ರಾಜ್ಯಾದ್ಯಂತ ಡಿಸೆಂಬರ್ 10 ರಿಂದ 12 ರ ವರೆಗೆ ಮೂರು ದಿನಗಳ ಶೋಕಾಚರಣೆ; ಮೂಡಬಿದ್ರೆಯ ಆಳ್ವಾಸ್ ವಿರಾಸತ್ ಗೆ ಅನ್ವಯವಲ್ಲವೇ.?

ರಾಜ್ಯ

ಶೇಖರ್ ಲಾಯಿಲ ಸಾಮಾಜಿಕ ಹೋರಾಟಗಾರ

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಪಾಲರಾಗಿ ಜನಾನುರಾಗಿದ್ದ ಎಸ್. ಎಂ ಕೃಷ್ಣರವರು ನಿಧನರಾಗಿದ್ದು, ಮೃತರ ಗೌರವಾರ್ಥ ಕರ್ನಾಟಕ ರಾಜ್ಯ ಸರ್ಕಾರ ಇಡೀ ರಾಜ್ಯಾದ್ಯಂತ ಡಿಸೆಂಬರ್ 10 ರಿಂದ 12 ರ ವರೆಗೆ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ. ಈ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಆದರೆ ಮೂಡಬಿದಿರೆಯ ಮೋಹನ್ ಆಳ್ವರ ನೇತೃತ್ವದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಳ್ವಾಸ್ ವಿರಾಸತ್ ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಕರ್ನಾಟಕ ರಾಜ್ಯದಲ್ಲಿದೆಯೋ ಅಥವಾ ಹೊರ ರಾಜ್ಯದಲ್ಲಿದೆಯೋ ಅಥವಾ ಕರ್ನಾಟಕ ರಾಜ್ಯ ಸರ್ಕಾರದ ಆದೇಶಗಳು ಇವರಿಗೆ ಅನ್ವಯಿಸುವುದಿಲ್ಲವೋ ಅಥವಾ ತನ್ನ ಅಧಿಕಾರದ ಬಲದಿಂದ ಈ ಆಳ್ವಾಸ್ ವಿರಾಸತ್ ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ನಿನ್ನೆ ಬೆಳಗ್ಗೆಯೇ ರಾಜ್ಯ ಸರ್ಕಾರ ಶೋಕಾಚರಣೆ ಘೋಷಣೆ ಮಾಡಿದ್ದರೂ, ರಾಜ್ಯಸಭೆಯ ಸದಸ್ಯರಾಗಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಆಳ್ವಾಸ್ ವಿರಾಸತ್ ಉದ್ಘಾಟಿಸಿದ್ದಾರೆ. ನಿನ್ನೆ ಸಂಜೆಯಿಂದ ಮಧ್ಯರಾತ್ರಿ ತನಕ ಕಲಾವಿದರಿಂದ ಭಯಂಕರ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ಇಂದು, ನಾಳೆಯೂ ಸಾಂಸ್ಕೃತಿಕ ಕಾರ್ಯಕ್ರಮ ಯಥಾವತ್ತಾಗಿ ನಡೆಯಲಿದೆ ಎಂದರೆ ಮೋಹನ್ ಆಳ್ವರ ಅಧಿಕಾರದ ಮಿತಿಮೀರಿದೆ ಎಂದರ್ಥ ಅಲ್ಲವೇ…? ಆಳ್ವರಿಗೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಸಾಮಾನ್ಯ ಜ್ಞಾನ ಇಲ್ಲವಾಗಿ ಇಂದಿಗೂ ಊಳಿಗಮಾನ್ಯ ವ್ಯವಸ್ಥೆಯನ್ನು ಹೊಂದಿದ್ದರೆ ಇದು ಅವರ ದೌರ್ಬಲ್ಯ , ದೌರ್ಭಾಗ್ಯ ಅಷ್ಟೇ. ರಾಜ್ಯ ಸರ್ಕಾರದ ಶೋಕಾಚರಣೆಯ ನಡುವೆಯೂ ಆಳ್ವಾಸ್ ವಿರಾಸತ್ ನಡೆಯುತ್ತಿರುವುದು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಆರಂಭಿಸಿ ಬಡ ಮಕ್ಕಳ ಹಸಿವು ನೀಗಿಸಿದ ಎಸ್.ಎಂ ಕೃಷ್ಣ ಅವರಿಗೆ ಮಾಡುವ ಅಗೌರವ. ವಿದ್ಯಾವಂತ, ಬುದ್ದಿವಂತರ ಜಿಲ್ಲೆಯ ಜಿಲ್ಲಾಡಳಿತ ನಿದ್ದೆಯಿಂದ ಎದ್ದು ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮ ಜಿಲ್ಲಾಡಳಿತ ಕೂಡ ಮಾಜಿ ಮುಖ್ಯಮಂತ್ರಿಗೆ ಮಾಡುವ ಅವಮಾನ ಎಂದು ತಿಳಿಯಬೇಕಾಗುತ್ತದೆ.

ಶೇಖರ್ ಲಾಯಿಲ ಸಾಮಾಜಿಕ ಹೋರಾಟಗಾರ ಬೆಳ್ತಂಗಡಿ