ಅಂತರಾಜ್ಯ ಹೆದ್ದಾರಿಯ ವಿಟ್ಲ-ಉಕ್ಕುಡ-ಪಡಿಬಾಗಿಲು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ.

ಕರಾವಳಿ

ಶಾಸಕ-ಸಂಸದರ ಬೇಜವಾಬ್ದಾರಿಗೆ ವಾಹನ ಚಾಲಕರು ಹೈರಾಣ.

ಅಂತರಾಜ್ಯ ಹೆದ್ದಾರಿಯ ವಿಟ್ಲ- ಉಕ್ಕುಡ- ಪಡಿಬಾಗಿಲು ರಸ್ತೆ ದುರವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಆಟೋರಿಕ್ಷಾ, ಟೂರಿಸ್ಟ್ ಕಾರು, ಖಾಸಗಿ ಬಸ್, ಲಾರಿ ಮಾಲಕರ ಸಂಘದ ವತಿಯಿಂದ ಕಾಶಿಮಠ ಬಳಿ ಪ್ರತಿಭಟನೆ ನಡೆಯಿತು. ಕಲ್ಲಡ್ಕ- ಚೆರ್ಕಳ ಅಂತರಾಜ್ಯ ಹೆದ್ದಾರಿಯ ವಿಟ್ಲದಿಂದ ಪಡಿಬಾಗಿಲು ತನಕದ ಮೂರು ಕಿಲೋಮೀಟರ್ ರಸ್ತೆ ಹೊಂಡಗುಂಡಿಗಳಿಂದಾಗಿ ನಾಪತ್ತೆಯಾಗಿದೆ. ಗುಂಡಿ ತಪ್ಪಿಸುವ ಭರದಲ್ಲಿ ಪ್ರತಿನಿತ್ಯ ವಾಹನ ಅಪಘಾತಗಳು ನಡೆಯುತ್ತಿವೆ. ರಸ್ತೆ ದುರಸ್ತಿಗಾಗಿ ಪಟ್ಟಣ ಪಂಚಾಯತಿಗೆ ದೂರು ನೀಡಿದರೆ ಹೆದ್ದಾರಿ ದುರಸ್ತಿ ನಾವು ಮಾಡುವಂತಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಹೆದ್ದಾರಿ ಇಲಾಖೆಗೆ ದೂರು ನೀಡಿದರೆ ನಾವೇನೂ ಮಾಡುವಂತಿಲ್ಲ ಎಂಬ ಸಬೂಬು ನೀಡುತ್ತಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ, ಬೇಜವಾಬ್ದಾರಿ ವಿರುದ್ಧ ರೋಸಿ ಹೋದ ಸಾರ್ವಜನಿಕರು ವಾಹನ ಚಾಲಕ-ಮಾಲಕ ಸಂಘದ ನೇತೃತ್ವದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಆಟೋರಿಕ್ಷಾ, ಲಾರಿ, ಕಾರು, ಬಸ್ ಮಾಲಕರು-ಚಾಲಕರು ದ್ವಿಚಕ್ರ ವಾಹನ ಸವಾರರು , ಸಾರ್ವಜನಿಕರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಬ್ಯಾನರ್ ಹಿಡಿದು ರಸ್ತೆಯಲ್ಲಿ ಕುಳಿತು ಆಡಳಿತ ವ್ಯವಸ್ಥೆಯ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿಭಟನೆಗೆ ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರ ಬೆಂಬಲ ನೀಡಿದೆ.
ಸ್ಥಳಕ್ಕಾಗಮಿಸಿದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ರಶೀದ್ ಅವರು ರಸ್ತೆ ದುರಸ್ತಿ ಮಾಡುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದೆಗೆಯಲಾಯಿತು.

ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು,ಬಸ್ ಮಾಲಕರಾದ ಅರುಣ್ ವಿಟ್ಲ, ವಿಟ್ಲ ಪಟ್ಟಣ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ವಿಟ್ಲ, ಲಾರಿ ಮಾಲಕ-ಚಾಲಕ ಸಂಘದ ಅಧ್ಯಕ್ಷ ರಮೇಶ್ ವರಪ್ಪಾದೆ, ಆಟೋ ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ವಸಂತ ಎನ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಉದಯಕುಮಾರ್ ಆಲಂಗಾರು, ಪ್ರಮುಖರಾದ‌ ಕೃಷ್ಣಯ್ಯ ವಿಟ್ಲ, ಬಿಜೆಪಿ ಪ್ರಮುಖರಾದ ಮೋಹನದಾಸ್ ಉಕ್ಕುಡ, ನರಸಪ್ಪ ಪೂಜಾರಿ, ಸದಾನಂದ ಗೌಡ ಸೇರಾಜೆ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್, ಜಯಂತ್, ವಸಂತ,ರಿಕ್ಷಾ ಮಾಲಕರಾದ ವೆಂಕಪ್ಪ ನಾಯ್ಕ್ , ಬಾಸ್ಕರ, ಲಾರಿ ಮಾಲಕರಾದ ಜಯಪ್ರಕಾಶ್ , ಹರೀಶ್ ಉಮಾಮಹೇಶ್ವರ, ನಾಗೇಶ್ ಬಸವನಗುಡಿ ಸೇರಿದಂತೆ ನೂರಾರು ನಾಗರಿಕರು ಉಪಸ್ಥಿತರಿದ್ದರು.