ಮಂಗಳೂರಿನ ಪೊಲೀಸ್ ಕಮೀಷನರ್ ಕಾನೂನುಬಾಹಿರವಾಗಿ ನಡೆಯುತ್ತಿದ್ದರೂ ಅವರನ್ನು ಕಣ್ಣು ಮುಚ್ಚಿ ಸಮರ್ಥಿಸುತ್ತಿರುವ ಮಾನ್ಯ ಸಭಾಪತಿಗಳು ಉತ್ತರಿಸಬೇಕು. ಜಿಲ್ಲೆಯೆಲ್ಲೆಡೆ ಪೊಲೀಸರಿಂದ ನೆಮ್ಮದಿಯೇ ಇಲ್ಲದೇ ಇರುವಾಗ ಇನ್ನು ನಿದ್ದೆ ಎಲ್ಲಿಂದ ಸ್ವಾಮಿ ಎಂದು ಸಿಪಿಐಎಂ ಉಳ್ಳಾಲ ತಾಲೂಕು ಸಮಿತಿ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ರವರು ಸ್ಪೀಕರ್ ನಡೆಯನ್ನು ಪ್ರಶ್ನಿಸಿದರು. ಅವರು ಇಂದು ತೊಕ್ಕೊಟ್ಟು ಜಂಕ್ಷನ್ ನಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ ಅಗ್ರವಾಲ್ ವರ್ಗಾವಣೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಮಟ್ಕಾ,, ಜುಗಾರಿ, ಸ್ಕಿಲ್ ಗೇಮ್, ಮಸಾಜ್ ಪಾರ್ಲರ್ ನಂತಹ ಅಕ್ರಮ ಚಟುವಟಿಕೆಗಳು ಮಂಗಳೂರು ನಗರಾದ್ಯಂತ ವ್ಯಾಪಕವಾಗಿ ನಡೆಯುತ್ತಿದ್ದರೂ ಅದರ ವಿರುದ್ದ ಚಕಾರ ಶಬ್ದವೆತ್ತದ ಕಮಿಷನರ್ ಜನಪರ ಹೋರಾಟಗಳನ್ನೇ ಹತ್ತಿಕ್ಕಲು ಮುಂದಾಗಿರುವುದು ಪೋಲಿಸ್ ರಾಜ್ಯವನ್ನು ನಿರ್ಮಿಸಲು ಹೊರಟಂತಿದೆ. ಅಕ್ರಮ ಚಟುವಟಿಕೆಗಳ ರುವಾರಿಯಾದ ಕಮಿಷನರ್ ಅನುಪಮ ಅಗ್ರವಾಲ್ ಅಲ್ಲ ಅಕ್ರಮ ಅಗ್ರವಾಲ್ ಎಂದು ತಮ್ಮ ಹೆಸರನ್ನು ಬದಲಾಯಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡುತ್ತಾ ಪೊಲೀಸ್ ಇಲಾಖೆಯ ಕರ್ತವ್ಯ ಲೋಪಗಳಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟ ಕಾರಣ ಜನ ನೆಮ್ಮದಿಯಿಂದ ನಿದ್ದೆ ಮಾಡುವುದನ್ನು ಮರೆತಿದ್ದಾರೆ. ನೆಮ್ಮದಿ ಇರುತ್ತಿದ್ದರೆ ಮುಕ್ಕಚೇರಿಯ ಜುಬೈರ್ ಹತ್ಯೆಯಾಗುತ್ತಿರಲಿಲ್ಲ. ಸುರತ್ಕಲ್ ನ ಫಾಝಿಲ್, ಕೃಷ್ಣಾಪುರದ ಜಲೀಲ್, ನೆಟ್ಟಾರಿನ ಪ್ರವೀಣ್, ಬೆಳ್ಳಾರೆಯ ಮಸೂದ್ ನಂತಹ ಯುವಕರ ಸಾಲು ಸಾಲು ಕೊಲೆಯಾಗುತ್ತಿರಲಿಲ್ಲ. ಯುವಜನರು ಗಾಂಜಾ ಅಫೀಮಿಗೆ ಬಲಿಯಾಗಿ ಅಕ್ರಮಕೂಟಗಳ ಕಾಲಾಳುಗಳಾಗಿ ದುಡಿದು ಮನೆ ಸೇರದ ಕೊರಗಿಗೆ ಅವರ ಹೆತ್ತ ಕರುಳು ನೆಮ್ಮದಿಯಿಂದ ಮಲಗುವ ದಿನಗಳನ್ನು ಮರೆತಿದ್ದಾರೆ. ಸಭಾಪತಿಗಳು ತಮ್ಮ ಜವಾಬ್ದಾರಿ ಮರೆತ ಕಾರಣ ಉಳ್ಳಾಲದ ಜನ ಮೂಲಭೂತ ಸೌಕರ್ಯಗಳಿಲ್ಲದೆ ಮಲಗಲಾಗದ ಸ್ಥಿತಿ ಎದುರಿಸುತ್ತಿದ್ದಾರೆ. ಕೂಡಲೇ ಕಮೀಷನರ್ ಅಗ್ರವಾಲ್ ಅವರನ್ನು ವರ್ಗಾಹಿಸಲು ಕ್ರಮಕೈಗೊಳ್ಳಿ ಇಲ್ಲವೆಂದಾದರೆ ಅದರ ಪರಿಣಾಮವನ್ನು ನೀವು ಎದುರಿಸಬೇಕಾಗುವ ಸನ್ನಿವೇಶ ಸೃಷ್ಟಿಯಾಗಬಹುದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ ಸುಕುಮಾರ್ ತೊಕ್ಕೊಟ್ಟು, ಹಿರಿಯ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಪದ್ಮಾವತಿ ಶೆಟ್ಟಿ, ವಿಲಾಸಿನಿ ತೊಕ್ಕೊಟ್ಟು, ಪ್ರಮೋದಿನಿ, ರಮೇಶ್ ಉಳ್ಳಾಲ, ಶೇಕರ್ ಕುಂದರ್, ರಫೀಕ್ ಹರೇಕಳ, ಜನಾರ್ಧನ ಕುತ್ತಾರ್,ಚಂದ್ರಹಾಸ ಪಿಲಾರ್, ರೋಹಿದಾಸ್, ಪದ್ಮನಾಭ ಕುಂಪಲ, ಡಿವೈಎಫ್ಐ ಮುಖಂಡರುಗಳಾದ ಅಸ್ಫಕ್ ಅಲೇಕಳ, ರಝಾಕ್ ಮುಡಿಪು, ರಝಾಕ್ ಮೊಂಟೆಪದವು, ಅಶ್ರಫ್ ಹರೇಕಳ, ಅಮೀರ್ ಉಳ್ಳಾಲಬೈಲ್, ನವೀಝ್, ದಿವ್ಯರಾಜ್ ಕುತ್ತಾರ್ , ಸುನೀಲ್ ತೇವುಲ, ಇಕ್ಭಾಲ್ ಹರೇಕಳ, ಸರ್ಫರಾಝ್ ಗಂಡಿ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಅಧ್ಯಕ್ಷರಾದ ನಿತಿನ್ ಕುತ್ತಾರ್ ಸ್ವಾಗತಿಸಿ ನಿರೂಪಿಸಿದರು, ಕಾರ್ಯದರ್ಶಿ ರಿಝ್ವಾನ್ ಹರೇಕಳ ವಂದಿಸಿದರು.