ಮಂಗಳೂರು ನಗರ ಪಾಲಿಕೆಯ ಬಿಜೆಪಿ ಆಡಳಿತದಲ್ಲಿ ಮತ್ತೊಂದು ಟಿ.ಡಿ.ಆರ್ ಹಗರಣ: ಮುನೀರ್ ಕಾಟಿಪಳ್ಳ

ಕರಾವಳಿ

ಮಂಗಳೂರು ನಗರ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ನಗರ ಪಾಲಿಕೆ ಯಾವತ್ತೂ ಕಾಣದ ಭ್ರಷ್ಟಾಚಾರ, ಹಗರಣ, ದುರಾಡಳಿತದ ಮೂಲಕ ತನ್ನ ಐದು ವರ್ಷದ ಅವಧಿಯನ್ನು ಪೆಬ್ರವರಿ ಕೊನೆಯಲ್ಲಿ ಪೂರೈಸುತ್ತಿದೆ. ನಗರದ ಅಭಿವೃದ್ದಿಯ ಅಗತ್ಯಕ್ಕೆ ಬಳಸುವ ಟಿ.ಡಿ.ಆರ್ ಈ ಐದು ವರ್ಷದ ಅವಧಿಯ ಉದ್ದಕ್ಕೂ ನಗರ ಪಾಲಿಕೆಯ ಸಂಪತ್ತನ್ನು ಲೂಟಿ ಹೊಡೆಯಲು ಸತತವಾಗಿ ಬಳಕೆಯಾಗಿದೆ. ನಗರ ಪಾಲಿಕೆಯಲ್ಲಿ ಟಿ.ಡಿ.ಆರ್ ಎಂಬ ಪದ ಕೇಳಿದರೆ ಸಾಕು ಬ್ರಹ್ಮಾಂಡ ಭ್ರಷ್ಟಾಚಾರ, ಹಗರಣ ಎಂದು ಜನ ಭಾವಿಸುವಷ್ಟು ದುರುಪಯೋಗ ನಡೆದಿದೆ.

ಬಹಳಷ್ಟು ಆಕ್ರೋಶ, ವಿರೋಧಕ್ಕೆ ಕಾರಣವಾದ, ನಿಯಮಗಳನ್ನು ಉಲ್ಲಂಘಿಸಿ ಖರೀದಿಸಲು ತೀರ್ಮಾನಿಸಿದ ಪಚ್ಚನಾಡಿಯ 11 ಎಕರೆ ನಿರುಪಯೋಗಿ ಜಮೀನು ಟಿ.ಡಿ.ಆರ್ ಹಗರಣ, ಬಡವರ ವಸತಿ ಯೋಜನೆಯ ನೆಪದಲ್ಲಿ ಮರಕಡ ಗ್ರಾಮದಲ್ಲಿ ಹನ್ನೊಂದು ಎಕರೆ ನಿರುಪಯೋಗಿ ಜಮೀನು ಖರೀದಿಸಲು ಪೂರ್ವಭಾವಿ ಅನುಮೋದನೆ ಮೂಲಕ ಅನುಮತಿ ನೀಡಿರುವ ಟಿ.ಡಿ.ಆರ್ ಹಗರಣಗಳು ಹಸಿಯಾಗಿರಾವುಗಲೆ ಪದವು (ಶಕ್ತಿನಗರ) ಗ್ರಾಮದಲ್ಲಿ ಮತ್ತೆ ಮೂರೂವರೆ ಎಕರೆ ನಿರುಪಯೋಗಿ ಜಮೀನು ಬಡವರ ವಸತಿ ಯೋಜನೆ ಹೆಸರಿನಲ್ಲಿ ಖರೀದಿ ಮಾಡಲು ಬಿಜೆಪಿ ಆಡಳಿತ ತೀರ್ಮಾನಿಸಿದೆ. ಬಹಳ ತರಾತುರಿಯಲ್ಲಿ ಪೂರ್ವಭಾವಿ ಅನುಮೋದನೆಯನ್ನೂ ನೀಡಿ ಕಳೆದ ಪರಿಷತ್ ನಲ್ಲಿ ಹೆಚ್ಚುವರಿ ಕಾರ್ಯಸೂಚಿಯಡಿ ಮಂಡಿಸಿದೆ.

ಪದವು ಗ್ರಾಮದಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ 3. ಎಕರೆ 43 ಸೆಂಟ್ ಜಮೀನನ್ನು ಟಿ.ಡಿ.ಆರ್ ಅಡಿ ಖರೀದಿಗೆ ಪೂರ್ವಭಾವಿ ಅನುಮೋದನೆಯನ್ನೂ ನೀಡಿದೆ. ಕಾರ್ಯಸೂಚಿಯಲ್ಲಿ ನೀಡಿರುವ ವಿವರ ಪ್ರಕಾರವೇ ಇದು ನಾಲ್ಕೂ ಕಡೆ ಇಳಿಜಾರಿನಿಂದ ಕೂಡಿದ ನಿರುಪಯೋಗಿ ಜಮೀನು. ಸಮತಟ್ಟುಗೊಳಿಸುವುದೇ ಅತ್ಯಂತ ದುಬಾರಿ ಕಾರ್ಯ. ರಸ್ತೆ ಸಂಪರ್ಕವೂ ತೀರಾ ಕಿರಿದಾಗಿದೆ. ಖಾಸಗಿಯವರಿಗೆ ವಸತಿ ಸಂಕೀರ್ಣ ಕಟ್ಟಲು ಅಸಾಧ್ಯವಾಗುವ ಜಮೀನು ಬಡವರ ವಸತಿ ಯೋಜನೆಗೆ ಪ್ರಶಸ್ತವಾಗುವುದು ಅದ್ಭುತವೇ ಸರಿ. ಅದೂ ಅಲ್ಲದೆ, ವಸತಿ ಯೋಜನೆಗೆ ಟಿ.ಡಿ.ಆರ್ ಅಡಿ ಖರೀದಿಸಲು ಸೂಕ್ತ ಜಮೀನು ಬೇಕು ಎಂದು ನಗರ ಪಾಲಿಕೆಯು ಯಾವುದೋ ಪತ್ರಿಕೆಯ, ಯಾರೂ ನೋಡದ ಮೂಲೆಯಲ್ಲಿ ಜಾಹೀರಾತು ಪ್ರಕಟನೆ ನೀಡಿದ 48 ಗಂಟೆಯ ಅವಧಿಯೊಳಗಡೆ ಈ ಜಮೀನಿನ ಮಾಲಕ ದಾಖಲೆಗಳ ಸಮೇತ ನಗರ ಪಾಲಿಕೆಯ ಅಧಿಕಾರಿಗಳ ಮುಂದೆ ಹಾಜರಾಗಿರುವುದು ನಿಜಕ್ಕೂ ಜಗತ್ತಿನ ಎಂಟನೇ ಅದ್ಭುತ.

ಈ ಅದ್ಭುತಗಳು ಸಾಲದು ಎಂಬಂತೆ, ಬಡವರಿಗೆ ಒಂದು ಮನೆಯನ್ನೂ ನಿರ್ಮಿಸದ ಬಿಜೆಪಿ ಆಡಳಿತ ಟಿ.ಡಿ.ಆರ್ ಅಡಿ ಸರಣಿಯಾಗಿ ರಿಯಲ್ ಎಸ್ಟೇಟ್ ಲಾಬಿಗಳ ನಿರುಪಯೋಗಿ ಜಮೀನು ಖರೀದಿಸುವುದು, ಅದು ಹಗರಣವಾಗುತ್ತಿರುವುದು, ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ, ಪಾಲಿಕೆಯ ವಿಪಕ್ಷ ಕಾಂಗ್ರೆಸ್ ನ ಕಾರ್ಪೊರೇಟರ್ ಗಳು ಪರಿಷತ್ ಸಭೆಯಲ್ಲಿ ಒಂದು ಶಬ್ದದ ವಿರೋಧವನ್ನೂ ದಾಖಲಿಸುವುದಿಲ್ಲ. ಈ ಭಾರಿಯೂ ಅಷ್ಟೆ, “ಪದವು ಗ್ರಾಮದ ಮೂರೂವರೆ ಎಕರೆ ಜಮೀನು ವಸತಿ ಯೋಜನೆಗೆ ಯೋಗ್ಯವೆ ? ಒಮ್ಮೆ ಜಂಟಿ ನಿಯೋಗ ಹೋಗಿ ಪರಿಶೀಲನೆ ಮಾಡಬೇಕಲ್ಲ, ಪರಿಷತ್ ಗೆ ಮಂಡನೆ ಮಾಡುವ ಮುಂಚೆ ಪೂರ್ವಭಾವಿ ಅನುಮೋದನೆ ನೀಡುವ ತುರ್ತು ಏನಿತ್ತು ? ಪ್ರಧಾನ ಕಾರ್ಯಸೂಚಿಯಲ್ಲಿ ದಾಖಲಿಸದೆ, ಹೆಚ್ಚುವರಿ ಕಾರ್ಯಸೂಚಿಯಲ್ಲಿ ದಾಖಲಿಸಲು ಕಾರಣ ಏನು ? ಇದು ಭ್ರಷ್ಟಾಚಾರ, ಹಗರಣಕ್ಕೆ ಸಾಕ್ಷಿ ಅಲ್ಲವೆ ? ನಿಮ್ಮ ಯೋಗ್ಯತೆಗೆ ಹಿಂದಿನ (ಕಾಂಗ್ರೆಸ್ ಆಡಳಿತದ) ವಸತಿ ಯೋಜನೆಯನ್ನೆ ಪೂರ್ಣಗೊಳಿಸಿಲ್ಲ ಯಾಕೆ ? ಹಿಂದಿನ ಟಿ.ಡಿ.ಆರ್ ಹಗರಣಗಳು ಸಾಲದೆ ? ನಮ್ಮ ವಿರೋಧ ಇದೆ ” ಹೀಗೆ ಒಂದು ಸಾಲಿನ ವಿರೋಧವನ್ನೂ ಕಾಂಗ್ರೆಸ್ ಕಾರ್ಪೊರೇಟರ್ ಗಳು ದಾಖಲಿಸದೆ ಬಿಜೆಪಿ ಆಡಳಿತದ ಮತ್ತೊಂದು ಟಿ.ಡಿ.ಆರ್ ಹಗರಣಕ್ಕೆ ಜೈ ಅಂದಿದ್ದಾರೆ. ತಮ್ಮ ಮೌನ ಸಮ್ಮತಿ ನೀಡಿದ್ದಾರೆ.

ವಿಶೇಷ ಅಂದರೆ, ತನ್ನ ಐದು ವರ್ಷಗಳ ಆಡಳಿತದಲ್ಲಿ ಬಿಜೆಪಿ ವಸತಿ ರಹಿತ ಬಡವರಿಗೆ ಒಂದೇ ಒಂದು ಮನೆ ನಿರ್ಮಿಸಿಲ್ಲ, ಕಳೆದ ಅವಧಿಯ ಕಾಂಗ್ರೆಸ್ ಸರಕಾರ ಹಾಗೂ ಪಾಲಿಕೆ ಆಡಳಿತದಲ್ಲಿ ಮಂಜೂರಾಗಿ ಸುರತ್ಕಲ್ ಸಮೀಪ ನಿರ್ಮಾಣ ಹಂತದಲ್ಲಿರುವ 600 ಮನೆಗಳ ವಸತಿ ಯೋಜನೆಯನ್ನು ಬಿಜೆಪಿ ಆಡಳಿತದಲ್ಲಿ ಅರ್ಧದಲ್ಲೆ ನಿಲ್ಲಿಸಲಾಗಿದೆ. ಆ ವಸತಿ ಯೋಜನೆಯ ಫಲಾನುಭವಿ ಬಡವರು ಅಸಹಾಯಕತೆಯಿಂದ ಆಕಾಶ ನೋಡುತ್ತಾ ಕೂತಿದ್ದಾರೆ.

ಆದರೆ, ಅದೇ ಬಿಜೆಪಿ ನಗರಾಡಳಿತ ಬಡ ವಸತಿ ರಹಿತರ ವಸತಿ ಯೋಜನೆಗೆ ಎಂದು ಟಿ.ಡಿ.ಆರ್ ಅಡಿ ಸರಣಿಯಾಗಿ ಹತ್ತಾರು ಎಕರೆ ಖಾಸಗಿ ಜಮೀನು ಖರೀದಿ ಮಾಡುತ್ತಲೆ ಇದೆ. ಇವರ ಈ ಬಡವರ ಪರ ಕಾಳಜಿ ನಿಜಕ್ಕೂ ಅದ್ಭುತ. ಆದರೆ, ಈ ಜಮೀನುಗಳೆಲ್ಲ ಬಲಾಢ್ಯ ರಿಯಲ್ ಎಸ್ಟೇಟ್, ಬಿಲ್ಡರ್ ಗಳಿಗೆ ಸೇರಿದ್ದು, ಮತ್ತು, ಅವರ ಪಾಲಿಗೆ ವಸತಿ ಯೋಜನೆಯ ಮಟ್ಟಿಗೆ ನಿರುಪಯೋಗಿ ಅನಿಸಿರುವಂತದ್ದು. ಅದಕ್ಕಾಗಿ, ದುಬಾರಿ, ಆಕಾದೆತ್ತರದ ಬಹು ಮಹಡಿ ವಸತಿ ಸಂಕೀರ್ಣ ಕಟ್ಟುವ ಸಂದರ್ಭ ಅತ್ಯಗತ್ಯವಾಗುವ ಕೋಟ್ಯಾಂತರ ರೂ ಮೌಲ್ಯದ ಟಿ.ಡಿ.ಆರ್ ಸರ್ಟಿಫಿಕೇಟ್ ಪಡೆದು ನಗರ ಪಾಲಿಕೆಗೆ ದಾಟಿಸುತ್ತಿದೆ. ಬಲಾಢ್ಯ ಬಿಲ್ಡರ್ ಗಳು ವಸತಿ ಸಂಕೀರ್ಣ ಕಟ್ಟಲು ಅಸಾಧ್ಯ ಎಂದು ಭಾವಿಸಿರುವ ಜಮೀನುಗಳು ಬಡವರಿಗೆ ವಸತಿಯೋಜನೆ ನಿರ್ಮಾಣಕ್ಕೆ ಯೋಗ್ಯವಾಗಲು ಸಾಧ್ಯವೇ ?