ಜೈಲಿನಲ್ಲೇ ಅಡ್ಡೆ.. ದೇಶಾದ್ಯಂತ 700 ಶಾರ್ಪ್ ಶೂಟರ್ ಗಳು..ಬೆಚ್ಚಿಬೀಳಿಸುತ್ತಿದೆ ನಟೋರಿಯಸ್ ಡಾನ್ ಅಸಲಿ ರೂಪ.!
ಸಿದ್ದೀಕಿ ಹತ್ಯೆಯ ಹಿಂದೆ ಖ್ಯಾತ ಬಿಲ್ಡರ್ ಸುಪಾರಿ.?
ಯಾವ ಸಿನೇಮಾ ಸ್ಟಾರ್ ಗೂ ಕಮ್ಮಿಯಿಲ್ಲದ ಲುಕ್! ಮೈ ನವಿರೇಳಿಸುವ, ಕುಣಿಯಬೇಕು ಎಂದು ಪ್ರೇರೇಪಿಸುವ ಪಂಜಾಬಿ ಹಾಡುಗಳ ಅಬ್ಬರ ಮಧ್ಯೆ ಹೂಡಿ ಧರಿಸಿ ಬಾಲಿವುಡ್ ಹೀರೋ ರೀತಿ ಎಂಟ್ರಿ ಕೊಡ್ತಾನೆ ಲಾರೆನ್ಸ್ ಬಿಷ್ಣೋಯಿ. ಇದು ಈತನ ಟ್ರೇಡ್ ಮಾರ್ಕ್. ನೋಡಲು ಸ್ಪುರದ್ರೂಪಿ ಯುವಕ. ಆದರೆ ಈತನದ್ದು ಖತರ್ನಾಕ್ ಕಾಯಕ! ಸುಪಾರಿ ಕಿಲ್ಲಿಂಗ್, ಮಾದಕ ವಸ್ತು ಸೇರಿದಂತೆ ಎರಡು ಡಜನ್ ಗಟ್ಟಲೆ ಕ್ರಿಮಿನಲ್ ಕೇಸ್. ಹನುಮಂತನ ಭಕ್ತ. ಬಲಪಂಥೀಯರ ಭಾಯಿಜಾನ್. ಪೊಲೀಸನ ಮಗ. ಎಲ್ ಎಲ್ ಬಿ ಪದವೀಧರ.ಈತ ಬೇರಾರೂ ಅಲ್ಲ. ದೇಶದಾದ್ಯಂತ ಸುದ್ಧಿಯಲ್ಲಿರುವ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯ್.

ಭಾರತದ ನಟೋರಿಯಸ್ ಗ್ಯಾಂಗ್ ಸ್ಟಾರ್ ಗಳಲ್ಲಿ ಒಬ್ಬನಾಗಿರುವ ಲಾರೆನ್ಸ್ ಬಿಷ್ಣೋಯಿ ಮೂಲತಃ ಹರ್ಯಾಣ ಮೂಲದವ. ವಿದ್ಯಾರ್ಥಿ ದೆಸೆಯಲ್ಲೇ ಕ್ರಿಮಿನಲ್, ಗಲಾಟೆ ಮೂಲಕ ಬೆಳಕಿಗೆ ಬಂದವ. ಕೊಲೆಯತ್ನ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಅನೇಕ ಎಫ್ ಐ ಆರ್ ಕೂಡ ಈತನ ಮೇಲೆ ದಾಖಲಾಗಿತ್ತು. ಪಂಜಾಬ್ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ಪದವೀಧರನಾಗಿದ್ದ . ಅಷ್ಟೇ ಯಾಕೆ ಅವನ ತಂದೆ 1992 ರಲ್ಲಿ ಹರ್ಯಾಣ ಪೊಲೀಸ್ನಲ್ಲಿ 5 ವರ್ಷಗಳ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಂದರೆ ಪೊಲೀಸ್ ಮಗನಾಗಿ ಬೆಳೆದ ಬಿಷ್ಣೋಯ್, ಎಲ್ಎಲ್ಬಿ ಪದವಿ ಪಡೆದ ಬಳಿಕ ಇಳಿದದ್ದು ಅಕ್ರಮ ಚಟುವಟಿಕೆಗಳಲ್ಲಿ ಎಂಬುದು ವಿಶೇಷ.
ಕಾಲೇಜಿನಲ್ಲಿದ್ದಾಗಲೇ ವಿದ್ಯಾರ್ಥಿ ಸಂಘದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಬಿಷ್ಣೋಯ್ ವಿರುದ್ದ ಸಣ್ಣ ಪುಟ್ಟ ಪ್ರಕರಣಗಳು ದಾಖಲಾಗಿದ್ದವು. ಅದಾಗಲೇ ಹೊಸ ಹವಾ ಸೃಷ್ಟಿಸಿಕೊಂಡಿದ್ದ ಬಿಷ್ಣೋಯ್ ಆ ಬಳಿಕ ಗ್ಯಾಂಗ್ ಕಟ್ಟಿಕೊಂಡಿದ್ದ. ಅಲ್ಲದೆ ಮದ್ಯ ಮಾಫಿಯಾ, ಪಂಜಾಬಿ ಗಾಯಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳಿಂದ ಹಣವನ್ನು ಸುಲಿಗೆ ಮಾಡಲಾರಂಭಿಸಿದ.

ಹೀಗೆ ಪಂಜಾಬ್-ಹರ್ಯಾಣ ಭಾಗದಲ್ಲಿ ಲಾರೆನ್ಸ್ ಬಿಷ್ಣೋಯ್ ಡಾನ್ ಆಗಿ ಮೆರೆಯಲಾರಂಭಿಸಿದ. ಹೀಗೆ ಗ್ಯಾಂಗ್‌ಸ್ಟರ್ ಆಗಿ ಗುರುತಿಸಿಕೊಂಡ ಬಿಷ್ಣೋಯ್ ನೆಟ್ವರ್ಕ್ ಅಂತಾರಾಷ್ಟ್ರೀಯ ಮಟ್ಟಕ್ಕೂ ತಲುಪಿತ್ತು. ಅಂದರೆ ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶ, ಅಲ್ಲದೆ ಕೆನಡಾದಲ್ಲೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದ.
ಆದರೆ ಲಾರೆನ್ಸ್ ಬಿಷ್ಣೋಯ್ಗೆ ಸಂಪೂರ್ಣ ಮೀಡಿಯಾ ಕವರೇಜ್ ಸಿಕ್ಕಿದ್ದು ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರಕರಣದಲ್ಲಿ ಎಂಬುದು ವಿಶೇಷ. 2018 ರಲ್ಲಿ ಕೃಷ್ಣ ಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿದ್ದ. ಬಿಷ್ಣೋಯ್ ಸಮುದಾಯದವರು ಕೃಷ್ಣ ಮೃಗವನ್ನು ಪವಿತ್ರ ಎಂದು ಪರಿಗಣಿಸುತ್ತಾರೆ. ಹೀಗಾಗಿ ಕೃಷ್ಣ ಮೃಗ ಕೊಂದ ಸಲ್ಮಾನ್ನನ್ನು ನಾನು ಬಿಡುವುದಿಲ್ಲ, ಮುಗಿಸುತ್ತೇನೆ ಎಂದು ನ್ಯಾಯಾಲಯದ ಮುಂದೆಯೇ ಹೇಳಿದ್ದ. ಸಲ್ಮಾನ್ ಖಾನ್ ನಿವಾಸದೆದುರು ಈತನ ಹುಡುಗರು ಗಾಳಿಯಲ್ಲಿ ಗುಂಡು ಹಾರಿಸಿ ದೊಡ್ಡ ಮಟ್ಟಿನ ಸಂಚಲನ ಸೃಷ್ಟಿಸಿದ್ದರು. ಇಂತಹ ಒಬ್ಬ ನಟೋರಿಯಸ್ ಡಾನ್ ಇದ್ದಾನೆ ಅನ್ನುವುದು ಮುಂಬೈಗರಿಗೆ ತಿಳಿದದ್ದು ಆವಾಗಲೇ.

ಆದರೆ ಯಾವಾಗ ತನ್ನ ಸಾಮ್ರಾಜ್ಯ ಅಂತಾರಾಷ್ಟ್ರೀಯ ಮಟ್ಟದವರೆಗೆ ಬೆಳೆಯಿತೋ ಲಾರೆನ್ಸ್ ಬಿಷ್ಣೋಯ್ ಪಂಜಾಬ್ನಲ್ಲಿ ಮಾತ್ರವಲ್ಲದೆ, ಮುಂಬೈಗೂ ತನ್ನ ಕುಕೃತ್ಯಗಳನ್ನು ವಿಸ್ತರಿಸಿಕೊಂಡಿದ್ದ. ಅದರಲ್ಲೂ ಮುಖ್ಯವಾಗಿ ಶಸ್ತ್ರಾಸ್ತಗಳಂತಹ ದೊಡ್ಡ ದೊಡ್ಡ ಡೀಲ್ಗಳ ಹಿಂದೆ ಲಾರೆನ್ಸ್ ಹೆಸರು ಕೇಳಿ ಬಂದವು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲಾರೆನ್ಸ್ ಬಿಷ್ಣೋಯ್ನನ್ನು ಬಂಧಿಸಿದ್ದರು. ಅಲ್ಲದೆ ಈತನ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕರಣವನ್ನು ವಿಧಿಸಿ ಇದೀಗ ತಿಹಾರ್ ಜೈಲಿನಲ್ಲಿಟ್ಟಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಜೈಲು ಪಾಲಾಗಿದ್ದರೂ ತನ್ನ ನೆಟ್ವರ್ಕ್ ಮಾತ್ರ ಮುಂದುರೆದಿತ್ತು ಎಂಬುದಕ್ಕೆ ಸಿಧು ಮೂಸೆವಾಲ ಅವರ ಹತ್ಯೆ ಜೊತೆ ಆತನ ಹೆಸರು ಥಳುಕು ಹಾಕಿಕೊಂಡಿರುವುದೇ ಸಾಕ್ಷಿ. ಕೆಲ ಮೂಲಗಳ ಮಾಹಿತಿ ಪ್ರಕಾರ ಜೈಲಿನಿಂದಲೇ ಬಿಷ್ಣೋಯ್ ವಾಟ್ಸ್ಆ್ಯಪ್ ಮುಖಾಂತರ ತನ್ನ ಗ್ಯಾಂಗ್ ಅನ್ನು ನಿಯಂತ್ರಿಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಇದರ ಮುಂದುವರೆದ ಭಾಗ ಸಿಧು ಮೂಸೆವಾಲ ಅವರ ಹತ್ಯೆ ಎನ್ನಲಾಗಿದೆ.
ಯಾವಾಗ ಲಾರೆನ್ಸ್ ಬಿಷ್ಣೋಯ್ ಜೈಲು ಪಾಲಾದರೋ, ಆ ಬಳಿಕ ಗ್ಯಾಂಗ್ನ ಉಸ್ತುವಾರಿಯನ್ನು ಬಲಗೈ ಬಂಟ ಸತ್ವಿಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ನೋಡಿಕೊಳ್ಳುತ್ತಿದ್ದಾನೆ. ಅದು ಕೂಡ ದೂರದ ಕೆನಡಾದಲ್ಲಿ ಕೂತು ಎಂಬುದು ವಿಶೇಷ.
ಇನ್ನು ಲಾರೆನ್ಸ್ ಬಿಷ್ಣೋಯ್ ಕಟ್ಟಿಕೊಂಡಿರುವ ಸಾಮ್ರಾಜ್ಯದಲ್ಲಿ ಸುಮಾರು 700 ಮಂದಿ ಗ್ಯಾಂಗ್ಸ್ಟರ್ಗಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅಂದರೆ ಒಂದು ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಲ್ಲ ಸಾಮರ್ಥ್ಯದ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಈ ಮೂಲಕ ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶ, ಕೆನಡಾದಲ್ಲಿ ತನ್ನ ಭೂಗತ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಭೂಗತ ಲೋಕದಲ್ಲಿ ಡಾನ್ ಆಗಿ ಮೆರೆಯುತ್ತಿದ್ದಾನೆ ಲಾರೆನ್ಸ್ ಬಿಷ್ಣೋಯ್.
ಪಂಜಾಬಿ ಗಾಯಕ-ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರನ್ನು 2022 ರಲ್ಲಿ ದುಷ್ಕರ್ಮಿಗಳು ಶೂಟ್ ಮಾಡಿದ್ದರು. ಮೊದಲೇ ರೂಪಿಸಿದ್ದ ಪ್ಲ್ಯಾನ್ನಂತೆ ಥಾರ್ ಜೀಪ್ನಲ್ಲಿ ಬರುತ್ತಿದ್ದ ಸಿಧು ಮೂಸೆವಾಲರನ್ನು ಕಾದು ಕುತಿದಿದ್ದ ಗ್ಯಾಂಗ್, ಜನನಿಬಿಡ ಪ್ರದೇಶದಲ್ಲೇ 30 ಬಾರಿ ಫೈರಿಂಗ್ ಮಾಡುವ ಮೂಲಕ ಗುಂಡಿಕ್ಕಿ ಕೊಂದಿದ್ದರು. ಹಾಡುಹಗಲೇ ಇಂತಹದೊಂದು ಭೀಕರ ಹತ್ಯೆಯ ಬಳಿಕ ಕೊಲೆಯ ಹಿಂದೆ ಇಬ್ಬರ ಹೆಸರು ಥಳುಕು ಹಾಕಿಕೊಂಡಿತು. ಅವರಲ್ಲಿ ಮೊದಲಿಗರೆಂದರೆ ಲಾರೆನ್ಸ್ ಬಿಷ್ಣೋಯ್, ಮತ್ತೊಬ್ಬರು ಗೋಲ್ಡಿ ಬ್ರಾರ್.
ವಿಶೇಷ ಎಂದರೆ ಗೋಲ್ಡಿ ಬ್ರಾರ್ ಭಾರತದಲ್ಲಿಲ್ಲ. ಬದಲಾಗಿ ಕೆನಡಾದಿಂದಲೇ ಭಾರತದಲ್ಲಿ ಕುಕೃತ್ಯಗಳನ್ನು ನಡೆಸುತ್ತಿದ್ದಾನೆ. ಇನ್ನು ಲಾರೆನ್ಸ್ ಬಿಷ್ಣೋಯ್ ಸಿಧು ಮೂಸೆವಾಲ ಹತ್ಯೆ ನಡೆಯುವಾಗ ಜೈಲಿನಲ್ಲಿದ್ದ. ಅಂದರೆ ಲಾರೆನ್ಸ್ ಬಿಷ್ಣೋಯ್ ಜೈಲಿನಿಂದಲೇ ಮೂಸೆವಾಲ ಹತ್ಯೆಗೆ ಸ್ಕೆಚ್ ರೂಪಿಸಿದ್ರು. ಸಿದ್ದು ಮೂಸೆವಾಲಾ ಪಾಪ್ಯುಲರ್ ಸಿಂಗರ್ ಆಗಿದ್ದರು. ಪ್ರತಿಯೊಂದು ಹಾಡಿನಲ್ಲಿ ಗನ್ ಸಂಸ್ಕೃತಿ ಹುರಿದುಂಬಿಸುತ್ತಾರೆ ಅನ್ನುವ ಆರೋಪ ಇತ್ತು. ಅಕಾಲಿ ದಳ ಶಿರೋಮಣಿ ಮುಖಂಡ ವಿದ್ದು ಕೇರ್ ಹತ್ಯೆಯಲ್ಲಿ ಸಿದ್ದು ಮೂಸೆವಾಲಾ ಮ್ಯಾನೇಜರ್ ಹೆಸರು ಥಳಕು ಹಾಕಿಕೊಂಡಿತ್ತು. ವಿದ್ದು ಕೇರ್ ಲಾರೆನ್ಸ್ ಬಿಷ್ಣೋಯ್ ಆಪ್ತನಾಗಿದ್ದ. ಈ ಹತ್ಯೆಯಲ್ಲಿ ಸಿದ್ದು ಮೂಸೆವಾಲಾ ಕೈವಾಡ ಇರುವುದಾಗಿ ಶಂಕಿಸಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಿದ್ದು ಮೂಸೆವಾಲಾ ನನ್ನು ಹತ್ಯೆ ಮಾಡಿ ರಿವೇಂಜ್ ತೀರಿಸಿರುವುದಾಗಿ ಹೇಳಿಕೊಂಡಿತ್ತು.
ಖಲಿಸ್ತಾನ್ ಹೋರಾಟಗಾರರ ಜೊತೆ ಗುರುತಿಸಿಕೊಂಡಿದ್ದ ಉಗ್ರ ಸುಖ್ ದೂಲ್ ಸಿಂಗ್ ನನ್ನು ಕೆನಡಾದಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು. ಈ ಹತ್ಯೆಯನ್ನು ತನ್ನ ಬಂಟರು ಮಾಡಿರುವುದಾಗಿ ಲಾರೆನ್ಸ್ ಬಿಷ್ಣೋಯಿ ಎದೆತಟ್ಟಿ ಹೇಳಿದ್ದ.
ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯ ತಿಹಾರ್ ಜೈಲು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಹೊಸ ಅಡ್ಡಾ.. ಜೊತೆಯಲ್ಲೇ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಅಹಮದಾಬಾದ್‌ನಲ್ಲಿ ಈತನನ್ನು ಬಂಧಿಸಿದ್ದರು. ಲಾರೆನ್ಸ್ ಬಿಷ್ಣೋಯಿ ತಿಹಾರ್ ಜೈಲಿನಲ್ಲಿದ್ದರೂ ಕೂಡಾ ಸೂಪರ್ ಆಕ್ಟೀವ್! ಪಂಜಾಬ್ ರಾಜ್ಯಾದ್ಯಂತ ಈತನ ಪ್ರಭಾವ ಇದೆ. ಈತನ ಸಾಮ್ರಾಜ್ಯ ಪಂಜಾಬ್ ಆಚೆಗೂ ಹಲವು ದೇಶಗಳಲ್ಲಿ ಹರಡಿದೆ. ಖಲಿಸ್ತಾನ್ ಉಗ್ರ ಸುಖ್‌ದೂಲ್ ಸಿಂಗ್‌ನನ್ನ ಹೊಡೆದು ಹಾಕಿಸಿದ ಲಾರೆನ್ಸ್, ‘ನನ್ನ ಶತ್ರುಗಳು ಯಾವುದೇ ದೇಶದಲ್ಲಿ ಅಡಗಿದ್ರೂ ಬಿಡಲ್ಲ’ ಅಂತಾ ಅಬ್ಬರಿಸಿದ್ದ! ಇದು ಕೇವಲ ಬೆದರಿಕೆ ಅಷ್ಟೇ ಅಲ್ಲ, ಆತನ ಸಾಮರ್ಥ್ಯ ಕೂಡಾ. ತನ್ನ ಪಡೆಯನ್ನ ಆಯಕಟ್ಟಿನ ಸ್ಥಳಗಳಲ್ಲಿ ಇಟ್ಟಿದ್ದಾನೆ ಲಾರೆನ್ಸ್..
ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳು, ಗಣ್ಯರು.. ಹೀಗೆ ಹಲವರು ಈತನ ನೆಟ್‌ವರ್ಕ್‌ನಲ್ಲಿ ಇದ್ದಾರೆ ಅನ್ನೋ ಮಾಹಿತಿ ಇದೆ. ಆದರೆ, ಈತ ತನ್ನ ಪ್ರತಿಯೊಂದು ನಡೆಯನ್ನೂ ನಿಗೂಢವಾಗಿಯೇ ಅನುಸರಿಸುತ್ತಾನೆ.
ಇದೀಗ ಮುಂಬೈಯ ಖ್ಯಾತ ರಾಜಕಾರಣಿ ಬಾಬಾ ಸಿದ್ದೀಕಿ ಹತ್ಯೆಯ ಹೊಣೆಯನ್ನು ತಾನೇ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬಾಬಾ ಸಿದ್ದೀಕಿ ಹತ್ಯೆಯ ಹಿಂದೆ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯಿ ಕೈವಾಡ ಇರುವುದನ್ನು ದೃಡಪಡಿಸಿದ್ದಾರೆ. ಆದರೆ ಈ ಹತ್ಯೆಗೆ ಸುಪಾರಿ ಕೊಟ್ಟವರು ಯಾರು? ಅನ್ನುವ ಬಗ್ಗೆ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಮುಂಬೈನ ಖ್ಯಾತ ಬಿಲ್ಡರ್ ವೊಬ್ಬರು ಸುಪಾರಿ ಕೊಟ್ಟು ಕೊಲ್ಲಿಸಿದ್ದಾರೆ ಅನ್ನುವ ಮಾಹಿತಿ ಹೊರಬರುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ. ಇದರ ಜೊತೆಗೆ ಬಾಲಿವುಡ್ ಗೂ ಈ ಹತ್ಯೆಗೂ ಲಿಂಕ್ ಇದೆಯಾ ಅನ್ನುವ ಬಗ್ಗೆಯೂ ತನಿಖೆ ನಡೆಯುತ್ತಿರುವುದಾಗಿ ವರದಿಗಳು ತಿಳಿಸಿವೆ.
