ನೀರುಮಾರ್ಗ: ಜಿ ಆರ್ ಮೆಡಿಕಲ್ ಕಾಲೇಜು ಎಂಬಿಬಿಸ್ ಸೀಟು ಅಕ್ರಮ; ರಾಷ್ಟ್ರೀಯ ವೈದ್ಯಕೀಯ ಆಯೋಗ

ಕರಾವಳಿ

ನೂರಾರು ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ

ಮಂಗಳೂರು ಹೊರವಲಯದ ನೀರುಮಾರ್ಗದಲ್ಲಿರುವ ಜಿ ಆರ್ ಮೆಡಿಕಲ್ ಕಾಲೇಜು ಕಾನೂನು ಬಾಹಿರ ಹಾಗೂ ಅಕ್ರಮ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಪಷ್ಟಪಡಿಸಿದೆ. ಸರಕಾರದ ಅನುಮತಿ ಇಲ್ಲದೆಯೇ 2022-23 ರ ಸಾಲಿನಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟು ನೀಡಲಾಗಿದ್ದು, ಲಕ್ಷಾಂತರ ರೂಪಾಯಿ ಗೆ ಫೀಸು ತೆತ್ತು ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಭವಿಷ್ಯ ಇದೀಗ ಡೋಲಾಯಮಾನವಾಗಿದೆ.

ಪ್ರತಿಷ್ಠಿತ ನೀರುಮಾರ್ಗದ ಜಿ ಆರ್ ಮೆಡಿಕಲ್ ಕಾಲೇಜಿನಲ್ಲಿ 2022-23 ನೇ ಸಾಲಿನಲ್ಲಿ ಸುಮಾರು 150 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದ್ದು ಇದು ಕಾನೂನು ಬಾಹಿರ ಕ್ರಮ. ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧಿಕಾರಿಗಳು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. 2021-22 ರಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮೆಡಿಕಲ್ ಅಸೆಸ್ಮೆಂಟ್ ಆಂಡ್ ರೇಟಿಂಗ್ ಬೋರ್ಡ್ (ಎಂಎಆರ್ ಬಿ) ಅಧಿಕಾರಿಗಳು 150 ಸೀಟುಗಳ ಸಾಮರ್ಥ್ಯದೊಂದಿಗೆ ಕಾಲೇಜು ನಡೆಸಲು ಅನುಮತಿ ನೀಡಿತ್ತು. ತದನಂತರ 2022 ರಲ್ಲಿ ಭೇಟಿ ನೀಡಿದ ತಂಡ ಅಗತ್ಯ ಮಾನದಂಡ ಪೂರೈಸದ ಹಿನ್ನೆಲೆಯಲ್ಲಿ ಅನುಮತಿಯನ್ನು ರದ್ದುಪಡಿಸಿತ್ತು. ಆದರೆ ಕಾಲೇಜು ಆಡಳಿತ ಮಂಡಳಿ ಕಾನೂನುಬಾಹಿರವಾಗಿ 2ನೇ ಬ್ಯಾಚಿಗೆ 150 ಮಂದಿ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಅಡ್ಮೀಶನ್ ಮಾಡಿಕೊಂಡಿದೆ ಎಂಬ ಆರೋಪ ಎದುರಿಸುತ್ತಿದೆ. ಈ ಬಗ್ಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನಲ್ಲಿ ಜಿ ಆರ್ ಮೆಡಿಕಲ್ ಕಾಲೇಜನ್ನು ಸೀಟು ಮ್ಯಾಟ್ರಿಕ್ಸ್ ನಿಂದ ಹೊರಗಿಟ್ಟಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಕೋರ್ಟಿನಲ್ಲಿ ಪ್ರಶ್ನೆ ಮಾಡಿರುವುದಾಗಿ ಹೇಳಿಕೊಂಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕವೇ ಪ್ರವೇಶ ಮಾಡಿಕೊಂಡಿರುವುದು, ಹಾಗಾಗಿ ಅಕ್ರಮ ಹೇಗಾಗುತ್ತದೆ ಎಂದು ರಾಷ್ಟ್ರೀಯ ಆಯೋಗಕ್ಕೆ ಅನುಮತಿ ರದ್ದು ಪುನರ್ ಪರಿಶೀಲಿಸುವಂತೆ ಕೇಳಿಕೊಂಡಿದೆ.

ಒಟ್ಟಾರೆ ಬೆಳವಣಿಗೆಯಲ್ಲಿ ಲಕ್ಷಾಂತರ ಫೀಸು ತೆತ್ತು ಎಂಬಿಬಿಎಸ್ ಸೀಟು ಪಡೆದ ವಿದ್ಯಾರ್ಥಿಗಳು ಇದೀಗ ಅಡಕತ್ತರಿಗೆ ಸಿಲುಕಿದಂತಾಗಿದೆ.