ಸ್ಮಾರ್ಟ್ ಸಿಟಿ ಹೆಸರಲ್ಲಿ ಸಿಆರ್ ಝೆಡ್ ನಿಯಮ ಉಲ್ಲಂಘನೆ ಆರೋಪ: ಕಾಮಗಾರಿ ತಡೆಗೆ ರಾಜ್ಯ ಸರಕಾರಕ್ಕೆ ಪತ್ರ

ಕರಾವಳಿ

ಮಂಗಳೂರು ಸ್ಮಾರ್ಟ್ ಸಿಟಿ ಲಿ. ನ ನೇತ್ರಾವತಿ ಜಲಾಭಿಮುಖ ಯೋಜನೆ ( ವಾಟರ್ ಫ್ರಂಟ್) ಗೆ ಸಂಬಂಧಿಸಿ ಸಿಆರ್ ಝೆಡ್ ಕಾನೂನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ( ಎನ್ ಇಸಿಫ್) ಸಂಘಟನೆಯು ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ.

ಯೋಜನೆಗಾಗಿ ನದಿಗೆ ಮಣ್ಣು ತುಂಬಿಸುವ ಹಾಗೂ ನದಿ ದಡದಲ್ಲಿ ಸಿಆರ್ ಝೆಡ್ ಕಾನೂನಿಗೆ ವಿರುದ್ಧವಾಗಿ ಕಾಂಡ್ಲಾ ಮರಗಳನ್ನು ಕಡಿದು ಶಾಶ್ವತ ಗೋಡೆ ಕಟ್ಟುವ ಕಾರ್ಯವನ್ನು ಸ್ಮಾರ್ಟ್ ಸಿಟಿ ಲಿ. ನಿಂದ ಮಾಡಲಾಗುತ್ತಿದೆ. ಈ ಕಾಮಗಾರಿ ತಡೆದು ಸೂಕ್ಷ್ಮ ಕಾಂಡ್ಲಾ ಮರಗಳ ಪ್ರದೇಶವನ್ನು ರಕ್ಷಿಸಬೇಕು ಎಂದು ಒತ್ತಾಯಿಸಲಾಗಿದೆ.

ನೇತ್ರಾವತಿ ನದಿಗೆ ತಾಗಿಕೊಂಡು ಮೋರ್ಗನ್ಸ್ ಗೇಟ್ ನ ಜೆ.ಎಚ್. ಮೋರ್ಗನ್ ಟೈಲ್ ಫ್ಯಾಕ್ಟರಿ ಹಿಂದುಗಡೆ ಎಂಎಸ್ ಸಿ ಎಲ್ ನಿಂದ ಕಾಮಗಾರಿ ನಡೆಯುತ್ತಿದೆ. ಚೆನ್ನೈ ನ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್(ಎನ್ ಜಿಟಿ) ನಡಿ ಈ ಸಂಬಂಧ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿರುವ ನಡುವೆಯೇ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ರಾಜ್ಯ ಸರಕಾರದ ಪರಿಸರ ಹಾಗೂ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಎನ್ ಇಸಿಎಫ್ ವಿವರಿಸಿದೆ.

ಪರಿಸರಕ್ಕೆ ತೊಂದರೆ ಆಗುವ ಮೊದಲು ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಎನ್ ಇ ಸಿಎಫ್ ಕಾರ್ಯದರ್ಶಿ ಶಶಿಧರ ಶೆಟ್ಟಿ ಪಾತ್ರದಲ್ಲಿ ಆಗ್ರಹಿಸಿದ್ದಾರೆ.