ಮಂಗಳೂರು ಕಮಿಷನರ್ ವರ್ಗಾವಣೆ ಒತ್ತಾಯಿಸಿ ಪ್ರತಿಭಟನೆ, ಬಂಧನ; ಕಮಿಷನರ್ ವರ್ಗಾವಣೆ ಆಗುವವರೆಗೆ ಹೋರಾಟ ಮುಂದುವರಿಸಲು ಡಿವೈಎಫ್ಐ ನಿರ್ಧಾರ

ಕರಾವಳಿ

ಸುರತ್ಕಲ್ : ಹೆದ್ದಾರಿ ದುರಸ್ಥಿಗೆ ಒತ್ತಾಯಿಸಿ ನಡೆದ ಪ್ರತಿಭಟಗೆ ಅನುಮತಿ ನಿರಾಕರಿಸಿ ಹೋರಾಟಗಾರ ಮುನೀರ್ ಕಾಟಿಪಳ್ಳ, ಮತ್ತಿತರರ ಮೇಲೆ ಕೇಸು ದಾಖಲಿಸಿ ಪ್ರಜಾಪ್ರಭುತ್ವವನ್ನು ದಮನಿಸುತ್ತಿರುವ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ವರ್ಗಾವಣೆಗೆ ಒತ್ತಾಯಿಸಿ ಡಿವೈಎಫ್ಐ ನೇತೃತ್ವದಲ್ಲಿ ಇಂದು ಸುರತ್ಕಲ್ ಜಂಕ್ಷನ್ ಬಳಿ ಪ್ರತಿಭಟನೆ ನಡೆಯಿತು.

ಬಿಗು ಪೊಲೀಸ್ ಬಂದೋಬಸ್ತಿನ ನಡುವೆ ಸುರತ್ಕಲ್ ಪೇಟೆಯಲ್ಲಿ ಜಮಾಯಿಸಿದ ಡಿವೈಎಫ್ಐ ಕಾರ್ಯಕರ್ತರು ಕಮಿಷನರ್ ಅಗ್ರವಾಲ್ ವರ್ಗಾವಣೆಗೆ ಒತ್ತಾಯಿಸಿ ಘೋಷಣೆ ಕೂಗಿದರು. ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಭಾಷಣ ಆರಂಭಿಸುತ್ತಿದ್ದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದರು ನಂತರ ಪ್ರತಿಭಟನಾ ನಿರತ ಡಿವೈಎಫ್ಐ ಕಾರ್ಯಕರ್ತರನ್ನು ಬಂಧಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಬಿಕೆ ಇಮ್ತಿಯಾಜ್ ನಗರದಲ್ಲಿ ಪ್ರತಿಭಟನೆ ಹತ್ತಿಕ್ಕುವ ಜನರಲ್ ಡಯರ್ ಮಾದರಿಯ ಪೊಲೀಸ್ ದೌರ್ಜನ್ಯ ಮುಂದುವರಿದಿದೆ. ಶಾಂತಿಯುತ ಪ್ರತಿಭಟನೆ ಮಾಡಲು ಅವಕಾಶ ನೀಡುತ್ತಿಲ್ಲ. ಪೊಲೀಸ್ ಕಮಿಷನರ್ ಪ್ರಶ್ನಾತೀತರೆ ಪೋಲೀಸರು ತಪ್ಪೆಗಿಸಿದರೆ ಪ್ರತಿಭಟನೆ ಮಾಡಬಾರದೇ ಎಂದು ಪ್ರಶ್ನಿಸಿದ ಅವರು ಬಂಧನ ಮತ್ತು ಕೇಸುಗಳಿಗಳಿಂದ ಜನಪರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಕಮಿಷನರ್ ವರ್ಗಾವಣೆ ಆಗುವವರೆಗೆ ಹೋರಾಟ ಮುಂದುವರಿಯಲಿದೆ. ಬಿಜೆಪಿ ಆಡಳಿತದ ಕಾಲದಲ್ಲಿ ನೇಮಕವಾಗಿದ್ದ ಸಂಘಿ ಮನಸ್ಥಿತಿಯ ಕಮಿಷನರ್ ಬದಲಾವಣೆ ಮಾಡದೆ ಬಿಜೆಪಿಯ ರಾಜಕೀಯಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಕಮಿಷನರ್ ಅವರನ್ನು ಉಳಿಸಿಕೊಂಡಿರುವುದು ಜಿಲ್ಲಾಡಳಿತ ಬಿಜೆಪಿಯ ಕಪಿಮುಷ್ಟಿಯಲ್ಲಿದೆ ಎನ್ನುವುದು ಸಾಬೀತಾಗುತ್ತಿದೆ ಎಂದು ಇಮ್ತಿಯಾಜ್ ಟೀಕಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕರಾದ ರಘು ಎಕ್ಕಾರ್, ಕೃಷ್ಣ ತಣ್ಣೀರುಬಾವಿ,ಜೋಕಟ್ಟೆ ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಬಾವ, ಡಿವೈಎಫ್ಐ ಜಿಲ್ಲಾ ಮುಖಂಡರಾದ ರಿಜ್ವಾನ್ ಖಂಡಿಗ, ಅಶ್ರಫ್ ಹರೇಕಳ, ಬಿಕೆ ಮಕ್ಸುದ್, ಶ್ರೀನಾಥ್ ಕುಲಾಲ್, ಸಲೀಂ ಶಾಡೋ, ಸೈಫರ್ ಆಲಿ ಚೊಕ್ಕಬೆಟ್ಟು, ನವಾಜ್ ಕುಳಾಯಿ, ಜೋಯ್ ಡಿಸೋಜ, ಸಾದಿಕ್ ಕಿಲ್ಪಾಡಿ, ಐ ಮೊಹಮ್ಮದ್, ಖಾಲಿದ್ ಕೃಷ್ಣಾಪುರ, ಕಾದರ್ ಅದ್ಯಪಾಡಿ, ಅನಿಲ್ ಪಂಜಿಮೊಗರು, ಮುಸ್ತಫಾ ಅಂಗರಗುಂಡಿ, ಮಹಿಳಾ ಮುಖಂಡರಾದ ಪ್ರಮೀಳಾ ಕಾವೂರು, ಅಸುಂತ ಡಿಸೋಜ, ಆಶಾ ಬೈಕಂಪಾಡಿ, ಯೋಗೀತಾ ಸರಿತಾ ತಣ್ಣೀರುಬಾವಿ ಮುಂತಾದವರು ಉಪಸ್ಥಿತರಿದ್ದರು.