹಲ್ ಗ್ರಾಮದ ಬಳಿ ಹೆದ್ದಾರಿಯನ್ನು ದೊಡ್ಡ ಯಂತ್ರಗಳಿಂದ ಬಗೆಯಲಾಗಿತ್ತು. ಒಂದು ಬದಿಯಲ್ಲಿ ರಸ್ತೆ ನಿರ್ಮಿಸಿ, ಮತ್ತೊಂದು ಬದಿಯಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡದೆ, ಇಡೀ ರಸ್ತೆಯನ್ನೇ ಅಗೆದಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿಯ ಗುತ್ತಿಗೆ ಪಡೆದಿರುವ ರಾಜ್‌ಕಮಲ್ ಬಿಲ್ಡರ್ಸ್‌ನವರ ಅವೈಜ್ಞಾನಿಕ ಕಾಮಗಾರಿಯೇ ಕಾರಣ’ ಎಂದು ವಾಹನ ಸವಾರರು ದೂರುತ್ತಿದ್ದಾರೆ.

ಸ್ಥಳೀಯ ಶಾಸಕರಾದ ಸಿಮೆಂಟ್ ಮಂಜು ಅವೈಜ್ಞಾನಿಕ ಕಾಮಗಾರಿಯಿಂದ ಜನರಿಗೆ ತೊಂದರೆ ನೀಡಿದ ಎಂಜಿನಿಯರ್‌ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿ, ಎಸ್ಪಿಗೆ ಒತ್ತಾಯ ಮಾಡಿದ್ದು , ಕಾಮಗಾರಿ 2017 ರಿಂದ ಆರಂಭವಾದರೂ ಈವರೆಗೂ ಶೇಕಡಾ 40 ರಷ್ಟು ಕಾಮಗಾರಿ ಮುಗಿದಿಲ್ಲ. ಮಲೆನಾಡಿಗೆ ಯಾರ ಶಾಪ ಬಿದ್ದಿದೆಯೋ ಎಂದು ಜನರಾಡಿಕೊಳ್ಳುತ್ತಿದ್ದಾರೆ.
