ಹೃದಯ ವಿದ್ರಾವಕ ಘಟನೆ; ಒಂದೇ ದಿನದ ಅಂತರದಲ್ಲಿ ಇಬ್ಬರು ಸಹೋದರರು ಕಾಮಾಲೆ ರೋಗಕ್ಕೆ ಬಲಿ.!

ಕರಾವಳಿ

ಸಾಹೀರ್, ಅನ್ವರ್ ಮೃತ ದುರ್ದೈವಿಗಳು.. ಬಾವಿಯ ನೀರಿನಲ್ಲಿ ಪತ್ತೆಯಾಯಿತು ಡೆಡ್ಲಿ ವೈರಸ್..

ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ

ಕೇರಳ ಕಣ್ಣೂರಿನ ತಳಿಪರಂಬ ಪುರಸಭಾ ವ್ಯಾಪ್ತಿಯಲ್ಲಿ ಹೆಪಾಟೈಟಿಸ್ ಎ (ಕಾಮಾಲೆ ರೋಗ) ಉಲ್ಬಣಗೊಂಡು ಒಂದೇ ದಿನದ ಅಂತರದಲ್ಲಿ ಇಬ್ಬರು ಸಹೋದರರು ಮೃತಪಟ್ಟ ಹೃದಯವಿದ್ರಾವಕ ಘಟನೆ ಹಿದಾಯತ್ ನಗರದಲ್ಲಿ ನಡೆದಿದೆ. ಎಂ. ಸಾಹೀರ್ (40) ಮಂಗಳವಾರದಂದು ನಿಧನವಾದರೆ ಅವರ ಸಹೋದರ ಅನ್ವರ್ (36) ಬುಧವಾರದಂದು ಸಾವನ್ನಪ್ಪಿದ್ದಾರೆ. ಅವರು ಕೋಝಿಕ್ಕೋಡ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತೀಚೆಗೆ ಇವರ ಕುಟುಂಬ ಪ್ರವಾಸ ಕೈಗೊಂಡಿದ್ದು, ಆ ನಂತರ ಇಬ್ಬರೂ ಮತ್ತು ಅವರ ಕುಟುಂಬಕ್ಕೆ ಜಾಂಡೀಸ್ ರೋಗ ಲಕ್ಷಣ ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ಅವರ ಕುಟುಂಬ ಸದಸ್ಯರು ಜಾಂಡೀಸ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಹಿದಾಯತ್ ನಗರದಲ್ಲಿ ಸುಮಾರು 15 ಜಾಂಡೀಸ್ ಪ್ರಕರಣಗಳು ವರದಿಯಾಗಿವೆ. ಕೋರ್ಟ್ ರಸ್ತೆಯಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿರುವ ಜವಳಿ ಅಂಗಡಿ, ಟ್ಯೂಷನ್ ಸೆಂಟರ್ ಹಾಗೂ ಹತ್ತಿರದ ಜ್ಯೂಸ್ ಅಂಗಡಿಯ ಉದ್ಯೋಗಿಗಳಲ್ಲಿ ಮೊದಲ ಪ್ರಕರಣ ಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ. ನಂತರ ಆರೋಗ್ಯ ಇಲಾಖೆ ಅಕ್ಕಪಕ್ಕದ ಬಾವಿಗಳ ನೀರನ್ನು ತಪಾಸಣೆ ನಡೆಸಿದಾಗ ಮಲಮಾಲಿನ್ಯದ ಉಪಸ್ಥಿತಿಯನ್ನು ಸೂಚಿಸುವ ಇ. ಕೋಲಿ ಬ್ಯಾಕ್ಟೀರಿಯಾ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಇದೊಂದು ಸಾಂಕ್ರಾಮಿಕ ರೋಗವಾಗಿ ರುವುದರಿಂದ ತಳಿಪರಂಬ ನಿವಾಸಿಗಳು ಭಯಭೀತಿಗೊಂಡಿದ್ದಾರೆ. ಈ ಮಧ್ಯೆಯೇ ಇಬ್ಬರು ಸಹೋದರರ ಸಾವು ಇಲ್ಲಿನ ನಿವಾಸಿಗಳನ್ನು ಕಂಗೆಡಿಸಿದೆ. ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.