ಕೃತ್ಯ ನಡೆದ 24ಗಂಟೆಯೊಳಗೆ ಕುಖ್ಯಾತ ಕಳ್ಳನ ಬಲೆಗೆ ಕೆಡವಿದ ಮುಲ್ಕಿ ಪೊಲೀಸರು; ಬಂಧಿತನಿಂದ 64ಗ್ರಾಂ ಚಿನ್ನಾಭರಣ ವಶ.

ಕರಾವಳಿ

ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಉತ್ತರ ವಿಭಾಗದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಬಳಿ ಬಿಜಾಪುರ ಕಾಲೋನಿಯ ಮನೆಯೊಂದರಲ್ಲಿ ದಿನಾಂಕ 6-11-2024 ರಂದು ಹಾಡಹಗಲೇ ಕಳ್ಳತನ ನಡೆದಿತ್ತು. ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು 64.200 ಗ್ರಾಂ ಚಿನ್ನಾಭರಣವನ್ನು ಲಪಟಾಯಿಸಿ ಪರಾರಿಯಾಗಿದ್ದರು‌. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.

ಘಟನೆ ನಡೆದ ಕೇವಲ 24 ಗಂಟೆಯೊಳಗೆ ಮುಲ್ಕಿ ಠಾಣಾ ಇನ್ಸ್ ಪೆಕ್ಟರ್ ವಿದ್ಯಾಧರ ಬಾಯ್ಕೇರಿಕರ್ ನೇತೃತ್ವದಲ್ಲಿ ಮುಲ್ಕಿ ಠಾಣಾ ಪೊಲೀಸರು ಕಳ್ಳನ ಹೆಡೆಮುರಿ ಕಟ್ಟಿ 2,56,000 ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲತ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ದೇವರಹಿಪ್ಪರಗಿ ಗ್ರಾಮದ ಮಣ್ಣೂರು ನಿವಾಸಿಯಾಗಿದ್ದು ಪ್ರಸ್ತುತ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯ ಕಾಡು ಮಲ್ಲಿಕಾರ್ಜುನ ಮಠ ಪರಿಸರ ನಿವಾಸಿ ದುರ್ಗಪ್ಪ @ದುರ್ಗೇಶ್ ಪುತ್ರ ಅರುಣ್ ಬಂಧಿತ ಆರೋಪಿ. ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಮುಲ್ಕಿ ಠಾಣಾ ಎಸೈ ಹೆಚ್.ಬಿ.ಅನಿತಾ, ಎಎಸ್ಐ ಹರಿಶೇಖರ್, ಸಿಬ್ಬಂದಿಗಳಾದ ಹೆಚ್.ಸಿ.ಶಶಿಧರ್, ಹೆಚ್.ಸಿ.ಚಂದ್ರಶೇಖರ್, ಹೆಚ್.ಸಿ.ಜಾಯ್ಸ್ ಸುಚಿತಾ ಡಿಸೋಜಾ, ಪಿ.ಸಿ.ಸುನಿಲ್, ಪಿ.ಸಿ.ಚಿತ್ರಾ ಭಾಗವಹಿಸಿದ್ದರು.