ಈಜುಕೊಳದಲ್ಲಿ ನೀರಾಟಕ್ಕಿಳಿದು ನಡೆದಿದೆ ಡಜನ್ ಗಟ್ಟಲೆ ಸಾವು
ರೆಸಾರ್ಟ್ ನಿರ್ಲಕ್ಷ್ಯ, ಜಿಲ್ಲಾಡಳಿತ ವೈಫಲ್ಯಕ್ಕೆ ಇನ್ನೆಷ್ಟು ಬಲಿ ಬೇಕು..?
ಸ್ವಿಮ್ಮಿಂಗ್ ಪೂಲ್ ಈಜಾಟ ಅದು ತಮ್ಮ ಬದುಕಿಗೆ ಅಂತ್ಯ ಹಾಡುತ್ತದೆ ಎಂದು ಅವರು ಅಂದುಕೊಂಡಿರಲಿಕ್ಕಿಲ್ಲ. ಚೆಕ್ ಔಟ್ ಗೆ ಇನ್ನೂ ಒಂದು ಗಂಟೆ ಬಾಕಿ ಇರುವಾಗಲೇ ನೀರಾಟಕ್ಕಿಳಿದ ಆ ಮೂವರು ಯುವತಿಯರ ಬಾಳಿಗೆ ಈಜುಕೊಳವೇ ಯಮನಾಗಿಬಿಟ್ಟಿತು. ವೀಕೆಂಡ್ ರಜೆಯನ್ನು ಎಂಜಾಯ್ ಮಾಡಲು ಬಂದವರು ವಿಲವಿಲ ಒದ್ದಾಡಿ ಪ್ರಾಣಬಿಟ್ಟರು. ಈ ಸಾವಿಗೆ ನ್ಯಾಯವಿಲ್ಲವೇ?

ಮೈಸೂರಿನ ದೇವರಾಜ ಮೊಹಲ್ಲಾದ ಕೀರ್ತನಾ, ಕುರುಬರಹಳ್ಳಿಯ ನಿಶಿತಾ, ಕೆ.ಆರ್. ಮೊಹಲ್ಲಾದ ಪಾರ್ವತಿ ಮೂವರು ಒಂದೇ ಬ್ಯಾಚ್ ಮೇಟ್ ಗಳು. ಫೈನಲ್ ಇಯರ್ ಇಂಜಿನಿಯರಿಂಗ್ ಸ್ಟೂಡೆಂಟ್ ಗಳು. ಪ್ರಾಯ ಮೂವರದ್ದು ಆಜುಬಾಜು ಇಪ್ಪತ್ತೊಂದು. ಈಜು ಬಾರದ ಮೂವರು ನೀರಾಟಕ್ಕೆ ಇಳಿದು ಘೋರ ದುರಂತಕ್ಕೆ ಸಿಲುಕಿದರು. ಮಂಗಳೂರಿನ ಪ್ರವಾಸಿ ತಾಣವನ್ನು ಆಸ್ವಾದಿಸಲು ಬಂದವರು ಶವವಾಗಿ ಮೈಸೂರು ತಲುಪಿದ್ದಾರೆ. ಭವಿಷ್ಯದ ಇಂಜಿನಿಯರ್ ಆಗಬೇಕಿದ್ದ ಕರುಳಕುಡಿಗಳ ಸಾವನ್ನು ಕಂಡು ಹೆತ್ತವರು ದಿಗ್ಭ್ರಾಂತರಾಗಿದ್ದಾರೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಬಟ್ಟಪಾಡಿ ಸಾಯಿರಾಂ ಬೀಚ್ ರೆಸಾರ್ಟ್ ಈಜು ಕೊಳದಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ದುರಂತ ಎಂದರೆ ಈಜುಕೊಳದ ಮುಂಭಾಗದಲ್ಲಿ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಿಸದಿರುವುದು. ಒಂದು ವೇಳೆ ಸಿಬ್ಬಂದಿಗಳು, ಲೈಫ್ ಗಾರ್ಡ್ ಗಳು ಅಲ್ಲಿದ್ದರೆ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಆ ಯುವತಿಯರನ್ನು ರಕ್ಷಿಸಬಹುದಿತ್ತು. ರೆಸಾರ್ಟ್ ನವರ ಬೇಜವಾಬ್ದಾರಿತನಕ್ಕೆ ಬದುಕಿ ಬಾಳಬೇಕಿದ್ದ ಆ ಯುವತಿಯರು ಪ್ರಾಣ ಕಳೆದುಕೊಂಡರು.

ಮಂಗಳೂರಿನಲ್ಲಿ ಅಣಬೆಗಳಂತೆ ಬೇಕಾಬಿಟ್ಟಿಯಾಗಿ ರೆಸಾರ್ಟ್ ಗಳು ತಲೆ ಎತ್ತಿ ನಿಂತಿದೆ. ಸ್ಥಳೀಯಾಡಳಿತ, ಪಂಚಾಯತ್ ಮಟ್ಟದ ಅಧಿಕಾರಿಗಳಿಗೆ ದುಡ್ಡು ಕೊಟ್ಟರೆ ಸಾಕು ನಿಯಮಗಳನ್ನೆಲ್ಲ ಗಾಳಿಗೆ ತೂರಿ ಬೇಕಾಬಿಟ್ಟಿ ಲೈಸೆನ್ಸ್ ಕೊಡುತ್ತಿದ್ದಾರೆ. ಇಂದು ಒಂದೊಂದು ಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ ಒಂದೊಂದು ಇಂತಹ ರೆಸಾರ್ಟ್ ಗಳು ತಲೆ ಎತ್ತಿ ನಿಂತಿದೆ. ಪುರಸಭೆ, ನಗರಸಭೆ, ಮಹಾನಗರ ಸಭೆಯ ವ್ಯಾಪ್ತಿಯಲ್ಲಂತೂ ಇಪ್ಪತ್ತರಿಂದ ಮೂವತ್ತರಷ್ಟು ರೆಸಾರ್ಟ್ ಗಳಿವೆ. ಅಧಿಕಾರಿಗಳಿಗೆ ದುಡ್ಡು ಸಿಕ್ಕರೆ ಸಾಕು; ಅಲ್ಲಿ ಬರುವ ಪ್ರವಾಸಿಗರ ಪ್ರಾಣ ಇವರಿಗೆ ಮುಖ್ಯವಾಗುವುದಿಲ್ಲ. ಯಾವ ರೀತಿಯ ಮುಂಜಾಗ್ರತಾ ಕ್ರಮ ಅನುಸರಿಸಿದೆ ಅನ್ನುವುದನ್ನು ನೋಡುವ ಗೋಜಿಗೆ ಹೋಗುವುದಿಲ್ಲ. ಇನ್ನು ರೆಸಾರ್ಟ್ ಮಾಲೀಕರು ಸಿಬ್ಬಂದಿಗಳನ್ನು ಇಡುವ ಬದಲು ಪ್ರವಾಸಿಗರಿಂದ ಬಂದಷ್ಟು ದುಡ್ಡು ಬರಲಿ ಎಂದು ಬಾಚಿಕೊಳ್ಳುತ್ತಾರೆ . ಮುಂಜಾಗ್ರತ ಸೌಕರ್ಯ ಕಡೆಗಣಿಸುತ್ತಾರೆ. ರೆಸಾರ್ಟ್ ಗೆ ಬರುವ ಬಹುತೇಕ ಪ್ರವಾಸಿಗರಿಗೆ ಈಜು ಬರುವುದಿಲ್ಲ. ಎಂಜಾಯ್ ಗೋಸ್ಕರ ನೀರಾಟಕ್ಕೆ ಇಳಿಯುತ್ತಾರೆ. ಕೊನೆಗೆ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಜಿಲ್ಲಾಡಳಿತದ ವೈಫಲ್ಯವೇ ಇದಕ್ಕೆ ಕಾರಣ. ಒಂದೊಮ್ಮೆ ಅನಾಹುತ ನಡೆದರೆ ರೆಸಾರ್ಟ್ ಗೆ ಬೀಗ, ಸೀಲ್ ಡೌನ್ ಅಂತ ಪುಕ್ಕಟೆ ಪ್ರಚಾರ ಪಡೆಯುತ್ತಾರೆ. ಆದರೆ ಕೆಲವು ದಿನಗಳ ನಂತರ, ಅಂತಹ ರೆಸಾರ್ಟ್ ಗಳು ಇನ್ನು ಕೆಲವರ ಜೀವ ತೆಗೆಯಲು ಬಾಗಿಲು ತೆಗೆದುಕೊಂಡು ಕೂರುತ್ತದೆ. ಪ್ರವಾಸೋದ್ಯಮ ಇಲಾಖೆ ಎಸಿ ರೂಮಿನಲ್ಲಿ ಕೂತು ಇಂತಹ ಮರಣ ಗುಂಡಿ (ಈಜು ಕೊಳ) ಗಳಿಗೆ ಕಪ್ಪ ಕಾಣಿಕೆ ಪಡೆದು ಅನುಮತಿ ನೀಡುತ್ತಾರೆ.
ಮಂಗಳೂರಿನಲ್ಲಿ ಈಜುಕೊಳದ ನೀರಾಟಕ್ಕೆ ಇಳಿದು ಹತ್ತಾರು ಘೋರ ದುರಂತಗಳು ನಡೆದಿದೆ. ಇದು ಮೊದಲ ಪ್ರಕರಣವೇನಲ್ಲ. ಆದರೆ ಈವರೆಗೂ ರೆಸಾರ್ಟ್ ನವರ ಬೇಜವಾಬ್ದಾರಿತನಕ್ಕೆ ಶಿಕ್ಷೆಯಾದ ಉದಾಹರಣೆ ಇದೆಯೇ.? ಜನತೆ ಘಟನೆ ಮರೆತಾಗ ಇಂತಹ ರೆಸಾರ್ಟ್ ಗಳು ಮತ್ತೆ ತಲೆ ಎತ್ತಿ ತನ್ನ ಆಟ ಮುಂದುವರಿಸುತ್ತದೆ. ಗೆಸ್ಟ್ ಹೌಸ್, ರೆಸಾರ್ಟ್ ನವರ ಬೇಜವಾಬ್ದಾರಿತನಕ್ಕೆ ಜೀವ ಹೋದರೆ ಅದರ ಮಾಲಕರಿಂದಲೇ ಪರಿಹಾರ ಕೊಡಿಸಬೇಕು, ಅಂತಹ ಗೆಸ್ಟ್ ಹೌಸ್ ಗಳನ್ನು ಮುಚ್ಚಬೇಕು, ಕ್ರಿಮಿನಲ್ ಕೇಸ್ ದಾಖಲಾಗಬೇಕು. ಹಾಗಾದರೆ ಮಾತ್ರ ಇತರರಿಗೆ ಬುದ್ಧಿ ಬರಬಹುದು; ದುಡ್ಡೇ ದೊಡ್ಡಪ್ಪ ಅನ್ನುವ ನಾಡಲ್ಲಿ ಇದನ್ನೆಲ್ಲ ನಿರೀಕ್ಷಿಸಬಹುದೇ?

ಮಂಗಳೂರಿನ ಈಜುಕೊಳಕ್ಕೆ ನೀರಾಟಕ್ಕಿಳಿದು ಡಜನ್ ಗಟ್ಟಲೆ ಸಾವು ಸಂಭವಿಸಿದೆ. ಗುರುಗ್ರಾಮ ಮೂಲದ ಅಭಿಷೇಕ್ ಆನಂದ್ ಅನ್ನುವ 30 ವರ್ಷದ ಪ್ರವಾಸಿ ಮಂಗಳೂರಿನ ಜನಪ್ರಿಯ ಈಜುಕೊಳವಾದ ಮಂಗಳಾ ಈಜುಕೊಳದಲ್ಲಿ ನೀರಾಟಕ್ಕಿಳಿದು ಪ್ರಾಣ ಬಿಟ್ಟಿದ್ದ. ಅದೇ ಈಜುಕೊಳದಲ್ಲಿ ಮರೋಳಿ ಭಾಸ್ಕರ್ ಅವರ ಪುತ್ರ 19 ವರ್ಷದ ಯಜ್ಞೇಶ್ ಅನ್ನುವ ಯುವಕ ಈಜುಕೊಳದಲ್ಲಿ ಈಜಾಟಕ್ಕಿಳಿದು ಮುಳುಗಿ ಸಾವನ್ನಪ್ಪಿದ್ದರು. ಬೆಂಗಳೂರಿನ ಅಮೃತ ವಿದ್ಯಾಲಯದ 8 ನೇ ತರಗತಿ ವಿದ್ಯಾರ್ಥಿ ಸುವಾನ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಈಜಲು ಹೋಗಿ ಮುಳುಗಿ ಪ್ರಾಣಬಿಟ್ಟಿದ್ದರು. ಈ ಮೂರು ಸಾವು ಕೂಡ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲಾಡಳಿತ ನಡೆಸುವ ಪ್ರತಿಷ್ಠಿತ ಮಂಗಳಾ ಈಜುಕೊಳದಲ್ಲಿ.
ಮಂಗಳೂರಿನ ಪ್ರತಿಷ್ಠಿತ ಮೋತಿಮಹಲ್ ಹೋಟೆಲ್ ಈಜುಕೊಳದಲ್ಲಿ ಕೇರಳ ಮೂಲದ ಬ್ಯಾಂಕ್ ಅಧಿಕಾರಿ ಗೋಪು ಆರ್ ನಾಯರ್ ಮುಳುಗಿ ಸಾವನ್ನಪ್ಪಿದ್ದರು. ಮೂಡುಶೆಡ್ಡೆಯ ರೆಸಾರ್ಟ್ ವೊಂದರಲ್ಲಿ ನೀರಾಟಕ್ಕಿಳಿದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ.
ಹೀಗೆ ಸಾಲು ಸಾಲು ಪ್ರಾಣಗಳು ಈಜುಕೊಳದಲ್ಲಿ ಸಂಭವಿಸಿದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಕನಿಷ್ಠ ಮುನ್ನೆಚ್ಚರಿಕೆ ವಹಿಸುತ್ತಿಲ್ಲ ಅನ್ನುವುದೇ ದುರಂತ. ಇವೆಲ್ಲವೂ ಅಧಿಕಾರಿ ವರ್ಗ, ರೆಸಾರ್ಟ್ ಗಳ ಬೇಜವಬ್ದಾರಿತನದಿಂದ ಉಂಟಾಗಿರುವ ಸಾವುಗಳು. ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಬಲಿ ಬೇಕು ನಿಮಗೆ?
