ಅನರ್ಹರ ಸಾಲಲ್ಲಿ ಅರ್ಹರು ಸೇರಿಕೊಂಡಾಗ ಅವರಿಗೆ ಮುಜುಗರವಾಗುವುದು ಸಹಜ
ಮೌಲ್ಯ ಕಳೆದುಕೊಳ್ಳುತ್ತಿರುವ ರಾಜ್ಯೋತ್ಸವ ಪ್ರಶಸ್ತಿ! ಹೌದು ರಾಜ್ಯೋತ್ಸವ ಪ್ರಶಸ್ತಿ ಮೌಲ್ಯ ಕಳೆದುಕೊಳ್ಳುತ್ತಿವೆ. ಅದಕ್ಕೆ ಕಾರಣ ನೂರಾರು. ಅನರ್ಹರ ಸಾಲಲ್ಲಿ ಅರ್ಹರು ಸೇರಿಕೊಂಡಾಗ ಅವರಿಗೆ ಮುಜುಗರವಾಗುವುದು ಸಹಜ. ರಾಜ್ಯಮಟ್ಟದಲ್ಲಿ ನೀಡುವ ಪ್ರಶಸ್ತಿಯ ಜೊತೆ ಹಣ+ಚಿನ್ನವಿದೆ. ಜಿಲ್ಲಾ ಮಟ್ಟದಲ್ಲಿ ನೀಡುವ ಈ ಪ್ರಶಸ್ತಿಯ ಜೊತೆ ನಯಾಪೈಸೆಯಿಲ್ಲ. ಆದರೂ ಈ ಪ್ರಶಸ್ತಿಯನ್ನು ದಕ್ಕಿಸಿಕೊಳ್ಳಲು ನಡೆಸುವ ಪ್ರಯತ್ನ ಅಚ್ಚರಿ ಹುಟ್ಟಿಸಿವೆ. ಈ ಬಾರಿ ಜಿಲ್ಲಾ ಮಟ್ಟದಲ್ಲಿ ನೀಡುವ ಪ್ರಶಸ್ತಿಯ ಹೆಸರನ್ನು ಬದಲಾಯಿಸಲಾಗಿದೆ. ಜಿಲ್ಲಾ ರಾಜ್ಯೋತ್ಸವ ಬದಲು ಜಿಲ್ಲಾ ಪ್ರಶಸ್ತಿ ಅಂತ ನಮೂದಿಸಲಾಗಿದೆ. (ಯಾಕೆ ಅಂತ ವಿವರಿಸುವ ಅಗತ್ಯವಿಲ್ಲ) ಗುರುವಾರ ರಾತ್ರಿ ದ.ಕ. ಜಿಲ್ಲಾಡಳಿತ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ 55 ಸಾಧಕರ ಮತ್ತು 20 ಸಂಘಟನೆಗಳ ಹೆಸರಿತ್ತು. ಸ್ವಲ್ಪ ಸಮಯದ ಬಳಿಕ 55ರ ಬದಲು 56 ಮತ್ತು ನಂತರ 57 ಆಯಿತು. 20 ಇದ್ದ ಸಂಘಸಂಸ್ಥೆಗಳ ಪಟ್ಟಿ 24ಕ್ಕೇರಿತು. ಇದೀಗ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾದ ಬಾಬು ಪಿಲಾರ್ ಸುವರ್ಣ ಕರ್ನಾಟಕ ವಿಶೇಷ ಪ್ರಶಸ್ತಿಗೆ ಆಯ್ಕೆಯಾದ ಕಾರಣ ಅವರು ಜಿಲ್ಲಾ ಮಟ್ಟದ ಪ್ರಶಸ್ತಿಯ ಬದಲು ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ತೆರಳಿದ್ದಾರೆ. ಹಾಗಾಗಿ ಸದ್ಯ ಪಟ್ಟಿ 56ರಲ್ಲಿದೆ. ಇನ್ನು ಈ ದಿನ ಬೆಳಗ್ಗೆ 9ರ ವೇಳೆಗೆ ಪಟ್ಟಿ ಬೆಳೆದರೆ ಅಚ್ಚರಿಯಿಲ್ಲ. ಜಿಲ್ಲಾಡಳಿತ ಹೀಗೆ ಪ್ರಶಸ್ತಿಯನ್ನು ಬೇಕಾಬಿಟ್ಟಿ ಕೊಡುವ ಬದಲು ಮಾನದಂಡ ನಿಗದಿಪಡಿಸಬೇಕು. ಒಂದಷ್ಟು ಗೌರವಧನ ಕೊಡಬೇಕು. ಅದ್ಯಾವುದೂ ಇಲ್ಲದೆ ಬೇಕಾಬಿಟ್ಟಿ ಕೊಡುತ್ತಾ ಹೋದರೆ ಅರ್ಹ ಸಾಧಕರನ್ನು ಪ್ರಶಸ್ತಿ ಹೆಸರಿನಲ್ಲಿ ಸನ್ಮಾನ ಮಾಡುವ ಬದಲು ಅವಮಾನ ಮಾಡಿದಂತೆಯೇ….!
