ಸರಕಾರವನ್ನು ಟೀಕಿಸಿದ ಮಾತ್ರಕ್ಕೆ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಕೇಸ್ ಸಲ್ಲದು

ರಾಷ್ಟ್ರೀಯ

ಉತ್ತರ ಪ್ರದೇಶ ಸರಕಾರಕ್ಕೆ ಟಾಂಗ್ ಕೊಟ್ಟ ಸುಪ್ರೀಂ ಕೋರ್ಟ್

ಸರಕಾರವನ್ನು ಟೀಕಿಸಿ ವರದಿ ಮಾಡಿದ ಪತ್ರಕರ್ತರ ವಿರುದ್ಧ ಸರಕಾರಗಳು ಕ್ರಿಮಿನಲ್ ಕೇಸ್ ದಾಖಲಿಸಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಖಡಕ್ ಸೂಚನೆ ನೀಡಿದೆ.

ಉತ್ತರ ಪ್ರದೇಶ ಸರಕಾರದ ಆಡಳಿತ ನೀತಿ ಪ್ರಶ್ನಿಸಿ ವರದಿ ಮಾಡಿದ್ದ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಪ್ರಕರಣ ರದ್ದು ಕೋರಿ ಪತ್ರಕರ್ತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೃಷಿಕೇಶ್ ರಾಯ್, ನ್ಯಾಯಮೂರ್ತಿ ಎಸ್.ವಿ.ಎನ್ ಭಟ್ ಅವರಿದ್ದ ನ್ಯಾಯಪೀಠ ಪ್ರಜಾಸತ್ತಾತ್ಮಕ ದೇಶದಲ್ಲಿ ಸಂವಿಧಾನದ ಕಲಂ 17(1) ರ ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಸರಕಾರವನ್ನು ಟೀಕಿಸಿದ ಮಾತ್ರಕ್ಕೆ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದು ಸಂವಿಧಾನ ವಿರೋಧಿ ನಡೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ವಿರುದ್ಧ ಯಾವುದೇ ಆತುರದ ಕ್ರಮ ಜರುಗಿಸದಂತೆ ತಾಕೀತು ಮಾಡಿದ ಕೋರ್ಟ್, ಪ್ರಕರಣಕ್ಕೆ ತಡೆ ಕೋರಿದ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ನಿರ್ದೇಶನ ನೀಡಿದೆ.