ಅಕ್ರಮ ಕಟ್ಟಡ, ನಕಲಿ ಭೂ ಗಡಿ ಗುರುತು, ಅಕ್ರಮ ತಿದ್ದುಪಡಿ, ಕಡತ ನಾಶ ಇದರ ಬಗ್ಗೆ ಸಮಗ್ರ ತನಿಖೆಗೆ ಸೂಕ್ತವಾದ ತನಿಖಾ ಆಯೋಗವನ್ನು ರಚಿಸಿ
ಮಂಗಳೂರು: ಕಳೆದ ಹಲವಾರು ವರ್ಷಗಳಿಂದ ಮೂಡ ತನ್ನ ವ್ಯಾಪ್ತಿಯಲ್ಲಿ ‘ ಅನುಮೋದನೆ ‘ ಗೊಳಿಸಿದ ಭೂನಗರೀಕರಣ ದಾಖಲೆಗಳಾದ ಏಕ ನಿವೇಶನ ಅನುಮೋದನೆ ಪತ್ರ, ವಲಯ ಅನ್ಯಕ್ರಾಂತ ನಿರಾಕ್ಷೇಪಣಾ ಪತ್ರಗಳ ಕಚೇರಿ ಕಡತಗಳನ್ನು ತನ್ನ ಕಚೇರಿಯ ಅಭಿಲೇಖಾಲಯದಲ್ಲಿ ಕನಿಷ್ಠ ಪಕ್ಷ ಮುಂದಿನ ಮೂವತ್ತು ವರ್ಷದ ಅವಧಿಗೆ ಕಾಯ್ದಿರಿಸಿ ಕೊಂಡು ಬರಬೇಕಾದುದು ಸರಕಾರಿ ನಿಯಮ. ಅಂತಹ ಕಾಯ್ದಿರಿಸುವಿಕೆ ಸರಕಾರದ ಜವಾಬ್ದಾರಿ ಕೂಡ ಹೌದು. ಅದಕ್ಕೆ ಬೇಕಾದ ಸಂಪೂರ್ಣ ಅಭಿಲೇಖಲಯ, ಅಂಗಣ, ಕಚೇರಿ, ಮಜಲು ಕಪಾಟು, ಸಿಬ್ಬಂದಿ ಇತ್ಯಾದಿಯನ್ನು ಪಾಲಿಸಿ ನಿರ್ವಹಿಸುವುದು ಕೂಡ ಇಲಾಖೆಯ ಜವಾಬ್ದಾರಿ ಕೂಡ ಹೌದು.
ಸರಕಾರಿ ದಾಖಲೆಗಳ ಮುಕ್ತ ಲಭ್ಯತೆ, ಆಸ್ತಿಗಳ ಮೌಲ್ಯವನ್ನು ಸ್ತಿರೀಕರಿಸುತ್ತದೆ. ಮತ್ತು ಆ ಮೂಲಕ ಆಸ್ತಿಗಳ ಮೌಲ್ಯದ ಗಣನೆಯ ಆಧಾರದಲ್ಲಿ ಸರಕಾರ ವಾರ್ಷಿಕ ಕಂದಾಯ ಸಂಗ್ರಹ, ಶುಲ್ಕ ವಸೂಲಾತಿ, ಸವಲತ್ತು ಪೂರೈಕೆ, ಗುಣಮಟ್ಟ ನಿರ್ಧರಣೆ ಮಾಡಲಾಗುತ್ತದೆ. ಆದರೆ ದಾಖಲೆಗಳ ಅಲಭ್ಯತೆ, ನಗರ ಯೋಜನೆಯ ಮೂಲ ಉದ್ದೇಶವನ್ನೇ ಸ್ಥಗಿತ ಗೊಳಿಸುತ್ತದೆ. ಹಾಲಿ ಮೂಡ ಅಕ್ರಮತೆಯ ಗಂಭೀರತೆ ವೀಕ್ಷಣೆ ಮಾಡುವಾಗ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮೂಡ ಬಿಡುಗಡೆ ಗೊಳಿಸಿದ ಅದೆಷ್ಟೋ ದಾಖಲೆಗಳ ಉಲ್ಲೇಖಿತ ಕಚೇರಿ ಕಡತಗಳ ಅಭಿಲೇಖಾಲಯದಿಂದ ಇತ್ತೀಚೆಗೆ ವ್ಯವಸ್ಥಿತವಾಗಿ ಸ್ಥಾನ ಪಲ್ಲಟವಾಗಿದೆ ಎಂದು ಅರಿವಾಗಿದೆ. ಮೂಡ ಅಕ್ರಮತೆ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಧಾಳಿ ನಡೆಸಿದ ಕೆಲವು ದಿನಗಳ ಅಂತರದಲ್ಲಿ ನೂರಾರು ಕಚೇರಿ ಕಡತಗಳು ಅಗ್ನಿಗೆ ಇಂಧನವಾದ ಮಾಹಿತಿ ಲಭ್ಯವಾಗಿದೆ.

ಪ್ರಾಧಿಕಾರದ ಅಭಿಲೇಖಲಯದ ಕಣ್ಮರೆಯಾದ ಒಟ್ಟು ಕಡತಗಳ ಸಂಖ್ಯೆಯನ್ನು ಆಯುಕ್ತರು ಬಹಿರಂಗ ಪಡಿಸಬೇಕು. ಕಡತ ನಾಪತ್ತೆ ಆಗಲು ಕಾರಣರಾದ ಅಧಿಕಾರಿ, ಭೂ ಮಾಫಿಯಾ ವ್ಯಕ್ತಿಗಳ ಬಗ್ಗೆ ಕೂಡಾ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕ ಮಾಹಿತಿ ನೀಡಬೇಕಿದೆ. ಸಾರ್ವಜನಿಕರು ಬಹು ಮೌಲ್ಯ ಹೊಂದಿದ ಆಸ್ತಿಗಳನ್ನು ಖರೀದಿಸುವಾಗ ಮತ್ತು ತಮ್ಮ ಅಮೂಲ್ಯ ಹಣವನ್ನು ಹೂಡಿಕೆ ಮಾಡುವಾಗ ಸರಕಾರಿ ದಾಖಲೆಗಳ ಅಲಭ್ಯತೆ ಸಾರ್ವಜನಿಕ ಹಣದ ಭದ್ರತೆಯನ್ನು ಕ್ಷೀಣಿಸುತ್ತದೆ ಮತ್ತು ಮಿತ ಮೌಲ್ಯಗೊಳಿಸುತ್ತದೆ. ಈ ನಿಟ್ಟಿನಲ್ಲಿ ಆಯುಕ್ತರು ಮೂಡ ಅಕ್ರಮದ ಬಗ್ಗೆ ಅಂಕಿ ಅಂಶಗಳನ್ನು ಬಹಿರಂಗಪಡಿಸಿ ಸಾರ್ವಜನಿಕರನ್ನು ಜಾಗೃತಿ ಗೊಳಿಸಲಿ.
ಕಳೆದ ಹಲವಾರು ವರ್ಷಗಳಿಂದ ಮೂಡದಲ್ಲಿ ಆದ ಅಕ್ರಮದ ಪರಿಣಾಮ ಅದಕ್ಕೆ ಬಲಿಯಾದ ಕಟ್ಟಡಗಳನ್ನು ಗುರುತಿಸಿ ಕಪ್ಪು ಪಟ್ಟಿಗೆ ಸೇರಿಸಿ ದಿಕ್ಚುತಿ ಮಾಹಿತಿ ನೀಡಲಿ. ಕಟ್ಟಡ ರಚನೆ ನಿರ್ಮಾಣದ ಸಿವಿಲ್ ಇಂಜಿನಿಯರ್ ಗಳನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಲು ಶಿಫಾರಸು ನೀಡಬೇಕಿದೆ. ನೈಜ ಕಡತಗಳನ್ನು ರಾಜ್ಯ ಮಾತೃ ಇಲಾಖೆಯಾದ ನಗರಾಭಿವೃದ್ಧಿ ಇಲಾಖೆಯ ವಹಿಗಳಲ್ಲಿ ನೋಂದಾವಣೆ ಗೊಳಿಸಬೇಕಿದೆ. ಪ್ರಾದೇಶಿಕ ಇಲಾಖೆಯಾದ ಮೂಡದ ಮೇಲೆ ಜನರ ವಿಶ್ವಾಸ ಕಳೆದು ಹೋಗಿದ್ದು, ಕಡತ ಅಕ್ರಮತೆಯಿಂದ ಅಪಮೌಲ್ಯಗೊಂಡ ಸ್ತಿರಾಸ್ತಿಯನ್ನು ಸರಕಾರ ಸಕ್ರಮೀಕರಣ ಗೊಳಿಸಬೇಕಿದೆ. ಮತ್ತು ರಾಜ್ಯಪತ್ರದಲ್ಲಿ ಪ್ರಕಟಿಸಬೇಕಾಗಿದೆ.
ಮೂಡದಲ್ಲಿ ಹಲವಾರು ವರ್ಷಗಳಿಂದ ಕಡತ ಅಕ್ರಮತೆಗೊಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಮಧ್ಯವರ್ತಿಗಳು, ಬ್ರೋಕರ್ ಗಳು, ರಾಜಕರಣಿಗಳ ಚೇಲಾಗಳು, ಭೂ ಮಾಪಿಯಾಗಳು, ನಕಲಿ ವೃತ್ತಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕಿದೆ. ಮಾತ್ರವಲ್ಲದೆ ತನಿಖಾಧಿಕಾರಿಗಳು ಸಮಗ್ರವಾಗಿ ಕೂಲಂಕುಷ ತನಿಖೆ ನಡೆಸಿದರೆ, ಮೂಡ ಕಡತಗಳಿಗೆ ಅಕ್ರಮ ಪೂರಕ ದಾಖಲೆ ನೀಡಿದ ಇತರ ಇಲಾಖೆ ಅಧಿಕಾರಿಗಳ, ಮಧ್ಯವರ್ತಿಗಳ, ರಾಜಕರಣಿಗಳ ಚೇಲಾಗಳ, ನಕಲಿ ವಕೀಲರ ದಂಡನ್ನು ತನಿಖೆಗೆ ಒಳಪಡಿಸಬೇಕಿದೆ. ಮೂಡದ ಕಡತ ಅಕ್ರಮತೆಯಿಂದಾಗಿ ಸರಕಾರದ ಬೊಕ್ಕಸಕ್ಕೆ ಕೊಟ್ಯಾಂತರ ನಷ್ಟವಾದ ರಾಜಸ್ವದ ಮೊತ್ತದ ಶೇಕಡಾವಾರು ಇಳಿಕೆ ಪ್ರಮಾಣವನ್ನು ಕೂಡ ಆಯುಕ್ತರು ಬಹಿರಂಗ ಪಡಿಸಬೇಕಿದೆ.

ಅದೇ ರೀತಿಯಲ್ಲಿ ಮಂಗಳೂರಿನ ವಿವಿಧ ಇಲಾಖೆಯ ನಗರ ಯೋಜನೆ ವಿಭಾಗದ ಅಧಿಕಾರಿಗಳು ಮತ್ತು ಅವರ ಕುಟುಂಬಸ್ಥರ ಆದಾಯದ ಶೇಕಡಾ ಏರಿಕೆ, ಬ್ರೋಕರ್ ಗಳು, ಖಾಸಗಿ ನಿರ್ವಾಹಕರು, ಅರೆ ಗುಮಾಸ್ತರು, ಮೂಡ ಕಾರ್ಯಾದಾರಿತ ನಕಲಿಗಳ ಶೀಘ್ರ ಆದಾಯ ಏರಿಕೆ ಬಗ್ಗೆ ಕೂಡಾ ತನಿಖೆ ಆಗಬೇಕಿದೆ. ದ.ಕ.ಜಿಲ್ಲೆಯಲ್ಲಿ ಸರಕಾರದ ಅಧಿಕೃತ ಪ್ರತಿನಿಧಿಯಾದ ಜಿಲ್ಲಾಧಿಕಾರಿಗಳು ಕೂಡ ತಮ್ಮ ಅಧೀನ ವ್ಯಾಪ್ತಿಯ ಅಭಿಲೇಖಾಲಯ ದಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಹಿಂದಿನ ವಿಶೇಷ ಜಿಲ್ಲಾಧಿಕಾರಿ ಆಧಾರಿತ ಭೂ ಪರಿವರ್ತನೆ ನಕಲಿ ಭೂ ಪರಿವರ್ತನಾ ಆದೇಶ ಸೃಷ್ಟಿಸಿ, ಮೂಡ ನಿವೇಶನಕ್ಕೆ ಅನುಮೋದನೆಗೆ ಸಲ್ಲಿಸಿದ ಕಡತಗಳು ಕೂಡ ಸ್ಥಾನ ಪಲ್ಲಟವಾದದನ್ನು ಮತ್ತು ಕಡತನಾಶದ ಬಗ್ಗೆ ಕೂಡ ತನಿಖೆಗೆ ಒಳಪಡಿಸಲಿ, ಜೊತೆಗೆ ಜಿಲ್ಲಾಧಿಕಾರಿಗಳು ತನ್ನ ಪೀಠದ ಅಡಿಯಲ್ಲಿರುವ, ಡಿ.ಡಿ.ಎಲ್. ಆರ್ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ನಕಲಿಗಳ ಸಹಕಾರದೊಂದಿಗೆ ಭೂ ಗಡಿ ಗುರುತು ಅಕ್ರಮ ತಿದ್ದುಪಡಿಗೊಳಿಸಿ ಕಡತ ನಾಶಗೊಳಿಸುತ್ತಿರುವ ಬಗ್ಗೆ ಸಮಗ್ರ ತನಿಖೆಗೆ ಸೂಕ್ತವಾದ ತನಿಖಾ ಆಯೋಗವನ್ನು ರಚಿಸಿ, ಸಾರ್ವಜನಿಕರಿಗೆ ಮೂಡಾದ ಮೇಲಿರುವ ಸಂಶಯ, ಅಪನಂಬಿಕೆಯನ್ನು ಹೊಗಲಾಡಿಸಲು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.
