ಗೋವುಗಳ ಕಳ್ಳಸಾಗಾಟ ನಡೆಸುತ್ತಿದ್ದಾರೆ ಎಂಬ ಸುಳ್ಳು ದೂರಿನಲ್ಲಿ ಇಬ್ಬರನ್ನು ಸಿಲುಕಿಸಿದ ಪ್ರಕರಣ ಸಂಬಂಧ ಮೂವರು ಪೊಲೀಸ್ ಸಿಬ್ಬಂದಿ ಮತ್ತು ‘ಗೋ ರಕ್ಷಕ’ ಸೇರಿ ಇತರ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲು ಗುಜರಾತ್‌ನ ನ್ಯಾಯಾಲಯವೊಂದು ಆದೇಶಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪರ್ವೇಜ್ ಅಹಮ್ಮದ್ ಮಾಳವೀಯ ಅವರು ಮಂಗಳವಾರ, ಗೋವುಗಳ ಮಾಲೀಕ ಇಲಿಯಾಸ್ ದೇವಾಳ್ ಮತ್ತು ಚಾಲಕ ನಾಜಿರ್ ಮಲಿಕ್ ಅವರನ್ನು ಖುಲಾಸೆಗೊಳಿಸಿದರು.
ಆರೋಪಿಗಳು ಗೋವುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದರು ಎಂದು ಸಾಬೀತು ಮಾಡುವ ಯಾವುದೇ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ಒದಗಿಸಿಲ್ಲ ಎಂದು ಕೋರ್ಟ್ ಈ ಸಂದರ್ಭದಲ್ಲಿ ಹೇಳಿತು.
ಸುಳ್ಳು ಪ್ರಕರಣ ದಾಖಲಿಸಿರುವುದಕ್ಕಾಗಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ಗಳಾದ ರಮೇಶ್ ನರ್ವತ್ ಸಿನ್ಹ ಮತ್ತು ಶಂಕರ್ ಸಿನ್ಹ ಮತ್ತು ಸಬ್-ಇನ್‌ಸ್ಪೆಕ್ಟರ್ ಎಂ.ಎಸ್.ಮುನಿಯಾ ಮತ್ತು ಸಾಕ್ಷಿದಾರರಾದ ಮರ್ಗೇಶ್ ಸೋನಿ ಮತ್ತು ದರ್ಶನ್ ಸೋನಿ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 248ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಕೋರ್ಟ್ ಸೂಚಿಸಿತು. ಪ್ರಕರಣದಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿತು.
2022ರ ಜುಲೈನಲ್ಲಿ ಎಮ್ಮೆ, ಎಮ್ಮೆಯ ಕರು ಮತ್ತು ಜರ್ಸಿ ದನವನ್ನು ಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಲಾಗಿತ್ತು. ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ ಅವರು ಗೋವುಗಳ ಜಾತ್ರೆಗೆ ಅವುಗಳನ್ನು ಕೊಂಡೊಯ್ಯುತ್ತಿದ್ದರು ಎಂಬುದು ವಿಚಾರಣೆ ವೇಳೆ ದೃಢಪಟ್ಟಿದೆ.