ವಿಟ್ಲ ಕಂದಾಯ ನಿರೀಕ್ಷಕರ ಕಚೇರಿಗೆ ಒಳನುಗ್ಗಿ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿ ಟೇಬಲ್ ಗ್ಲಾಸ್ ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಹರೀಶ್ ರೈ ಕಲ್ಮಲೆ ಮತ್ತು ಧನಂಜಯ ಪಾದೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಟ್ಲದಲ್ಲಿನ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಕಂದಾಯ ನಿರೀಕ್ಷಕ ಪ್ರಶಾಂತ್ ಶೆಟ್ಟಿ ಸಹಾಯಕ ಕೆ.ಗಿರೀಶ್ ಶೆಟ್ಟಿರವರ ಜೊತೆ ಕರ್ತವ್ಯದಲ್ಲಿದ್ದರು. ವೀರಕಂಭ ಗ್ರಾಮದ ನಿವಾಸಿಗಳಾದ ಹರೀಶ್ ರೈ ಕಲ್ಮಲೆ ಮತ್ತು ಧನಂಜಯ ಎಂಬವರು ವೀರಕಂಭ ಗ್ರಾಮದ ಕಡತ ಸಂಖ್ಯೆ HRS/16/2021-22ರ ಬಗ್ಗೆ ಪ್ರಶ್ನಿಸುವ ನೆಪದಲ್ಲಿ ಕಚೇರಿಗೆ ಪ್ರವೇಶಿಸಿ ವಿಚಾರಿಸಿದ್ದಾರೆ. ಸದ್ರಿ ದಾಖಲೆಯು ಶೇಕ್ ಸುಬಾನ್ ಎಂಬವರಿಗೆ 94ಸಿ ಮನೆ ನಿವೇಶನದ ಮಂಜೂರಾತಿಗೆ ಸಂಬಂಧಿಸಿದ್ದಾಗಿದೆ. ಈ ದಾಖಲೆಯನ್ನು ಕಂದಾಯ ನಿರೀಕ್ಷಕರು ಈಗಾಗಲೇ ಬಂಟ್ವಾಳ ತಾಲೂಕು ಕಚೇರಿಗೆ ವರದಿ ಮಾಡಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಸದ್ರಿ ಜಮೀನಿನ ಪರಿಸರದಲ್ಲಿ ರಕ್ಷಿತಾರಣ್ಯ ವ್ಯಾಪ್ತಿ ಬರುವ ಕಾರಣಕ್ಕಾಗಿ ದಾಖಲೆಯ ಕಡತದಲ್ಲಿ ಅರಣ್ಯ ಇಲಾಖೆಯ ನಿರಪೇಕ್ಷಣಾ ಪತ್ರ ಪಡೆದು ಮಂಜೂರಾತಿಗೆ ಕ್ರಮ ವಹಿಸಲು ಶಿಫಾರಸ್ಸು ಮಾಡಲಾಗಿದೆ. ಆದರೂ ಉದ್ದೇಶಪೂರ್ವಕವಾಗಿ ಮಂಜೂರಾತಿಗೆ ಅಡ್ಡಿಪಡಿಸಿರುವುದಾಗಿ ಆಪಾದಿಸಿ ಕಂದಾಯ ಕಛೇರಿಯೊಳಗೆ ನುಗ್ಗಿದ ಆರೋಪಿಗಳು ನಿರೀಕ್ಷಕರನ್ನು ಏಕವಚನದಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಲ್ಲದೇ , ಜೀವ ಬೆದರಿಕೆ ಹಾಕಿ ಟೇಬಲ್ ಮೇಲಿನ ಗ್ಲಾಸ್ ಒಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಕಂದಾಯ ನಿರೀಕ್ಷಕರು ದೂರಿನಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 169/2024, ಕಲಂ: 352, 351 (2),324(3),132,3 (5) BNS 2023 ಪ್ರಕರಣ ದಾಖಲಾಗಿದೆ.

