ಹೊರ ಜಿಲ್ಲೆಗಳ ಜೆಸಿಬಿ ಚಾಲಕರ ಮೇಲೆ ಜಿಲ್ಲೆಯ ಜೆಸಿಬಿ ಮಾಲಿಕರಿಂದ ದೌರ್ಜನ್ಯ, ಅನೈತಿಕ ಪೊಲೀಸ್ ಗಿರಿ.

ಕರಾವಳಿ

ಸಾರಿಗೆ ನಿಯಮ ಪಾಲಿಸುವ ಹೊರ ಜಿಲ್ಲೆಗಳ ಜೆಸಿಬಿಗಳಿಗೆ ದೊಣ್ಣೆ ನಾಯಕರ ಅಪ್ಪಣೆ ಬೇಕೇ.?

ಹೌದು. ದ.ಕ.ಜಿಲ್ಲೆಯು ಒಂದಲ್ಲ ಒಂದು ವಿಚಾರದಲ್ಲಿ ನೈತಿಕ ಪೊಲೀಸ್ ಗಿರಿಯಿಂದಲೇ ಕುಖ್ಯಾತಿ ಪಡೆಯುತ್ತಿದೆ. ಇದೀಗ ಇದೇ ಸಾಲಿಗೆ ಜೆಸಿಬಿ ಮಾಲಿಕರ ಸಂಘವೆಂಬ ಒಂದಿಷ್ಟು ಜನರ ತಂಡ ಹೊರ ಜಿಲ್ಲೆಯ ಜೆಸಿಬಿ ಆಪರೇಟರ್ ಮೇಲೆ ದೌರ್ಜನ್ಯ ಎಸಗಿ ನೈತಿಕ ಪೊಲೀಸ್ ಗಿರಿ ನಡೆಸಿದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ.
ಸಾರಿಗೆ ನಿಯಮದ ಪ್ರಕಾರ ಸಾರಿಗೆ ತೆರಿಗೆ, ಇನ್ಸೂರೆನ್ಸ್ ಮತ್ತು ಚಾಲಕನಿಗೆ ಲೈಸೆನ್ಸ್ ಇದ್ದರೂ ಹೊರ ಜಿಲ್ಲೆಗಳ ಜೆಸಿಬಿಗಳು ದ.ಕ.ಜಿಲ್ಲೆಯಲ್ಲಿ ಕೆಲಸ ಮಾಡುವಂತಿಲ್ಲ ಎಂಬ ಹೊಸತೊಂದು ಕಾನೂನು ಜಾರಿಗೆ ಬಂದಿದೆಯೇ.?

ಪುತ್ತೂರು ಹೊರವಲಯದಲ್ಲಿ ವಿಜಾಪುರ ಮೂಲದ ಜೆಸಿಬಿ ಚಾಲಕನನ್ನು ಸ್ಥಳೀಯ ಜೆಸಿಬಿ ಮಾಲಿಕರ ತಂಡ ತಡೆದು ಮನಬಂದಂತೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆಗೆ ಮುಂದಾಗಿದೆ. ನೈತಿಕ ಪೊಲೀಸ್ ಗಿರಿ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

ಸಾರಿಗೆ ನಿಯಮ ಪಾಲಿಸುವ ಹೊರ ಜಿಲ್ಲೆಗಳ ಜೆಸಿಬಿಗಳು ನಮ್ಮ ಜಿಲ್ಲೆಯೊಳಗೆ ಕಾಮಗಾರಿ ನಡೆಸಲು ದೊಣ್ಣೆ ನಾಯಕರ ಅನುಮತಿ ಪಡೆಯಬೇಕೇ.? ದ.ಕ.ಜಿಲ್ಲೆಯಲ್ಲಿ ಸಾರಿಗೆ ನಿಯಮಗಳ ಹೊರತಾಗಿ ಬೇರೊಂದು ಕಾನೂನು ಜಾರಿಯಲ್ಲಿದೆಯೇ.? ಹೊರ ಜಿಲ್ಲೆಗಳು ರಾಜ್ಯದಿಂದ ಬೇರ್ಪಟ್ಟಿದೆಯೇ.? ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತಿದೆ.

ಜಿಲ್ಲಾಡಳಿತ, ಜಿಲ್ಲಾ ಎಸ್ಫಿಯವರು ಈ ಬಗ್ಗೆ ಕಾನೂನು ಕೈಗೆತ್ತಿಕೊಳ್ಳುವ, ಅನೈತಿಕ ಜೆಸಿಬಿ ಪೊಲೀಸ್ ಗಿರಿ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಂಡು ಜಿಲ್ಲೆಯಲ್ಲಿ ನಡೆಯುವ ಅನೈತಿಕ ಪೊಲೀಸ್ ಗಿರಿಯನ್ನು ಮಟ್ಟ ಹಾಕಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ.