ಜಗನ್‌ಮೋಹನ್ ರೆಡ್ಡಿ ಹಾಗೂ ಸೋದರಿ ಕಾಂಗ್ರೆಸ್‌ನ ವೈ.ಎಸ್. ಶರ್ಮಿಳಾ ರೆಡ್ಡಿ ನಡುವೆ ದಾಯಾದಿ ಕಲಹ

ರಾಷ್ಟ್ರೀಯ

ಬೆಂಗಳೂರಿನ ಯಲಹಂಕದಲ್ಲಿರುವ 20 ಎಕರೆ, ಸರಸ್ವತಿ ಪವರ್‌ ಹಾಗೂ ಇತರ ಕಂಪನಿಗಳಲ್ಲಿರುವ ಷೇರುಗಳ ಹಂಚಿಕೆ ಕುರಿತಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ ರೆಡ್ಡಿ ಹಾಗೂ ಸೋದರಿ ಕಾಂಗ್ರೆಸ್‌ನ ವೈ.ಎಸ್. ಶರ್ಮಿಳಾ ರೆಡ್ಡಿ ನಡುವೆ ದಾಯಾದಿ ಕಲಹ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ದಿ. ವೈ.ಎಸ್. ರಾಜಶೇಖರ ರೆಡ್ಡಿ ಅವರ ಮಕ್ಕಳಾದ ಈ ಇಬ್ಬರ ನಡುವಿನ ಪತ್ರ ಸಮರದಲ್ಲಿ, ತಂದೆಯ ನೆನಪುಗಳೊಂದಿಗೆ, ವೈಯಕ್ತಿ ಆರೋಪ ಹಾಗೂ ಪ್ರತ್ಯಾರೋಪಗಳು ಚರ್ಚೆಗೆ ಗ್ರಾಸವಾಗಿದೆ.

2012ರ ವಿಧಾನಸಭಾ ಚುನಾವಣೆಯಲ್ಲಿ ಜಗನ್‌ ಗೆಲುವಿಗೆ ಶರ್ಮಿಳಾ ಪಣ ತೊಟ್ಟು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. 2019ರ ಪೂರ್ವದಲ್ಲೂ ಶರ್ಮಿಳಾ ಅವರು ವೈಎಸ್‌ಆರ್‌ಸಿಪಿ ಪರವಾಗಿ ಪ್ರಚಾರ ನಡೆಸಿದ್ದರು. ಈ ಎರಡೂ ಬಾರಿ ಜಗನ್‌ಗೆ ಗೆಲುವು ಲಭಿಸಿತ್ತು. ಆದರೆ ಸರಸ್ವತಿ ಪವರ್‌ ಕಂಪನಿಯ ಷೇರುಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ಜಗನ್ ಬರೆದ ಪತ್ರ ಇಬ್ಬರ ನಡುವಿನ ವೈಮನಸ್ಸಿಗೆ ಕಾರಣವಾಯಿತು. ಇದಾದ ನಂತರ ಶರ್ಮಿಳಾ ಕಾಂಗ್ರೆಸ್‌ ಸೇರಿದರು. ಸದ್ಯ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆಯಾಗಿದ್ದಾರೆ.

ನಮ್ಮ ತಂದೆ ಎಂದೂ ಆಲೋಚಿಸದ್ದನ್ನು ನೀವು ಮಾಡಿದ್ದೀರಿ. ತಾಯಿ ವಿರುದ್ಧ ದಾವೆ ಹೂಡಿದ್ದೀರಿ. ನನಗೆ ನ್ಯಾಯಯುತವಾಗಿ ಬರಬೇಕಾದ ಆಸ್ತಿಯನ್ನು ಕಸಿದುಕೊಂಡಿದ್ದೀರಿ ಎಂದು ಶರ್ಮಿಳಾ ರೆಡ್ಡಿ ದೂರಿಕೊಂಡಿದ್ದಾರೆ. ಸರಸ್ವತಿ ಪವರ್‌ನ ಷೇರುಗಳ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯು ಎಲ್ಲಾ ಪಾಲುದಾರರಿಗೆ ನೋಟಿಸ್ ಜಾರಿ ಮಾಡಿದ್ದು, ನ. 8ರಂದು ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ.