ಮನೆ ಮನೆಗೆ ಬಂದು ಕಡಿಮೆ ಬೆಲೆಯ ಅಟೋಮ್ಯಾಟಿಕ್ ಸ್ಟವ್ ನೀಡುವ ವಂಚಕರು.
ಎಂಟು ಸಾವಿರ ಮುಖಬೆಲೆಯ ಅಟೋಮೆಟಿಕ್ ಸ್ಟವ್ ಕೇವಲ ಎರಡು ಸಾವಿರಕ್ಕೆ ಬಂತೆಂದು ಖುಷಿಪಡ್ತೀರಾ ಜೋಕೆ. ಬೈಕುಗಳಲ್ಲಿ ಸುತ್ತಾಡುವ ಉತ್ತರ ಭಾರತ, ಬಾಂಗ್ಲಾ ಮೂಲದ ವಂಚಕರ ತಂಡ ನಾಳೆ ನಿಮ್ಮ ಮನೆಗೂ ಬರ್ತಾರೆ. ಎಂಟು ಸಾವಿರದಿಂದ ಆರಂಭವಾಗುವ ದರ ಚರ್ಚೆ ಇಳಿಯುತ್ತಾ ಕೊನೆಗೆ ಕೇವಲ ಎರಡು ಸಾವಿರಕ್ಕೆ ಬಂದು ನಿಲ್ಲುತ್ತದೆ. ಹೈಫೈ ಅಟೋಮೆಟಿಕ್ ಸ್ಟವ್ ನಿಮ್ ಕೈಗೆ ಕೊಟ್ಟು ಬೈಕ್ ವಾಲಾ ಹೋಗ್ತಾನೆ. ಎರಡು ಸಾವಿರಕ್ಕೆ ಹೈಫೈ ಸ್ಟವ್ ಸಿಕ್ಕಿತೆಂದು ಖುಷಿಪಡುವ ಮುನ್ನ ಎಚ್ಚರ. ಯಾಮಾರಿದರೆ ಹಣವೂ ಹೋಯ್ತು. ಪ್ರಾಣವೂ ಹೋಗುತ್ತೆ.

ನಕಲಿ ಗ್ಲಾಸ್, ನಕಲಿ ಪೈಪ್, ನಕಲಿ ಸ್ಟವ್. ಬಿಲ್ಲೂ ಇಲ್ಲ. ಗ್ಯಾರಂಟಿ ಮೊದಲೇ ಇಲ್ಲ. ಎಲ್ಲವೂ ನಕಲಿಗಳೇ. ಬುದ್ಧಿವಂತರ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಅದೆಷ್ಟೋ ಜನ ಕಳೆದ ಕೆಲದಿನಗಳಿಂದ ಮೋಸ ಹೋಗಿದ್ದಾರೆ. ಬಣ್ಣದ ಮಾತಿಗೆ ಮರುಳಾಗಿ ನಾವೇ ಬುದ್ಧಿವಂತರು ಎಂಬ ಹುಚ್ಚುತನದಿಂದ ಸ್ಟವ್ ಖರೀದಿಸಿ ಮೋಸ ಹೋದ ಹಲವು ಜನ ಪತ್ರಿಕೆಗೆ ಕರೆ ಮಾಡಿ ವರದಿ ಮಾಡುವ ಮೂಲಕ ಇನ್ನಷ್ಟು ಜನ ಮೋಸ ಹೋಗುವುದನ್ನು ತಡೆಯಿರಿ ಎಂದು ನಿವೇದಿಸಿದ್ದಾರೆ.