ರಾಮಸೇನೆ ಮುಖಂಡ ಅತ್ತಾವರ ಮೊಬೈಲ್ ನಲ್ಲಿತ್ತು ವಾಮಚಾರದ ವಿಡಿಯೋ.. ಬಿತ್ತು ಮತ್ತೊಂದು ಕೇಸು.!

ಕರಾವಳಿ

ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಕಲರ್ಸ್ ಯುನಿಸೆಕ್ಸ್ ಮಸಾಜ್ ಸೆಂಟರ್ ಗೆ ತನ್ನ ಹುಡುಗರ ಮೂಲಕ ದಾಳಿ ನಡೆಸಿ ಮಸಾಜ್ ಪುಡಿಗೈದ ಆರೋಪದಲ್ಲಿ ಪೊಲೀಸರು ಪ್ರಸಾದ್ ಅತ್ತಾವರ ಸೇರಿದಂತೆ ಹದಿನಾಲ್ಕು ಮಂದಿಯನ್ನು ಬಂಧಿಸಿದ್ದರು. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸುದ್ದಿ ಮಾಡಿದ್ದ ಪಬ್, ಹೋಂ ಸ್ಟೇ ದಾಳಿಯ ರೀತಿಯಲ್ಲೇ ಖಾಸಗಿ ಕ್ಯಾಮರಾಮೆನ್ ಒಬ್ಬರನ್ನು ಕರೆದುಕೊಂಡು ಹೋಗಿ ದಾಳಿ ನಡೆಸಿ, ಸ್ವತಃ ಆ ವಿಡಿಯೋ ಗಳನ್ನು ಬಿಡುಗಡೆಗೊಳಿಸಿದ್ದರು. ಈ ದಾಳಿಯ ಬಗ್ಗೆ ಜಿಲ್ಲೆಯಲ್ಲಿ ಪರ-ವಿರೋಧ ಚರ್ಚೆಗಳು ನಡೆದಿತ್ತು. ಅನೈತಿಕ ಪೊಲೀಸ್ ಗಿರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಸಂಬಂಧ ಅದೇ ದಿನ ಎಲ್ಲಾ ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದರು.

ಇದೀಗ ಬಂಧನದಲ್ಲಿರುವ ರಾಮಸೇನೆ ಮುಖಂಡ ಅತ್ತಾವರ ಮೊಬೈಲ್ ನಲ್ಲಿ ಸ್ಪೋಟಕ ಮಾಹಿತಿ ಪತ್ತೆಯಾಗಿದ್ದು, ವಾಮಾಚಾರದ ವಿಡಿಯೋ ಗಳು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರತ್ಯೇಕ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಡಾ ಹಗರಣದ ದೂರುದಾರರಾದ ಸ್ನೇಹಮಯಿ ಕೃಷ್ಣ, ಗಂಗರಾಜು ಪೋಟೋ ಇರಿಸಿ ಅವರಿಗೆ ಬಲ ತಂದುಕೊಡಲಿ ಎಂದು ದೇವಸ್ಥಾನವೊಂದರಲ್ಲಿ ಪ್ರಾಣಿ ಬಲಿ ಕೊಟ್ಟು ರಕ್ತಾಭಿಷೇಕ ಮಾಡಿರುವ ವಿಡಿಯೋ ಪತ್ತೆಯಾಗಿದೆ. ತನಿಖೆ ನಡೆಸುತ್ತಿದ್ದ ಮಂಗಳೂರು ಪೊಲೀಸರು ಪ್ರಸಾದ್ ಅತ್ತಾವರ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಈ ವಿಡಿಯೋ ಪತ್ತೆಯಾಗಿದೆ. 5 ಕುರಿಗಳನ್ನು ಬಲಿಕೊಡಲಾಗಿದ್ದು, ಈ ಘಟನೆ ಸಂಬಂಧ ಪ್ರಸಾದ್ ಅತ್ತಾವರ ಹಾಗೂ ಅನಂತ್ ಭಟ್ ಎಂಬುವವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಣಿಬಲಿ ಪೂಜೆಗೆ ಪ್ರಸಾದ್ ಅತ್ತಾವರ, ಅನಂತ್ ಭಟ್ ಎಂಬುವವರಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಮತ್ತೊಂದು ಕೇಸ್ ಕೂಡ ದಾಖಲಾಗಿದೆ ಎಂದು ತಿಳಿದುಬಂದಿದೆ. ಪ್ರಾಣಿ ಬಲಿ ವಿರುದ್ಧ ಕಿಡಿಕಾರುವ ಹಿಂದೂ ನಾಯಕರ ಇನ್ನೊಂದು ಮುಖವಾಡವೂ ಈ ಮೂಲಕ ಬಹಿರಂಗವಾದಂತಾಗಿದೆ.