ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರನಾಯಕರೊಬ್ಬರ ಕುಮ್ಮಕ್ಕಿನಿಂದ ರಾಜ್ಯದಲ್ಲಿ ತನ್ನದೆ ಪಕ್ಷದ ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ದ ವಕ್ಫ್ ಆಸ್ತಿಯ ನೆಪದಲ್ಲಿ ಹೋರಾಟಕ್ಕೆ ಇಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಆರೋಪಿಸಿದ್ದಾರೆ.
ವಕ್ಫ್ ಆಸ್ತಿಯ ವಿಷಯದಲ್ಲಿ ಹಲವರಿಗೆ ನೋಟೀಸ್ ನೀಡಿರುವುದು ಆಡಳಿತದ ಭಾಗವೆನ್ನುವುದು ಆರ್.ಎಸ್.ಎಸ್ ನಾಯಕರಿಗೂ ಗೊತ್ತಿರದ ವಿಷಯವೇನಲ್ಲ. ರಾಜ್ಯದಲ್ಲಿ ಈ ಹಿಂದೆ 2019 ರಿಂದ 2022 ರ ಅವಧಿಯಲ್ಲೂ ಬಿ.ಜೆ.ಪಿ. ಸರ್ಕಾರವಿದ್ದಾಗ ವಿವಿಧ ಜಿಲ್ಲೆಗಳ ಹಲವರಿಗೆ ವಕ್ಫ್ ಆಸ್ತಿಯ ವಿಷಯದಲ್ಲಿ 200 ಕ್ಕೂ ಹೆಚ್ಚು ಜನರಿಗೆ ನೋಟೀಸ್ ಕೊಡಲಾಗಿರುತ್ತದೆ. ಇದನ್ನೇ ಅಸ್ತ್ರವಾಗಿ ಮಾಡಿಕೊಂಡು ತಮ್ಮದೆ ಪಕ್ಷದ ಮೂವರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಬಸವರಾಜ ಬೊಮ್ಮಾಯಿ ವಿರುದ್ದ ಹೋರಾಟಕ್ಕೆ ಇಳಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಹೋರಾಟದ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ರಾಜ್ಯದಲ್ಲಿ ವಕ್ಫ್ ಆಸ್ತಿಯ ವಿವಾದವನ್ನೇ ರಾಜಕೀಯ ದಾಳ ಮಾಡಿಕೊಂಡು ಕಾಂಗ್ರೇಸ್ ಸರ್ಕಾರದ ವಿರುದ್ದ ಹೋರಾಟ ಮಾಡಿದರೆ ಇದೇ ವಕ್ಫ್ ಆಸ್ತಿಯ ವಿವಾದವು ಬಿ.ಜೆ.ಪಿ.ಯ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಸುತ್ತಿಕೊಂಡರೆ ತಾನು ಮುಖ್ಯಮಂತ್ರಿ ಆಗಲು ಇರುವ ತೊಡಕುಗಳು ನಿವಾರಣೆ ಆಗಲಿದೆ ಎಂದು ಆರ್.ಎಸ್.ಎಸ್ ರಾಷ್ಟ್ರನಾಯಕ ಇಂತಹ ತಂತ್ರಗಾರಿಕೆ ಮಾಡಿದ್ದಾರೆಂದು ಮತ್ತು ವಕ್ಫ್ ಆಸ್ತಿ ವಿವಾದದ ಹೋರಾಟ ರಾಜ್ಯಾದ್ಯಂತ ನಡೆಯಲು ಈ ಕುತಂತ್ರವೇ ಕಾರಣವೆಂದು ವೈ.ಬಿ.ಚಂದ್ರಕಾಂತ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಕ್ಫ್ ಆಸ್ತಿ ವಿಷಯದಲ್ಲಿ ಸರ್ಕಾರವೇ ಆಗಲಿ, ವಕ್ಫ್ ಮಂಡಳಿಯೇ ಆಗಲಿ ನೋಟೀಸ್ ನೀಡಿದ ನಂತರವೂ ವಕ್ಫ್ ಮಂಡಳಿಯ ಹೆಸರಿಗೆ ಖಾತೆ ಮಾಡುವ ಅಥವಾ ತಿರಸ್ಕರಿಸುವ ಸಂಪೂರ್ಣ ಅಧಿಕಾರ ಇಲಾಖೆಗಳಿಗೆ ಇರುತ್ತದೆ. ಹೀಗಿದ್ದರೂ ರಾಜ್ಯದ ಕಾಂಗ್ರೇಸ್ ಸರ್ಕಾರದ ವಿರುದ್ದ ಇದ್ದಕ್ಕಿದಂತೆ ಹೋರಾಟಕ್ಕೆ ಇಳಿಯುವಂತೆ ಮಾಡಿ ತಮ್ಮ ಪಕ್ಷದವರೇ ತಮ್ಮ ವಿರುದ್ದ ಮಾಡುತ್ತಿರುವ ಕುತಂತ್ರದ ಸುಳಿವು ಅರಿತಿರುವ ಬಿ.ಜೆ.ಪಿ.ಯ ಘಟಾನುಘಟಿ ನಾಯಕರೂ ಸಹ ಆರ್.ಎಸ್.ಎಸ್ ರಾಷ್ಟ್ರನಾಯಕನಿಗೆ ತಿರುಮಂತ್ರ ಹಾಕಲೆಂದೇ ಮೂವರು ಮಾಜಿ ಮುಖ್ಯಮಂತ್ರಿಗಳು ತಾವೂ ಹೋರಾಟದಲ್ಲಿ ಭಾಗವಹಿಸಿರುವುದರಿಂದ ಕಾಂಗ್ರೇಸ್ ಸರ್ಕಾರದ ವಿರುದ್ದದ ಹೋರಾಟವಾಗದೆ, ಬಿ.ಜೆ.ಪಿ.ಯ ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ದದ ಹೋರಾಟವಾಗಿ ಮಾರ್ಪಾಟಾಗಿದೆ ಎಂದು ವೈ.ಬಿ.ಚಂದ್ರಕಾಂತ್ ಅವರು ಹೇಳಿದ್ದಾರೆ.
