ಜನಾಕ್ರೋಶಕ್ಕೂ ಮಣಿಯದ ಬಿಜೆಪಿ ಪಾಲಿಕೆ ಆಡಳಿತದಿಂದ ಸಾಮಾನ್ಯ ಸಭೆಯಲ್ಲಿ ಟಿಡಿಆರ್ ಹಗರಣದ ಫೈಲ್ ಪಾಸ್.!

ಕರಾವಳಿ

ವಿಪಕ್ಷದ ಆಕ್ಷೇಪ ನಡುವೆಯೂ ಮಂಜೂರು; ರಾಜ್ಯ ಕಾಂಗ್ರೆಸ್ ಸರಕಾರ ಈಗೇನು ಮಾಡುತ್ತದೆ: ಮುನೀರ್ ಕಾಟಿಪಳ್ಳ ಪ್ರಶ್ನೆ

ಮಂಗಳೂರು ನಗರ ಪಾಲಿಕೆಯ ಬಿಜೆಪಿ ಆಡಳಿತ ನಿರ್ಲಜ್ಜತೆಯ ಚರಮ ಸೀಮೆ ತಲುಪಿದೆ. ಐದು ವರ್ಷಗಳ ಆಡಳಿತದ ಕೊನೆಯ ತಿಂಗಳಿನಲ್ಲಿಯೂ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪದವು ಗ್ರಾಮದ 3.50 ಎಕರೆ ಜಮೀನಿನ ಟಿ‌.ಡಿ.ಆರ್ ಹಗರಣವನ್ನು ನಾವು ನಿನ್ನೆಯಷ್ಟೆ ಬಯಲು ಪಡಿಸಿದ್ದೆವು. ಪೂರ್ವಾನ್ವಯ ಮಂಜೂರಾತಿ ನೀಡಿ ಹತ್ತಾರು ಕೋಟಿ ಮೌಲ್ಯದ ಟಿ.ಡಿ.ಆರ್ ನೀಡಿರುವುದು, ವಿಪಕ್ಷ ಕಾಂಗ್ರೆಸ್ ಪಾಲಿಕೆ ಸದಸ್ಯರು ಮೌನವಹಿಸಿರುವುದನ್ನು ಪ್ರಶ್ನಿಸಿದ್ದೆವು.

ಇಂದು ನಡೆದ ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇದೇ ಟಿ.ಡಿ.ಆರ್ ಫೈಲ್ ಅನ್ನು ನಿರ್ಲಜ್ಜ ಬಿಜೆಪಿ ಆಡಳಿತ ಅನುಮೋದನೆಗಾಗಿ ಮಂಡಿಸಿದೆ. ಜನಾಕ್ರೋಶದ ಕಾರಣದಿಂದ ಎಚ್ಚೆತ್ತ ವಿಪಕ್ಷ ಸದಸ್ಯರು ಅನುಮೋದನೆ ನೀಡಲು ನಿರಾಕರಿಸಿ, ಬಲವಾದ ಆಕ್ಷೇಪ ಎತ್ತಿದ್ದಾರೆ. ಆದರೆ, ಆಕ್ಷೇಪಗಳನ್ನು ಕಡೆಗಣಿಸಿದ ಬಿಜೆಪಿ ಆಡಳಿತ ಪದವು ಟಿ.ಡಿ.ಆರ್ ಫೈಲ್ ಅನ್ನು ಪಾಸ್ ಮಾಡಿದೆ.

ಪದವು ಗ್ರಾಮದ 3.50 ಎಕರೆ ಜಮೀನು ಟಿ.ಡಿ.ಆರ್ ಅಡಿ ಖರೀದಿಸುವ ಪ್ರಸ್ತಾಪ ಆರು ತಿಂಗಳ ಹಿಂದೊಮ್ಮೆ ಮರಕಡ ಗ್ರಾಮದ 11 ಎಕರೆ ನಿರುಪಯೋಗಿ ಜಮೀನಿಗೆ ಟಿ‌.ಡಿ.ಆರ್ ನೀಡುವ ಇನ್ನೊಂದು ಪ್ರಸ್ತಾಪದ ಜೊತೆಗೆ ಬಿಜೆಪಿ ಆಡಳಿತ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿತ್ತು. ಆಗ, ಈ ಹಗರಣವನ್ನು ನಾವು ಬಲವಾಗಿ ವಿರೋಧಿಸಿದ್ದೆವು. ನಾಗರಿಕರೂ ಧ್ವನಿ ಎತ್ತಿದ್ದರು. ಅದರಿಂದಾಗಿ ಟಿ.ಡಿ.ಆರ್ ಫೈಲ್ ಗೆ ತಡೆ ಬಿದ್ದಿತ್ತು. ಈಗ ಆಡಳಿತದ ಕೊನೆಯ ತಿಂಗಳಲ್ಲಿ ನಗರ ಪಾಲಿಕೆಯ ಸಂಪತ್ತು ಲೂಟಿ ಹೊಡೆಯುವ ಈ ಟಿ.ಡಿ.ಆರ್ ಫೈಲ್ ಅನ್ನು ಲಜ್ಜೆ ಬಿಟ್ಟು ಬಿಜೆಪಿ ಆಡಳಿತ ಅಂಗೀಕರಿಸಿದೆ.

ಸಿಪಿಐಎಂ ಪಕ್ಷವು ಬಿಜೆಪಿಯ ನಗರ ಪಾಲಿಕೆ ಆಡಳಿತದ ಈ ಭ್ರಷ್ಟ ನಡೆಯನ್ನು ಬಲವಾಗಿ ಖಂಡಿಸುತ್ತದೆ. ಇದು ಒಂದು ವರ್ಷದ ಅವಧಿಯಲ್ಲಿನ ಮೂರನೆ ಟಿ.ಡಿ.ಆರ್ ಹಗರಣ. ರಿಯಲ್ ಎಸ್ಟೇಟ್ ಲಾಭಿಗೆ ಸೇರಿದ ಪಚ್ಚನಾಡಿ ಹಾಗೂ ಮರಕಡದ ತಲಾ 11 ಎಕರೆ ನಿರುಪಯೋಗಿ ಜಮೀನಿನ ಟಿ.ಡಿ.ಆರ್ ಹಗರಣ ಈಗಾಗಲೆ ದೊಡ್ಡ ರೀತಿಯ ಆಕ್ರೋಶಕ್ಕೆ ಕಾರಣ ಆಗಿದೆ. ಈ ಎರಡು ಫೈಲ್ ಗಳು ಈಗ ರಾಜ್ಯ ಸರಕಾರ ಮುಂದಿದೆ. ರಾಜ್ಯದ ಕಾಂಗ್ರೆಸ್ ಸರಕಾರದ ಈ ಟಿ.ಡಿ.ಆರ್ ಒಪ್ಪಂದಗಳನ್ನು ರದ್ದುಗೊಳಿಸಬೇಕು, ತನಿಖೆಗೆ ಒಳಪಡಿಸಬೇಕು ಎಂದು ಸಿಪಿಐಎಂ ಆಗ್ರಹಿಸುತ್ತದೆ. ಈ ಕುರಿತು ಜನತೆಯನ್ನು ಸಂಘಟಿಸಿ ಹೋರಾಟಗಳನ್ನು ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸುತ್ತದೆ.