ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳಿಗೆ ಇದೀಗ ಹೈಕಮಾಂಡ್ ತೆರೆ ಎಳೆಯಲು ಮುಂದಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಸಿ ನಡುವಿನ ಪವರ್ ಫೈಟ್‌ಗೆ ಮುಕ್ತಾಯ ಹಾಡಲು ದೆಹಲಿ ನಾಯಕರು ಮುಹೂರ್ತ ಫಿಕ್ಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಮೇ 15ರ ಒಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಳ್ಳಲು ಹೈಕಮಾಂಡ್ ತೀರ್ಮಾನಿಸಿದೆ. ಈ ಸಭೆಯಲ್ಲಿ ರಾಜ್ಯದ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆಯ ಕುರಿತು ಸುದೀರ್ಘ ಚರ್ಚೆ ನಡೆಸಿ, ಗೊಂದಲಗಳಿಗೆ ಅಂತಿಮ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೈಕಮಾಂಡ್ ಕೇರಳದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿದೆ. ಮೇ 10ರ ಒಳಗಾಗಿ ಕೇರಳದ ಸಿಎಂ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೈಕಮಾಂಡ್ ನಿರ್ಧರಿಸಿದ್ದು, ಅದು ಮುಗಿದ ತಕ್ಷಣವೇ ಕರ್ನಾಟಕದ ಕಡೆಗೆ ಗಮನ ಹರಿಸಲಿದೆ. ದೆಹಲಿಯಲ್ಲಿ ನಡೆಯಲಿರುವ ಈ ಸಭೆಯು ರಾಜ್ಯ ಕಾಂಗ್ರೆಸ್‌ನ ಮುಂದಿನ ದಿಕ್ಕನ್ನು ನಿರ್ಧರಿಸಲಿದೆ. ಕೇವಲ ನಾಯಕತ್ವ ಮಾತ್ರವಲ್ಲದೆ, ರಾಜ್ಯ ಸಚಿವ ಸಂಪುಟದಲ್ಲಿ ಯಾರನ್ನು ಕೈಬಿಡಬೇಕು ಮತ್ತು ಯಾರಿಗೆ ಹೊಸದಾಗಿ ಸ್ಥಾನ ನೀಡಬೇಕು ಎಂಬ ಕುರಿತೂ ಈ ಸಭೆಯಲ್ಲಿ ಹೈಕಮಾಂಡ್ ಅಂತಿಮ ಮೊಹರು ಒತ್ತಲಿದೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಹಾಗೂ ಪ್ರಭಾವಿ ನಾಯಕರು ಈಗಿನಿಂದಲೇ ದೆಹಲಿ ಮಟ್ಟದಲ್ಲಿ ಲಾಬಿ ನಡೆಸಲು ಆರಂಭಿಸಿದ್ದಾರೆ. ಮೇ ತಿಂಗಳ ಮಧ್ಯಭಾಗದಲ್ಲಿ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುವ ಮುನ್ಸೂಚನೆ ಸಿಕ್ಕಿದ್ದು, ಹೈಕಮಾಂಡ್ ತೆಗೆದುಕೊಳ್ಳುವ ಈ ನಿರ್ಧಾರವು ರಾಜ್ಯ ರಾಜಕೀಯದಲ್ಲಿ ಯಾವ ರೀತಿಯ ತಿರುವು ನೀಡಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
