ಅಧಿಕಾರದ ಲಾಲಸೆಗೆ ಚಡ್ಡಿ ದೋಸ್ತ್ ಗಳೇ ಖೆಡ್ಡಾ ತೋಡಿಬಿಟ್ರಾ..? ಮುಮ್ತಾಝ್ ಅಲಿ ಸುಸೈಡ್ ಬಗ್ಗೆ ಮೊಹಿದ್ದೀನ್ ಬಾವಾ ಹೀಗಂದಿದ್ದೇಕೆ.?
ರಾಜ್ಯದಲ್ಲಿ ಭಾರೀ ಸಂಚಲನಕ್ಕೆ, ಮುಸ್ಲಿಂ ಸಮಾಜದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಮುಮ್ತಾಜ್ ಅಲಿ ಸುಸೈಡ್ ಮಿಸ್ಟರಿ ಬಗ್ಗೆ ಕುಟುಂಬಸ್ಥರು ಈವರೆಗೂ ಮೌನಕ್ಕೆ ಶರಣಾಗಿದ್ದು, ಇದೀಗ ಖುದ್ದು ಮುಮ್ತಾಜ್ ಅಲಿ ಸಹೋದರ, ಮಾಜಿ ಶಾಸಕ ಮೊಯ್ದಿನ್ ಬಾವಾ ಖಾಸಗಿ ಮಾಧ್ಯಮವೊಂದರಲ್ಲಿ ತನ್ನ ಮನಸ್ಸಿನಾಳವನ್ನು ಪೂರ್ತಿ ಬಿಚ್ಚಿಟ್ಟಿದ್ದಾರೆ. ಈವರೆಗೂ ಈ ಸುಸೈಡ್ ಹಿಂದಿನ ಇಬ್ಬರು ಹೈ ಪ್ರೊಫೈಲ್ ಬ್ಯಾರಿಗಳ ಹೆಸರು ಅಂತೆ ಕಂತೆ ರೀತಿಯಲ್ಲಿ ಓಡಾಡುತ್ತಿದ್ದರೂ ಮಾಧ್ಯಮವೊಂದರಲ್ಲಿ ಮೊಹಿದ್ದೀನ್ ಬಾವಾ ಅವರು ಆ ಇಬ್ಬರ ಹೆಸರನ್ನು ರಿವೀಲ್ ಮಾಡುವ ಮೂಲಕ ಸುಸೈಡ್ ಮಿಸ್ಟರಿ ಹಿಂದೆ ಬೇರೆಯದ್ದೇ ಆಯಾಮ ಇರುವುದು ಇದೀಗ ದೃಢಪಟ್ಟಿದೆ.
ಕೃಷ್ಣಾಪುರ ಜಮಾಅತ್ ಕಮಿಟಿಯೊಳಗೆ ನಡೆಯುತ್ತಿದ್ದ ಅಧಿಕಾರದ ಮಸಲತ್ತು, ಹನಿಟ್ರ್ಯಾಪ್ ರೂವಾರಿ ರೆಹಮತ್ ಳನ್ನು ಯೂಸ್ ಮಾಡಿಕೊಂಡು ನಡೆಸಿದ ಸಂಚು ಎಲ್ಲವೂ ಜಗಜ್ಜಾಹೀರ. ಮಾಡಿದ ಕರ್ಮಕ್ಕೆ ಜೈಲುಪಾಲು ಆಗಿರುವುದು ಎಲ್ಲವೂ ತಿಳಿದ ವಿಚಾರ. ಇದಾದ ನಂತರ ತನಿಖಾಧಿಕಾರಿಗಳು ಇಬ್ಬರು ಹೈ ಪ್ರೊಫೈಲ್ ಕಾ..ಕಾ.. ಗಳಿಗೆ ನೋಟಿಸ್ ನೀಡಿ ಬುಲಾವ್ ನೀಡಿರುವುದು ಕೂಡ ತಿಳಿದ ವಿಚಾರವೇ. ಇದರ ನಡುವೆಯೇ ಅಧಿಕಾರಸ್ಥ ದೊಡ್ಡ ಬ್ಯಾರಿಯೊಬ್ಬರ ನಿಕಟವರ್ತಿಯೊಬ್ಬರು ವೈರಲ್ ಮಾಡಿರುವುದು ದೊಡ್ಡ ಅಪರಾಧವೇನಲ್ಲ. ನಿಮ್ಮ ಬೆನ್ನಿಗೆ ನಾನಿದ್ದೇನೆ ಅನ್ನುವ ಅಭಯ ನೀಡಿರುವ ವಿಚಾರವೂ ಗುಸು ಗುಸು ಕೇಳಿ ಬಂದಿತ್ತು.
ಇದೀಗ ಮುಮ್ತಾಜ್ ಅಲಿಯವರ ಸಹೋದರ, ಮಾಜಿ ಶಾಸಕ ಮೊಹಿದ್ದೀನ್ ಬಾವಾ ಅವರೇ ಮುಮ್ತಾಜ್ ಅಲಿ ಸುಸೈಡ್ ಹಿಂದೆ ವಕ್ಫ್ ಇಲಾಖೆಯ ಮಾಜಿ, ಹಾಲಿ ಅಧ್ಯಕ್ಷರ ಕೈವಾಡ ಇರುವುದಾಗಿ ಬಹಿರಂಗವಾಗಿಯೇ ಮಾಧ್ಯಮವೊಂದರಲ್ಲಿ ಅಲವತ್ತುಕೊಂಡಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೈ ಪ್ರೊಫೈಲ್ ಬ್ಯಾರಿಗಳ ಎದೆಯಲ್ಲೂ ಢವ ಢವ ಶುರುವಾಗಿದೆ.

ಮುಮ್ತಾಜ್ ಅಲಿ ವೈಯುಕ್ತಿಕವಾಗಿ ಸಾಧು ಸ್ವಭಾವದವರು, ಎಲ್ಲರೊಂದಿಗೂ ಆತ್ಮೀಯತೆ ಹೊಂದಿದ್ದ ವ್ಯಕ್ತಿಯಾಗಿದ್ದರು. ಮುಸ್ಲಿಂ ಸಮುದಾಯದ ತಳಮಳ, ದೌರ್ಜನ್ಯ ದ ಸಂದರ್ಭ ಹಿಂದೆ ಮುಂದೆ ನೋಡದೆ ನ್ಯಾಯದ ಪರವಾಗಿ ಧ್ವನಿ ಎತ್ತುತ್ತಿದ್ದರು. ಇದೇ ಕಾರಣದಿಂದ ಮೊಹಿದ್ದೀನ್ ಬಾವಾ, ಬಿ.ಎಂ ಫಾರೂಕ್ ಗಿಂತ ಮುಮ್ತಾಜ್ ಅಲಿ ಯೊಂದಿಗೆ ಸಮುದಾಯ ಹೆಚ್ಚಿನ ನಿರೀಕ್ಷೆ ಹೊಂದಿತ್ತು. ಆ ನಿರೀಕ್ಷೆಯನ್ನು ಯಾವತ್ತೂ ಹುಸಿ ಮಾಡಿರಲಿಲ್ಲ . ಇನ್ನು ಧಾರ್ಮಿಕ ರಂಗದಲ್ಲಿ ಉಮರಾ ನಾಯಕರಾಗಿ ಮಿಂಚಿ ಖ್ಯಾತ ಮುಸ್ಲಿಂ ಧಾರ್ಮಿಕ ಪಂಡಿತರೊಂದಿಗೂ ಅತ್ಯಂತ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಮುಮ್ತಾಜ್ ಅಲಿ ಯವರ ಚುರುಕುತನ, ಕ್ರಿಯಾಶೀಲತೆ ಬಹಳ ಬೇಗವೇ ಅವರನ್ನು ಸಮುದಾಯದ ನಾಯಕರಾಗಿ ಗುರುತಿಸುವಂತೆ ಮಾಡಿತ್ತು. ಕರಾವಳಿ ಭಾಗದ ಮುಸ್ಲಿಂ ಸಮುದಾಯದ ಅಗ್ರಗಣ್ಯ ಸಂಸ್ಥೆಯಾದ ಮುಸ್ಲಿಂ ಸೆಂಟ್ರಲ್ ಕಮಿಟಿಗೂ ಆಲಿ ಯವರೇ ಭವಿಷ್ಯದ ಅಧ್ಯಕ್ಷ ಅನ್ನುವ ರೀತಿಯ ಇಮೇಜ್ ಬಿಲ್ಡಪ್ ಆಗಿತ್ತು. ಆದರೆ ಮುಮ್ತಾಜ್ ಅಲಿ ಯವರ ಏಳಿಗೆಯನ್ನು ಸಹಿಸದ ಅವರ ಜೊತೆಗಿದ್ದ ಚಡ್ಡಿ ದೋಸ್ತ್ ಗಳೇ ಅವರಿಗೆ ಖೆಡ್ಡಾ ತೋಡಿಸಿ ಆತ್ಮಹತ್ಯೆಗೈಯುವುದಕ್ಕೂ ಇವರ ಪಾತ್ರವೂ ಒಂದು ಕಾರಣವಿದೆ ಅನ್ನುವುದು ಮೊಹಿದ್ದೀನ್ ಬಾವಾ ಅವರ ಅಭಿಮತ. ಅದನ್ನು ಸ್ಪಷ್ಟವಾಗಿಯೇ ಮಾಧ್ಯಮದ ಮುಂದೆ ಹೇಳಿದ್ದಾರೆ. ಬಾವಾ ಹೇಳಿದ ಆ ಇಬ್ಬರು ಬ್ಯಾರಿ ಕಾಕಾ ಗಳು ಮುಮ್ತಾಜ್ ಅಲಿಯವರೊಂದಿಗೂ, ಅವರ ಕುಟುಂಬದವರೊಂದಿಗೂ ಅತ್ಯಂತ ಹೆಚ್ಚು ಆತ್ಮೀಯ ಒಡನಾಟ ಹೊಂದಿದವರು. ಮೇಲಾಗಿ ಚಡ್ಡಿ ದೋಸ್ತ್ ಗಳು. ಮುಮ್ತಾಜ್ ಅಲಿ ಮನೆಯಲ್ಲಿ ನಡೆಯುತ್ತಿದ್ದ ಪ್ರೋಗ್ರಾಂ, ಪಾರ್ಟಿ ಗಳಿಗೆ ಇವರಿಬ್ಬರೂ ಖಾಯಂ ಅತಿಥಿಯಾಗಿದ್ದರು. ಜಿಲ್ಲೆಗೆ ಮಂತ್ರಿ ಮಾಗಧರು ಯಾರೂ ಬಂದಾಗಲೂ ಮುಮ್ತಾಜ್ ಅಲಿ ಜೊತೆ ಥಳುಕು ಹಾಕಿಕೊಳ್ಳುತ್ತಿದ್ದರು. ಮೊಹಿದ್ದೀನ್ ಬಾವಾ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಜೆಡಿಎಸ್ ನಿಂದ ಸ್ಪರ್ಧಿಸಿದಾಗಲೂ ಅವರ ಜೊತೆ ಗಟ್ಟಿಯಾಗಿ ನಿಂತಿದ್ದರು. ಇಂತಹ ಆತ್ಮೀಯ ಮಿತ್ರರು ಇನ್ನೊಬ್ಬ ಮಿತ್ರ ಸಂಕಷ್ಟಕ್ಕೆ ಒಳಗಾದಾಗ ಆತನಿಗೆ ನೆರವಾಗುವುದು ಮಾನವೀಯ ಧರ್ಮ. ಅದೂ ಆಗದಿದ್ದರೂ ಸುಮ್ಮನೆ ಬಾಯ್ಮುಚ್ಚಿ ಕುಳಿತುಕೊಂಡು ಬಿಟ್ಟರೂ ಸಮಸ್ಯೆ ಇಲ್ಲ. ಆದರೆ ಇವರು ಆತ್ಮೀಯ ಮಿತ್ರನಿಗೆ ಮಿತ್ರದೋಹ ಎಸಗಿದರು. ಬೆನ್ನಿಗೆ ಚೂರಿ ಹಾಕಿದರು. ಮುಮ್ತಾಜ್ ಅಲಿ ಇಮೇಜ್ ಡೌನ್ ಮಾಡಲು ವೈರಲ್ ಮಾಡಿ ವಿಕೃತ ಸಂತೋಷಪಟ್ಟರು. ಆತ್ಮೀಯರೇ ಡಬ್ಬಲ್ ಗೇಮ್ ಆಡಿದಾಗ ಸಹಜವಾಗಿಯೇ ಮುಮ್ತಾಜ್ ಮಾನಸಿಕ ಜರ್ಜರಿತಗೊಂಡರು. ತಾವೇ ಸಾಕಿದ ಗಿಣಿ ಹದ್ದಾಗಿ ಕುಕ್ಕುತ್ತದೆ ಎಂಬುದನ್ನು ಮುಮ್ತಾಜ್ ಅಲಿ ಕುಟುಂಬ ಕನಸಿನಲ್ಲೂ ಎಣಿಸಿರಲಿಲ್ಲ.

ಹನಿಟ್ರ್ಯಾಪ್ ಟೀಂ ಬಗ್ಗೆ ಸಮುದಾಯ ಪ್ರತಿಕ್ರಿಯಿಸಿದ ರೀತಿ ಹೈ ಪ್ರೊಫೈಲ್ ಬ್ಯಾರಿಗಳ ಬಗ್ಗೆಯೂ ಸಮುದಾಯ ಪ್ರತಿಕ್ರಿಯಿಸದಿರುವುದು ದುರಂತ. ಸಣ್ಣ ಕುಳಗಳು ಮಾತ್ರ ಜೈಲು ಪಾಲಾಗಿದ್ದಾರೆ. ಆದರೆ ದೊಡ್ಡ ಕುಳಗಳನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಆರೋಪಿಗಳಿಗೆ ಸಹಕರಿಸಿದವರು ಕೂಡ ಆರೋಪಿಗಳೇ. ಅದು ಹಾಜಿಯೇ ಆಗಿರಲಿ, ಮಿಲಿಯನೇರೇ ಆಗಿರಲಿ. ಮುಮ್ತಾಜ್ ಅಲಿ ಸುಸೈಡ್ ಹಿಂದೆ ಇಂತಹ ಹಲವಾರು ಆಯಾಮಗಳಿವೆ. ಆದರೆ ಅವು ಯಾವುದೂ ಹೊರಬರುತ್ತಿಲ್ಲ. ಪರೋಕ್ಷವಾಗಿಯೂ ಇದರ ಹಿಂದೆ ಕೈಯಾಡಿಸಿದವರನ್ನು ಕಾನೂನಿನ ಪರಿಧಿಗೆ ತಂದರೆ ಮಾತ್ರ ಒಟ್ಟಾರೆ ಪ್ರಕರಣಕ್ಕೆ ನ್ಯಾಯ ಸಿಗಬಹುದು. ಹನಿಟ್ರ್ಯಾಪ್ ದಂತಹ ಕೆಟ್ಟ ಚಟುವಟಿಕೆಗಳಿಗೆ ಕಡಿವಾಣ ಬೀಳಬಹುದು. ಸಣ್ಣವರಿಗೆ ಅನ್ವಯವಾಗುವ ನ್ಯಾಯ ದೊಡ್ಡವರಿಗೆ ಅನ್ವಯವಾಗದಿರುವುದು. ಅದು ಕೂಡ ಪ್ರತಿಷ್ಠಿತ, ರಾಜಕೀಯ ಪ್ರಭಾವಶಾಲಿ ಕುಟುಂಬಕ್ಕೂ ಸಾಧ್ಯವಾಗದೆ ಇರುವುದು ದೊಡ್ಡ ದೌರ್ಭಾಗ್ಯವೇ ಸರಿ .ಇನ್ನು ಸಾಮಾನ್ಯರ ಗತಿಯೇನು?
