ಮಂಗಳೂರು: ಉದ್ಯಮಿ ನಿಗೂಢ ಕಣ್ಮರೆಯ ಹಿಂದೆ ಕಾಣದ ಕೈ ಯಾವುದು.? ಕೋಟಿ,ಕೋಟಿಗೆ ಡಿಮ್ಯಾಂಡ್ ಮಾಡಿದವರು ಯಾರು.?

ಕರಾವಳಿ

ಮಂಗಳೂರು: ವಿವಿಧ ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಉಧ್ಯಮಿ ನಿಗೂಢ ಕಣ್ಮರೆ ಹಿಂದೆ ಹಲವು ಆಯಾಮಗಳು ಗೋಚರಿಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಫುಡಾರಿಯೊಬ್ಬನ ಕರಾಳ ಹಸ್ತ ಕೈಯಾಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಮುಂಜಾನೆ ನಾಲ್ಕು ಗಂಟೆಗೆ ಮನೆಯಿಂದ ಹೊರಟಿದ್ದ ಉದ್ಯಮಿ ತನ್ನ ಮಗಳಿಗೆ ವಾಟ್ಸಾಪ್ ಸಂದೇಶವೊಂದನ್ನು ಕಳುಹಿಸಿದ್ದು, ನಾನು ದೇವನ ಬಳಿಗೆ ಹೋಗುತ್ತೇನೆ ಎಂದು ಹೇಳಿದ್ದರು. ಕೂಳೂರು ಸೇತುವೆ ಬಳಿ ಖಾಸಗಿ ಬಸ್ ವೊಂದಕ್ಕೆ ಇವರು ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದಿದ್ದು ಬಸ್ಸಿನ ಚಾಲಕ ಹಾಗೂ ಉದ್ಯಮಿ ಮಧ್ಯೆ ವಾಗ್ವಾದ ನಡೆದು ಪರಿಸ್ಥಿತಿ ತಿಳಿಯಾದ ನಂತರ ಬಸ್ ಮುಂದಕ್ಕೆ ಚಲಿಸಿದೆ. ಆ ನಂತರ ಕಾರು ಅಲ್ಲೇ ಬಿಟ್ಟು ನಿಗೂಢವಾಗಿ ಕಣ್ಮರೆಯಾಗಿದ್ದಾರೆ.

ಉದ್ಯಮಿಯ ನಿಗೂಢ ಕಣ್ಮರೆ ಹಿಂದೆ ಹಲವು ಆಯಾಮಗಳಿದ್ದು, ಹನಿಟ್ರ್ಯಾಫ್ ಗೆ ಸಿಲುಕಿ ಮನನೊಂದು ಕಣ್ಮರೆಯಾಗಿದ್ದಾರೆ ಅನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗುತ್ತಿದೆ. ಈ ಹನಿಟ್ರ್ಯಾಫ್ ಹಿಂದೆ ಸ್ಥಳೀಯ ಪುಡಾರಿಯೊಬ್ಬನ ಕೈವಾಡವಿದ್ದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಅನ್ನಲಾಗಿದೆ. ಐದು ಕೋಟಿ ರೂಪಾಯಿಗೆ ಡಿಮ್ಯಾಂಡ್ ಇಟ್ಟಿದ್ದು, ಇಲ್ಲವಾದರೆ ಮಹಿಳೆಯನ್ನು ಮದುವೆಯಾಗುವಂತೆ ನಿರಂತರ ಬೆದರಿಕೆ ಹಾಕುತ್ತಿದ್ದರು ಅನ್ನಲಾಗಿದೆ. ಈ ನಡುವೆ 50 ಲಕ್ಷ ರೂಪಾಯಿ ವಹಿವಾಟು ನಡೆದಿದ್ದು, ಅದು ಯಾರ ಪಾಲಾಗಿದೆ ಅನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ. ಈ ಮಾಹಿತಿ ಉದ್ಯಮಿಯ ಕುಟುಂಬಕ್ಕೆ ಗೊತ್ತಾಗಿ ಇದು ದೊಡ್ಡ ರದ್ದಾಂತಕ್ಕೆ ಕಾರಣವಾಗಿತ್ತು. ಮರ್ಯಾದೆಗೆ ಅಂಜಿ ಉದ್ಯಮಿ ಕಣ್ಮರೆಯಾಗಿದ್ದಾರೆ ಅನ್ನಲಾಗಿದೆ. ಈ ಸಂಬಂಧ ಪುಡಾರಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಗುಸು ಗುಸು ಇದೆ. ಈ ಸಂಬಂಧ ಇತರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.

ಉದ್ಯಮಿ ನಿಗೂಢ ಕಣ್ಮರೆಗೆ ಸಂಬಂಧಿಸಿ ಈಗಾಗಲೇ ಐದು ತಂಡಗಳು ಕೂಳೂರು ನದಿಯಲ್ಲಿ ಶೋಧನೆಗೆ ಇಳಿದಿದ್ದು, ಈವರೆಗೂ ಮಾಹಿತಿ ಲಭ್ಯವಾಗಿಲ್ಲ.