ಫಾಝಿಲ್ ನ ಕೊಲ್ಲಿಸಿದ್ದು ನಾವೇ ಎಂದು ಮೈಕ ಕಟ್ಟಿ ಕೂಗಾಡಿದರೂ ತನಿಖೆ ಇಲ್ಲ.!
ಒಂದು ಕ್ಷುಲ್ಲಕ ಪ್ರಕರಣಕ್ಕೆ ಉಪ್ಪು ಖಾರ ಸೇರಿಸಿದರೆ ಏನಾಗುತ್ತೊ ಅದೇ ಆಗಿದೆ ಉಡುಪಿ ವೀಡಿಯೋ ಪ್ರಕರಣ. ಕೇವಲ ಮುಸಲ್ಮಾನ ಯುವತಿಯರು ಚಿತ್ರಿಸಿದ್ದಾರೆ ಅನ್ನುವ ಏಕೈಕ ಕಾರಣಕ್ಕೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಸಂಘಪರಿವಾರದ ಮೂಲಕ ಸಮಾಜದಲ್ಲಿ ಕೋಲಾಹಲ ಎಬ್ಬಿಸಲು ನಡೆಸಿದ ಷಡ್ಯಂತ್ರದ ಭಾಗವಾಗಿತ್ತು ಅಷ್ಟೇ ಉಡುಪಿ ವೀಡಿಯೋ. ಕಾಲೇಜು ಕ್ಯಾಂಪಸ್ಸಿನೊಳಗಡೆ ಮುಗಿದಿದ್ದ ಪ್ರಕರಣವನ್ನು ಎಬಿವಿಪಿ ರಾಜ್ಯವ್ಯಾಪಿ ಸುದ್ದಿ ಮಾಡಿತ್ತು. ತೀರ್ಥಹಳ್ಳಿ ಯಲ್ಲಿ ತಮ್ಮದೇ ಸಂಘಟನೆಯ ನಾಯಕ ಹತ್ತಾರು ವಿದ್ಯಾರ್ಥಿನಿಯರ ಬ್ಲೂಫಿಲಂ ಮಾಡಿ ಬ್ಲಾಕ್ ಮೇಲ್ ಮಾಡಿದಾಗ ತಮ್ಮ ಸಂಘಟನೆಯ ಕಾರ್ಯಕರ್ತನಲ್ಲ ಅನ್ನುವ ಅದೇ ಹಳೇ ಚಾಳಿಯನ್ನು ತೋರಿಸಿತ್ತು. ತೀರ್ಥಹಳ್ಳಿ ವಿಡಿಯೋ ಬಗ್ಗೆ ತುಟಿಕ್ ಪಿಟಿಕ್ ಎನ್ನದ ಎಬಿವಿಪಿ ಉಡುಪಿ ವೀಡಿಯೋ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ.

ಸಂಘಪರಿವಾರದ ಸಂಘಟನೆಯ ಆಟಾಟೋಪ ಏನೇ ಇರಲಿ.. ಆದರೆ ರಾಜ್ಯದ ಕಾಂಗ್ರೆಸ್ ಸರಕಾರ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯಬಾರದಿತ್ತು ಅನ್ನುವುದು ಸಾರ್ವಜನಿಕರ ಅಭಿಪ್ರಾಯ. ರಾಜ್ಯ ಕಾಂಗ್ರೆಸ್ ಸರಕಾರ ಉಡುಪಿ ವೀಡಿಯೋ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದೆ. ರಾಜ್ಯದಲ್ಲಿ ಇಷ್ಟೊಂದು ಗಂಭೀರ ಪ್ರಕರಣವಿದ್ದಾಗ ರಾಜ್ಯ ಸರಕಾರದ ಅಧೀನದ ಸಿಐಡಿ ಯನ್ನು ಟಾಯ್ಲೆಟ್ ಕೆಲಸಕ್ಕೆ ಇಳಿಸುವಷ್ಟು ಸಣ್ಣತನ ತೋರಿಸ ಬಾರದಿತ್ತು ಅನ್ನುವುದು ಇದೀಗ ಎಲ್ಲೆಡೆ ಕೇಳಿ ಬರುತ್ತಿರುವ ವಿಚಾರ.
ಸೌಜನ್ಯ ಅತ್ಯಾಚಾರ ಪ್ರಕರಣ ಹಲವಾರು ವರ್ಷಗಳ ನಂತರ ಮತ್ತೆ ಚರ್ಚೆಯಾಗುತ್ತಿದೆ, ನ್ಯಾಯಕ್ಕಾಗಿ ತಾಯಿ,ತಂದೆ, ಕುಟುಂಬ ಬೀದಿಯಲ್ಲಿದೆ, ಇದು ಯಾವುದೂ ದೊಡ್ಡ ವಿಷಯವಾಗಿ ಕಾಣದ ರಾಜ್ಯ ಸರ್ಕಾರಕ್ಕೆ ಈ ಸಂಘಪರಿವಾರ ಸೃಷ್ಠಿಸಿದ ಕೋಲಾಹಲ ಬಹಳ ಗಂಭೀರವಾಗಿ ಕಂಡದ್ದು ದುರದೃಷ್ಟಕರ.

ಅತ್ತ ಫಾಝಿಲ್ ನ ಕೊಲ್ಲಿಸಿದ್ದು ನಾವೇ ಎಂದು ಮೈಕ ಕಟ್ಟಿ ಕೂಗಿದವನು ರಾಜಾರೋಷವಾಗಿ ಓಡಾಡುತ್ತಿದ್ದಾರೆ, ಅದರ ಬಗ್ಗೆ ಮರು ತನಿಖೆಯಿಲ್ಲ, ಮಸೂದ್ ಕೊಲೆಯ ಬಗ್ಗೆ ಸಿ.ಐ.ಡಿ ತನಿಖೆಯಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆಯೋ ಅಥವಾ ಸಂಘನಿಕೇತನದ ಅನತಿಯಂತೆ ರಾಜ್ಯ ಸರ್ಕಾರ ಕಾರ್ಯಾಚರಿಸುತ್ತಿದೆಯೋ ಸಂಶಯವಾಗುತ್ತಿದೆ.
ರಾಜ್ಯ ಸರ್ಕಾರ ಈ ರೀತಿಯಾಗಿ ಸಂಘಪರಿವಾರದ ಬೆದರಿಕೆಗಳಿಗೆ ಅವರ ಕೋಲಾಹಲಗಳಿಗೆ ಬೆಂಬಲವಾಗಿ ನಿಂತರೆ ಅದರ ಪರಿಣಾಮ ಸರ್ಕಾರ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಅನುಭವಿಸಲಿದೆ ಎಂಬುದು ಜನಸಾಮಾನ್ಯರ ಮಾತು.