ಸಿದ್ಧರಾಮಯ್ಯರವರೇ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರವರಿಗೆ ದಯಮಾಡಿ ಮೊಬೈಲ್ ಕೊಡಿಸಿ

ಕರಾವಳಿ

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಈಗಾಗಲೇ ಆಯುಕ್ತರಾಗಿ ನೂರ್ ಜಹಾರ ಖಾನುಮ್ ಕೆ.ಎ.ಎಸ್ (ಸುಪರ್ ಟೈಮ್ ಶ್ರೇಣಿ) ಇವರು ಸೇವೆ ಸಲ್ಲಿಸುತ್ತಿದ್ದಾರೆ. ನಾನು ದಿನಾಂಕ 04-09-2024 ರಂದು ಜಪ್ಪಿನಮೊಗರು ಬಿ ಗ್ರಾಮದ ಉಮರ್ ಫಾರೂಕ್ ಎಂಬವರ ಕಟ್ಟಡದ ಅಕ್ರಮದ ಬಗ್ಗೆ ದೂರು ಅರ್ಜಿಯನ್ನು ಸಲ್ಲಿಸಿದ್ದು, ದೂರು ಅರ್ಜಿಯನ್ನು ಸಲ್ಲಿಸಿದ ಸಮಯ ಬೆಳಿಗ್ಗೆಯಾಗಿರುವುದರಿಂದ ಆಯುಕ್ತರು ತಮ್ಮ ದಫೆದಾರ್ ರಾದ ಕರುಣಾಕರ್ ರವರ ಬಳಿ ಮಧ್ಯಾಹ್ನ 3.30 ರ ನಂತರ ಭೇಟಿಯಾಗಲು ತಿಳಿಸಿರುತ್ತಾರೆ. ದೂರು ಅರ್ಜಿಯು ಅಕ್ರಮ ಹಾಗೂ ತುಂಬಾ ಗಂಭೀರವಾಗಿರುವುದರಿಂದ ನಾನು ಇವರ ಮೊಬೈಲ್ ಸಂಖ್ಯೆಯನ್ನು ಪಡೆದು ವಾಟ್ಸಾಪ್ ಮೂಲಕ ದೂರು ಅರ್ಜಿಯನ್ನು ಕಳುಹಿಸಿಕೊಟ್ಟಿರುತ್ತೇನೆ. ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಇವರು ನೀಡಿರುವುದಿಲ್ಲ.

ನಂತರದಲ್ಲಿ ನಾನು ಕಛೇರಿಯಲ್ಲಿ ಭೇಟಿಯಾಗಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದಾಗ ಹಾಗೂ ದೂರನ್ನು ಅವರ ಮೊಬೈಲ್ ಕಳುಹಿಸಿರುವುದಾಗಿ ತಿಳಿಸಿರುತ್ತೇನೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಯುಕ್ತರು ಈ ಮೊಬೈಲ್ ನನ್ನ ವೈಯಕ್ತಿಕ ಮೊಬೈಲ್, ಸರಕಾರದ ಮೊಬೈಲ್ ಅಲ್ಲ ಇದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ತಿಳಿಸಿರುತ್ತಾರೆ. ಇವರ ಈ ಪ್ರತಿಕ್ರಿಯೆಯಿಂದ ನನಗೆ ತುಂಬಾ ನೋವುಂಟಾಗಿರುತ್ತದೆ. ಈಗಾಗಲೇ ಆಯುಕ್ತರಿಗೆ ಓಡಾಡಲು ಕಾರು, ಮನೆ, ಬಂಗ್ಲೆ, ವೈದ್ಯಕೀಯ ವೆಚ್ಚ ಎಲ್ಲವನ್ನೂ ಸಾರ್ವಜನಿಕರ ತೆರಿಗೆ ಹಣದಿಂದ ಸರಕಾರವೇ ಭರಿಸುತ್ತದೆ. ಆದರೆ ಸಾರ್ವಜನಿಕರು ಒಂದು ಅಧಿಕಾರಿಯನ್ನು ಸಂಪರ್ಕಿಸಲು ಆಯುಕ್ತರಿಗೆ ಒಂದು ಮೊಬೈಲ್ ನೀಡಿರುವುದಿಲ್ಲವೆಂಬುದು ಬಹಳ ಬೇಸರದ ಸಂಗತಿ.

ಈ ರೀತಿಯಲ್ಲಿ ನೋಡಿದರೆ ಆಯುಕ್ತರ ಪ್ರತಿಕ್ರಿಯೆಯು ಸರಿಯಾಗಿರುತ್ತದೆ. ಯಾಕೆಂದರೆ ಅವರ ವೈಯಕ್ತಿಕ ಮೊಬೈಲ್ ಆಗಿರುವುದರಿಂದ ಸಾರ್ವಜನಿಕರು ಸಂಪರ್ಕಿಸುವುದು ತಪ್ಪಾಗುತ್ತದೆ. ವೈಯಕ್ತಿಕ ಮೊಬೈಲ್ ನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಇತರ ಮೇಲಾಧಿಕಾರಿಗಳು ಸಂಪರ್ಕಿಸಬಹುದು ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿರುತ್ತಾರೆ.

ಆದುದರಿಂದ ತಾವುಗಳು ನನ್ನ ಕೋರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಮೂಡಾ ಆಯುಕ್ತರಾದ ನೂರ್ ಜಹಾರ ಖಾನುಮ್ ಕೆ.ಎ.ಎಸ್ (ಸುಪರ್ ಟೈಮ್ ಶ್ರೇಣಿ) ಇವರಿಗೆ ಸರಕಾರದಿಂದ ಒಂದು ಒಳ್ಳೆಯ ಸ್ಮಾರ್ಟ್ ಪೋನ್ ನೀಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

ಇತೀ. ಅರುಣ್ ಕುಮಾರ್, ಅಶೋಕ್ ನಗರ