ಕಾಂಗ್ರೆಸ್ ಮುಖಂಡ, ಜಿಲ್ಲಾ ವಕ್ಫ್ ಮೆಂಬರ್ ಸೇರಿದಂತೆ 6 ಜನರ ಮೇಲೆ ಎಫ್ ಐ ಆರ್
ಸತತ 24 ಗಂಟೆಗಳ ಕಾರ್ಯಾಚರಣೆ.. ತಣ್ಣೀರುಬಾವಿ ತಂಡ, ಈಶ್ವರ್ ಮಲ್ಪೆ ಸೇರಿದಂತೆ ಎಕ್ಸ್ ಫರ್ಟ್ ಈಜುಪಟುಗಳ ಸತತ ಪ್ರಯತ್ನದ ಬಳಿಕವೂ ನಿಗೂಢತೆ ಸೃಷ್ಟಿಸಿದ್ದ ನಾಪತ್ತೆ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಫಲ್ಗುಣಿ ನದಿಯಲ್ಲಿ ಉದ್ಯಮಿ ಮೃತದೇಹ ಪತ್ತೆಯಾಗಿದೆ.
ಕದ್ರಿಯ ಆಳ್ವಾರಿಸ್ ರಸ್ತೆಯಲ್ಲಿರುವ ಕ್ಲಾಸಿಕ್ ಸಿಗ್ನೇಚರ್ ಅಪಾರ್ಟ್ಮೆಂಟ್ ನಿಂದ ರವಿವಾರ ಬೆಳಗ್ಗಿನ ಜಾವ 3 ಗಂಟೆಯ ಹೊತ್ತಿಗೆ ಹೊರಟು ಕಣ್ಮರೆಯಾಗಿದ್ದ ಉದ್ಯಮಿ ಬೈಕಂಪಾಡಿಯಲ್ಲಿ ಕಾರು ಅಪಘಾತವಾಗಿ, ಕೂಳೂರು ಹಳೇ ಬ್ರಿಡ್ಜ್ ನಲ್ಲಿ ಕಾರು ಪತ್ತೆಯಾಗಿ ನಿಗೂಢ ಕಣ್ಮರೆ ಯಾಗಿದ್ದರು. ತನ್ನ ಕುಟುಂಬದ ವಾಟ್ಸಾಪ್ ಗ್ರೂಪಿಗೂ ಧ್ವನಿಮುದ್ರಿತ ಸಂದೇಶ ಕಳುಹಿಸಿದ್ದರು. ಈ ಪ್ರಕರಣದ ಹಿಂದೆ ಹನಿಟ್ರ್ಯಾಫ್, ಬ್ಲ್ಯಾಕ್ ಮೇಲ್ ತಂತ್ರ ಥಳುಕು ಹಾಕಿದ ಕಾರಣ ಕ್ಷಣಕ್ಕೊಂದು ವಿಚಿತ್ರ ತಿರುವು ಪಡೆದವು.

ಮುಮ್ತಾಜ್ ಅಲಿ ಸಹೋದರ ಹೈದರ್ ಅಲಿ ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಯೊಬ್ಬಳನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆ ಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಸುರತ್ಕಲ್ ಕಾನದ ಮಹಿಳೆ ರೆಹಮತ್, ಕಾಂಗ್ರೆಸ್ ಮುಖಂಡ ಅಬ್ದುಲ್ ಸತ್ತಾರ್, ಜಿಲ್ಲಾ ವಕ್ಫ್ ಮೆಂಬರ್ ಮುಸ್ತಫಾ, ಶಾಫಿ, ಶುಐಬ್, ಸತ್ತಾರ್ ಕಾರು ಚಾಲಕ ಸಿರಾಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಈಗಾಗಲೇ ಈ ತಂಡ 50 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿದ್ದು, ನಿರಂತರವಾಗಿ ಬೆದರಿಸಿ ಇನ್ನೂ 25 ಲಕ್ಷ ರೂಪಾಯಿ ಹಣವನ್ನು ಚೆಕ್ ಮೂಲಕ ಪಡೆದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಉದ್ಯಮಿ ಬ್ಲ್ಯಾಕ್ ಮೇಲ್ ದಂಧೆಯಲ್ಲಿ ಮರಿ ನಾಯಕರ ಕೈವಾಡವಿದ್ದು, ಅದರಲ್ಲಿ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಪಂಚಾತಿಕೆಯಿಂದ ಹಿಡಿದು ಕೊನೆಯವರೆಗೆ ಇದ್ದ ಇಬ್ಬರ ಹೆಸರು ದೂರಿನಲ್ಲಿ ನಾಪತ್ತೆಯಾಗಿರುವುದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಇಬ್ಬರನ್ನು ರಕ್ಷಿಸಲಾಗಿದೆಯಾ? ಅನ್ನುವ ಮಾತುಗಳು ಇದೀಗ ಕೇಳಿ ಬರತೊಡಗಿದೆ.
