ವಸಂತ ಅಸ್ನೋಟಿಕರ್ ಹತ್ಯೆ, ಆನಂದ್ ಅನರ್ಹತೆ, ಸೈಲ್ ಜೈಲು.!
ಬೆಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಗೆ ಜೈಲು ಶಿಕ್ಷೆಯಾಗಿದ್ದರಿಂದ ಶಾಸಕ ಸ್ಥಾನವೂ ರದ್ದಾಗುತ್ತಿದೆ. ಕ್ಷೇತ್ರ ಮತ್ತೊಮ್ಮೆ ಶಾಸಕರಿಲ್ಲದೆ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.

2009-10 ರ ಅವಧಿಯಲ್ಲಿ ಬಳ್ಳಾರಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 11,312 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು 2010 ರಲ್ಲಿ ಬೆಲೆಕೇರಿ ಬಂದರಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಆದರೆ, ಆರೋಪಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಚೀನಾಗೆ ಕಳ್ಳಸಾಗಣೆ ಮಾಡಿದ ಪ್ರಕರಣ ಇದಾಗಿದೆ. ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸೈಲ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಯಾಗಿದೆ.

ನಿಯಮಗಳ ಪ್ರಕಾರ ಎರಡು ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯಾದರೆ ಶಾಸಕ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಆದರೆ ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತದಲ್ಲಿದ್ದು ಸೈಲ್ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇರುವುದರಿಂದ ಅನರ್ಹತೆ ಪ್ರಕ್ರಿಯೆ ತಡಮಾಡಬಹುದು ಎನ್ನಲಾಗಿದೆ.

ಅನಾಥ ಕಾರವಾರ ಕ್ಷೇತ್ರ
ಕಾರವಾರ ಕ್ಷೇತ್ರ ಮತ್ತೆ ಅನಾಥವಾಗಲಿದೆ. ಹಿಂದೆ ವಸಂತ ಅಸ್ನೋಟಿಕರ್ ಶಾಸಕತ್ವ ಪ್ರಶ್ನಿಸಿ ಮಾಜಿ ಶಾಸಕ ಪ್ರಭಾಕರ್ ರಾಣೆ ಕೋರ್ಟ್ ಮೆಟ್ಟಿಲೇರಿದ್ದರು. ತೀರ್ಪು ಬರಲು ತಡವಾಯಿತು. ಶಾಸಕತ್ವ ಅರ್ಹತೆ ತೀರ್ಪು ಬರುವ ಮುನ್ನ ಶಾಸಕ ವಸಂತ ಅಸ್ನೋಟಿಕರ್ ಅವರು 2000 ಫೆಬ್ರವರಿ 19 ರಂದು ಹತ್ಯೆಗೊಳಗಾದರು. ಬಳಿಕ ಶಾಸಕರಾದ ಆನಂದ್ ಅಸ್ನೋಟಿಕರ್ ಅವರನ್ನು ಅನರ್ಹ ಮಾಡಿದ್ದಾಗಲೂ ಒಂದು ವರ್ಷಕ್ಕೂ ಅಧಿಕ ಕಾಲ ಶಾಸಕರಿಲ್ಲದೆ ಕ್ಷೇತ್ರ ಅನಾಥವಾಗಿತ್ತು. ಸೈಲ್ 2013 ರಲ್ಲಿ ಶಾಸಕರಾಗಿದ್ದ ನಂತರ ಜೈಲಿಗೆ ಹೋಗಿದ್ದರಿಂದ ಸುಮಾರು ಒಂದೂವರೆ ವರ್ಷ ಕ್ಷೇತ್ರ ಅನಾಥವಾಗಿತ್ತು. ಇದೀಗ ಮತ್ತೆ ಅತಂತ್ರವಾಗಿದೆ.
