ಉಡುಪಿ: ಮಹಿಳಾ ಪೀಡಕ ಅಧಿಕಾರಿ ಎತ್ತಂಗಡಿ.!

ಕರಾವಳಿ

ಈ ಬಗ್ಗೆ ಸ್ಪೆಷಲ್ ನ್ಯೂಸ್ ಮೀಡಿಯಾ ಸಮಗ್ರ ವರದಿ ಪ್ರಕಟಿಸಿತ್ತು

ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿರುವ ಡಾ. ಅಶೋಕ್ ಹೆಚ್ ಇವರು ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿ ದಂಡನೆಗೆ ಒಳಗಾಗಿದ್ದರು. ಆದರೆ ರಾಜ್ಯ ಕಾಂಗ್ರೆಸ್ ಸರಕಾರ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶಿಫಾರಸ್ಸು ಮೇರೆಗೆ ಅವರಿಗೆ ಭಡ್ತಿ ನೀಡಲಾಗಿತ್ತು. ಡಾ. ಅಶೋಕ್ ಹೆಚ್ ಎನ್ ಎಂ ಸಿ ಇಲ್ಲವೇ ಎಂಸಿಐ ಯಿಂದ ಮಾನ್ಯತೆ ಪಡೆದ ಕ್ಲಿನಿಕಲ್ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಪಿಜಿ) ಮಾಡಿದವರಲ್ಲ. ಈ ಕಾರಣಕ್ಕೆ ಉನ್ನತ ಹುದ್ದೆಗೇರುವ ಯಾವ ಅವಕಾಶವೂ ನಿಯಮಾವಳಿಗಳ ಪ್ರಕಾರ ಇವರಿಗೆ ಇಲ್ಲ. ಆದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಶೇಷ ಆಸಕ್ತಿ ವಹಿಸಿ ಭಡ್ತಿ ನೀಡಿ ಆದೇಶ ಹೊರಡಿಸಿದ ಹಿಂದಿನ ಮರ್ಮವೇನು..? ಈ ಬಗ್ಗೆ ಸ್ಪೆಷಲ್ ನ್ಯೂಸ್ ಮೀಡಿಯಾ ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಜನವರಿ ಸಂಚಿಕೆಯಲ್ಲಿ ಸ್ಪೆಷಲ್ ನ್ಯೂಸ್ ಪತ್ರಿಕೆ ಕೂಡಾ ಸಂಪೂರ್ಣ ವಿವರ ಪ್ರಕಟಿಸಿತ್ತು.

ಇದೀಗ ರಾಜ್ಯ ಸರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಉಡುಪಿ ಜಿಲ್ಲಾ ಸರ್ಜನ್ ಆಗಿದ್ದ ಡಾ. ಎಚ್. ಅಶೋಕ್ ಅವರನ್ನು ಜಿಲ್ಲಾ ಸರ್ಜನ್ ಹುದ್ದೆಯಿಂದ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ. ಮುಂದಿನ ಆದೇಶದವರೆಗೆ ಡಾ. ಎಚ್. ಅಶೋಕ್ ಅವರಿಗೆ ಯಾವುದೇ ಸ್ಥಾನ, ಹುದ್ಧೆ ತೋರಿಸದೆ ಕೇಂದ್ರ ಕಚೇರಿಗೆ ಬಂದು ವರದಿ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ನೂತನ ಪ್ರಭಾರ ಜಿಲ್ಲಾ ಸರ್ಜನ್ ರನ್ನಾಗಿ ನೇತ್ರತಜ್ಞರಾದ ಡಾ. ನಿತ್ಯಾನಂದ ನಾಯಕ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.

2018 ರಲ್ಲಿ ಮಂಗಳೂರಿನಲ್ಲಿ ಆರ್.ಸಿ.ಹೆಚ್ ಅಧಿಕಾರಿಯಾಗಿದ್ದಾಗ
ಡಾ. ಅಶೋಕ್, ಇಲಾಖೆಯ ಹಲವು ಮಂದಿ ಮಹಿಳಾ ನೌಕರರಿಗೆ ಲೈಂಗಿಕ‌ ಕಿರುಕುಳ, ಮಾನಸಿಕ ಹಿಂಸೆ ನೀಡಿದ ಹಲವು ದೂರುಗಳು ಸಲ್ಲಿಕೆಯಾಗಿತ್ತು‌.

ಮಹಿಳಾ ನೌಕರರ ದೂರಿನ ಮೇಲೆ ಆರಂಭದಲ್ಲಿ ಜಿಲ್ಲಾ ಮಟ್ಟದ ಆಂತರಿಕ ದೂರು ಸಮಿತಿಯು ತನಿಖೆ ನಡೆಸಿ ವರದಿ ಸಲ್ಲಿಸಿತ್ತು ಮತ್ತು ಮುಂದುವರಿದು ಜಿಲ್ಲಾ ದಂಡಾಧಿಕಾರಿಗಳು ಸಹ ವಿಚಾರಣಾ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದರು. ಈ ತನಿಖೆಯಲ್ಲಿ ಡಾ. ಅಶೋಕ್ ಮೇಲಿನ ದೂರುಗಳು ನಿಜವೆಂದು ಸಾಬೀತಾಗಿತ್ತು. ನಂತರ ವಿಚಾರಣಾ ವರದಿಯ ಆಧಾರದಲ್ಲಿ ಡಾ. ಅಶೋಕ್ ಅವರಿಗೆ ದಂಡನೆಯಾಗಿ ಅವರ ವೇತನ ಶ್ರೇಣಿಯನ್ನು ಐದು ವರ್ಷಗಳ ಹಿಂದಿನ ಹಂತಕ್ಕೆ ಇಳಿಸಿ (ವೇತನ ಹಿಂಭಡ್ತಿ) ಸರಕಾರ ಆದೇಶಿಸಿತ್ತು.

ಅಮಾನತುಗೊಂಡ ಕೆಲ ತಿಂಗಳ ನಂತರ ಅಮಾನತು ತೆರವುಗೊಂಡು ಮರುನಿಯುಕ್ತಿಗೊಂಡ ಡಾ. ಅಶೋಕ್ ಅವರನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಶೇಷ ಆಸಕ್ತಿ ವಹಿಸಿ ನಿಯಮ ವಿರುದ್ಧವಾಗಿ ಅರ್ಹತೆ ಇಲ್ಲದಿದ್ದರೂ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿ ನೇಮಕ ಮಾಡಿದ್ದರು. ಆದರೆ ಇದೀಗ ಡಾ. ಅಶೋಕ್ ಅವರ ಮೇಲಿದ್ದ ಲೈಂಗಿಕ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಜನ್ ಹುದ್ದೆಯಿಂದ ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.