ಗಂಜಿಮಠ ಗ್ರಾಮ ಪಂಚಾಯತ್ ದಿಢೀರ್ ಕಾರ್ಯಾಚರಣೆ: ಬಿಸಿ ಮುಟ್ಟಿಸಿದ ಜನಪ್ರತಿನಿಧಿಗಳು, ಘರ್ಜಿಸಿದ ಜೆಸಿಬಿ.!

ಕರಾವಳಿ

BIG IMPACT

ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ವಸತಿ ಸಮುಚ್ಚಾಯದ,ಹೊಟೇಲಿನ,ಬಾರ್,ವಸತಿಗೃಹಗಳ ಕೊಳಚೆ ನೀರು ಮತ್ತು ಡ್ರೈನೇಜ್ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಜನ ತೊಂದರೆ ಪಡುತ್ತಿದ್ದಾರೆ. ಮಾತ್ರವಲ್ಲದೆ ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ. ವಸತಿ ಸಮುಚ್ಚಾಯದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ತ್ಯಾಜ್ಯದಿಂದ ತುಂಬಿದ ಕೊಳಚೆ ನೀರು ಸರಾಗವಾಗಿ ರಸ್ತೆಯ ಮೇಲೆ ಹರಿಯುತ್ತಿದೆ. ಕೊಳಚೆ ನೀರು ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಆದರೆ ಗಂಜಿಮಠ ಗ್ರಾಮ ಪಂಚಾಯತ್ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಇತ್ತೀಚೆಗಷ್ಟೇ ಸ್ಪೆಷಲ್ ನ್ಯೂಸ್ ಸಮಗ್ರ ವರದಿಯನ್ನು ಬಿತ್ತರಿಸಿತ್ತು.

ಆದರೆ ಇದೀಗ ಎಚ್ಚೆತ್ತು ಕೊಂಡ ಗ್ರಾಮ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಪಂಚಾಯತ್ ವ್ಯಾಪ್ತಿಯ ವಸತಿ ಸಮುಚ್ಛಯ, ಬಾರ್, ಹೋಟೆಲ್, ಅಂಗಡಿ ಮುಂಗಟ್ಟುಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪಂಚಾಯತ್ ವ್ಯಾಪ್ತಿಯ ಕೈಕಂಬ ವೇಗವಾಗಿ ಬೆಳೆಯುತ್ತಿರುವ ಪ್ರದೇಶ ಆಗಿರುವುದರಿಂದ ಡ್ರೈನೇಜ್ ನೀರು, ಕೊಳಚೆ ನೀರನ್ನು ಬೇಕಾಬಿಟ್ಟಿಯಾಗಿ ಬಿಡುವ ಮೂಲಕ ಡೆಂಗ್ಯೂ, ಮಲೇರಿಯಾ ದಂತಹ ಮಹಾಮಾರಿ, ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುತ್ತಿದ್ದಾರೆ. ಇದೀಗ ಪಂಚಾಯತ್ ಅಧಿಕಾರಿಗಳು,ಜನಪ್ರತಿನಿಧಿಗಳು ಬಿಸಿ ಮುಟ್ಟಿಸಿದ್ದು, ಎಲ್ಲೆಂದರಲ್ಲಿ ಡ್ರೈನೇಜ್, ಕೊಳಚೆ ನೀರನ್ನು ಬಿಟ್ಟರೆ ದಂಡ ವಿಧಿಸುವ, ಲೈಸೆನ್ಸ್ ರದ್ದುಪಡಿಸುವ ಎಚ್ಚರಿಕೆ ನೀಡಿದ್ದಾರೆ.ಅಲ್ಲದೆ ಜೆಸಿಬಿ ತಂದು ಕಾರ್ಯಾಚರಣೆ ನಡೆಸಿ ಕೊಳಚೆ ನೀರು ಬರುವ ಪೈಪ್ ಗಳನ್ನು ಬಂದ್ ಮಾಡಿ ಬಿಟ್ಟಿರುತ್ತಾರೆ ಎಂದು ತಿಳಿದುಬಂದಿದೆ. ವಸತಿ ಸಮುಚ್ಚಯ, ಬಾರ್, ಹೋಟೆಲ್, ರೆಸ್ಟೋರೆಂಟ್ ಗಳು ಡ್ರೈನೇಜ್, ಕೊಳಚೆ ನೀರು ಬಿಡಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಆದೇಶಿಸಿರುವುದಾಗಿ ತಿಳಿದುಬಂದಿದೆ.

ಕೊನೆಗೂ ನಿದ್ರಾವಸ್ಥೆಯಿಂದ ಎಚ್ಚೆತ್ತು ಕೊಂಡು,ಮೂಲಭೂತ ಸಮಸ್ಯೆ ಬಗ್ಗೆ ಕಾಳಜಿ ವಹಿಸಿ, ಬಿಸಿ ಮುಟ್ಟಿಸಿದ ಗಂಜಿಮಠ ಗ್ರಾಮ ಪಂಚಾಯತ್ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕ್ರಮದ ಬಗ್ಗೆ ನಾಗರೀಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.