ಗಾಯಾಳು ಯುವಕ ವೆನ್ಲಾಕ್ ಆಸ್ಪತ್ರೆಗೆ ದಾಖಲು. ಜಿಲ್ಲಾ ಎಸ್ಪಿಗೆ ದೂರು.
ವಿಟ್ಲ : ವೈದ್ಯರ ಬಳಿ ಚಿಕಿತ್ಸೆಗೆ ಹೋಗುತ್ತಿದ್ದ ಆಟೋ ಚಾಲಕನನ್ನು ಕಬಕ ಬಳಿ ತಂಡವೊಂದು ಅಪಹರಿಸಿ ಮನಬಂದಂತೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಬೋಳಂತೂರು ನಿವಾರಿಸಿ ರಹೀಂ ಯಾನೆ ಅಬ್ದುಲ್ ರಹಿಮಾನ್ ಎಂಬವರು ತಂಡದಿಂದ ಹಲ್ಲೆಗೊಂಡು ಆಸ್ಪತ್ರೆಗೆ ದಾಖಲಾದ ಆಟೋ ಚಾಲಕ.
ತನ್ನ ಆಟೋದಲ್ಲಿ ಪುತ್ತೂರಿನ ವೈದ್ಯರಲ್ಲಿಗೆ ಚಿಕಿತ್ಸೆ ಪಡೆಯುವುದಕ್ಕಾಗಿ ಹೋಗುತ್ತಿದ್ದ ಸಂದರ್ಭ ಕುಕ್ಕರಬೆಟ್ಟು ಎಂಬಲ್ಲಿಗೆ ತಲುಪುತ್ತಿದ್ದಂತೆ ಹಿಂದಿನಿಂದ ಮಾರುತಿ ಬ್ರೆಝಾ ಕಾರೊಂದು ಹಿಂಬಾಲಿಸಿತ್ತೆನ್ನಲಾಗಿದೆ. ಪರಿಚಯಸ್ಥನಾದ ರಾಝಿಕ್ ಎಂಬಾತ ಚಲಾಯಿಸುತ್ತಿದ್ದ ಕಾರಿಗೆ ಮುಂದಕ್ಕೆ ಹೋಗುವಂತೆ ಸೈಡ್ ನೀಡಿದ್ದರೂ ಆತ ಮುಂದಕ್ಕೆ ಹೋಗದ ಕಾರಣ ರಹೀಂ ತನ್ನ ಆಟೋವನ್ನು ಸೂರ್ಯ ಕಡೆಗೆ ತಿರುಗಿಸಿ ಮನೆಯೊಂದರ ಬಳಿ ಬಿಟ್ಟು ಕುಕ್ಕರಬೆಟ್ಟು ಕಡೆಗೆ ಹೋಗಿದ್ದರೆನ್ನಲಾಗಿದೆ.
ಕೆಲ ಹೊತ್ತಿನ ಬಳಿಕ ಆಟೋದ ಬಳಿ ಬಂದಾಗ ರಾಝಿಕ್ ಮತ್ತು ರಮೀಝ್ ಎಂಬಿಬ್ಬರು ರಹೀಂನ ಹಿಡಿದು ಮನಬಂದಂತೆ ಥಳಿಸುತ್ತಿದ್ದಂತೆ ಓಡಿ ಬಚಾವಾಗಲು ಯತ್ನಿಸಿದ್ದಾರೆ. ಆ ಸಮಯ ತನ್ನನ್ನು ಬಲವಂತವಾಗಿ ಹಿಡಿದು ಬುಲ್ಲೆಟ್ ಬೈಕೊಂದರಲ್ಲಿ ಕುಳ್ಳಿರಿಸಿ ಮಿತ್ತೂರು ಮೂಲಕ ಕಬಕ ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಆ ಸಂದರ್ಭ ಅಪಾಯವನ್ನರಿತ ನಾನು ಬೈಕಿನಿಂದ ಜಿಗಿಯಲು ಮುಂದಾದಾಗ ಪಲ್ಟಿಯಾಗಿ ಕಾಲಿಗೆ ಗಂಭೀರ ಗಾಯವಾಗಿದೆ. ಅಲ್ಲಿ ಮತ್ತೆ ಆರೋಪಿಗಳ ತಂಡ ಮಿತ್ತೂರು ಆಟೋ ನಿಲ್ದಾಣದಲ್ಲಿ ನಿಂತಿದ್ದ ಲಾರಿಗೆ ನನ್ನ ತಲೆಯನ್ನು ಗುದ್ದಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದಾರೆ.
ದಯಮಾಡಿ ನನ್ನನ್ನು ಬಿಟ್ಟು ಬಿಡುವಂತೆ ಕೈಮುಗಿದು ಬೇಡಿಕೊಂಡರೂ ಮತ್ತೆ ಆರೋಪಿಗಳು ನನ್ನನ್ನು ರಾಝಿಕ್ ಮನೆ ಬಳಿ ಕರೆತಂದಿದ್ದಾರೆ. ಅಲ್ಲಿ ಬನ್ನೂರು ಯಾಚಿ ಮತ್ತು ಸಫ್ವಾನ್ ಎಂಬಿಬ್ಬರು ಆರೋಪಿಗಳ ಜೊತೆ ಸೇರಿಕೊಂಡು ಬ್ರೆಝಾ ಕಾರಿನೊಳಗೆ ತಳ್ಳಿ ಮನಬಂದಂತೆ ಥಳಿಸುತ್ತಾ ಪುತ್ತೂರು ಕಡೆಗೆ ಕರೆದೊಯ್ದಿದ್ದಾರೆ. ಅಲ್ಲಿ ಬ್ಲೇಡ್ ಹಿಡಿದು ತನ್ನ ಮರ್ಮಾಂಗವನ್ನು ಕತ್ತರಿಸಲು ಮುಂದಾಗಿದ್ದ ಆರೋಪಿಗಳ ತಂಡ ನನ್ನ ಬಳಿಯಿದ್ದ 19 ಸಾವಿರ ನಗದು ಹಣ ಮತ್ತು ಬೆಲೆಬಾಳುವ ಮೊಬೈಲ್ ಫೋನ್ ಕಿತ್ತುಕೊಂಡಿದೆ.
ನಾನು ಕಬಕದ ಸುಮಯ್ಯ ಎಂಬವರ ಜೊತೆ ಆತ್ಮೀಯತೆಯಿಂದ ಇರುವುದನ್ನು ತಪ್ಪಾಗಿ ಅರ್ಥೈಸಿಕೊಂಡು ಧ್ವೇಷಸಾಧನೆಗೋಸ್ಕರ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ದುಷ್ಕೃತ್ಯ ಎಸಗಿದ್ದಾರೆ. ಇನ್ನು ಮುಂದಕ್ಕೆ ಹೆಂಗಸರ ಸುದ್ದಿಗೆ ಬಂದರೆ ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆಯೊಡ್ಡಿದ್ದಾರೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಹೀಂ ದೂರಿನಲ್ಲಿ ವಿವರಿಸಿದ್ದಾರೆ.
ಇದೀಗ ಗಾಯಾಳುವಿನ ಪರಿಸ್ಥಿತಿ ಉಲ್ಬಣಗೊಂಡ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ನೀಡಿದ ದೂರಿನಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಅದ್ಯಾಕೋ ಆರೋಪಿಗಳ ಬಂಧಿಸಿಲ್ಲ. ಅದಕ್ಕಾಗಿ ಇದೀಗ ಗಾಯಾಳು ರಹೀಂ ಯಾನೆ ರಹಿಮಾನ್ ಜಿಲ್ಲಾ ಎಸ್ಪಿ ಯವರಿಗೆ ದೂರು ನೀಡಿದ್ದಲ್ಲದೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತನ್ನ ಜೀವಕ್ಕೆ ತೊಂದರೆಯಾದಲ್ಲಿ ಆರೋಪಿಗಳೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.