ಲಾಯಿಲ ಗ್ರಾಮದ ಬರೆಮೇಲು ನಡುಗುಡ್ಡೆ ಎಂಬಲ್ಲಿರುವ ಅಪಾಯಕಾರಿ ಕಾಲುಸಂಕವನ್ನು ಬೆಳ್ತಂಗಡಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು, ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಮನು ಬಿ.ಕೆ, ಪ್ರಧಾನ ಸಿವಿಲ್ ನ್ಯಾಯಾಧೀಶರು, ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ರಾಮಲಿಂಗಪ್ಪರವರು ಅದಿತ್ಯವಾರ ಸಂಜೆ ಭೇಟಿ ನೀಡಿ ವೀಕ್ಷಿಸಿದರು.
ಕಳೆದ ಬುಧವಾರ ಲಾಯಿಲ ಪರಿಶಿಷ್ಟ ಜಾತಿ, ಪಂಗಡಗಳ ವಿಶೇಷ ಗ್ರಾಮಸಭೆಯಲ್ಲಿ ವ್ಯಾಪಕ ಚರ್ಚೆ, ಮಾಧ್ಯಮಗಳ ವರದಿಯ ನಂತರ ಶುಕ್ರವಾರ ಅಧಿಕಾರಿಗಳ ದಂಡು ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇದೀಗ ಬೆಳ್ತಂಗಡಿ ನ್ಯಾಯಾದೀಶರುಗಳಾದ ಮನು ಬಿ.ಕೆ, ರಾಮಲಿಂಗಪ್ಪ ರವರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಿಸಿ, ಸಾರ್ವಜನಿಕರೊಂದಿಗೆ ಮಾತನಾಡಿದರು. ಈ ಕಾಲುಸಂಕವನ್ನು ಅವಲಂಬಿಸಿರುವ ಕುಟುಂಬಗಳ ಮಾಹಿತಿಯೊಂದಿಗೆ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ವಿಶೇಷ ಚೇತನರು, ವಿಧವೆಯರ ಬಗ್ಗೆ ಪ್ರತ್ಯೇಕ ಮಾಹಿತಿಯನ್ನು ಸಂಗ್ರಹಿಸಿ, ಸೋಮವಾರ ಮಧ್ಯಾಹ್ನದೊಳಗೆ ವರದಿ ನೀಡುವಂತೆ ಲಾಯಿಲ ಗ್ರಾಮ ಪಂಚಾಯತಿನ ನ ಪಿಡಿಓ ಹಾಗೂ ಲಾಯಿಲ ಗ್ರಾಮಾಡಳಿತಾಧಿಕಾರಿ ಯವರಿಗೆ ಸೂಚಿಸಿದರು.
ನ್ಯಾಯಾದೀಶರ ಆಗಮನ ಅಭಿವೃದ್ಧಿ ವಂಚಿತ ಬರಮೇಲು ನಡುಗುಡ್ಡೆ ಭೇಟಿ ಮೂಲಕ ಈ ಭಾಗದ ಬಹುಕಾಲದ ಸೇತುವೆಯ ಬೇಡಿಕೆಯೊಂದು ಈಡೇರುವ ಆಶಾ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ.

ಈ ಸಂದರ್ಭದಲ್ಲಿ ನ್ಯಾಯಾದೀಶರ ಜೊತೆಗೆ ಬೆಳ್ತಂಗಡಿ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆನಂದ, ಬೆಳ್ತಂಗಡಿ ಉಪ ತಹಶೀಲ್ದಾರ್ ಮಲ್ಲಪ್ಪ ನಡುಗಡ್ಡಿ, ವೇಣೂರು ಹೋಬಳಿ ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ತಾಲೂಕು ಕಾನೂನು ಸೇವೆಗಳ ಸಮಿತಿಯ ಸಿಬ್ಬಂದಿ ಯಲ್ಲಪ್ಪ ಹಂಗರಗಿ, ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ್, ಲಾಯಿಲ ಗ್ರಾಮಾಡಳಿತಾಧಿಕಾರಿ ರನಿತಾ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ, ದಲಿತ ಮುಖಂಡ ಶೇಖರ್ ಲಾಯಿಲ, ಗ್ರಾಮ ಸಹಾಯಕ ಸತೀಶ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
