ಕಾಂಗ್ರೆಸ್- ಬಿಜೆಪಿ ದಲ್ಲಾಳಿಗಳ ‘ಬಣ’ ಮೇಲಾಟಕ್ಕೆ ಅಂತ್ಯ ಯಾವಾಗ..?
ಮಂಗಳೂರು ಮೂಡ ಕಚೇರಿ ದಲ್ಲಾಳಿಗಳ ಸಾಮ್ರಾಜ್ಯವಾಗಿ ಪರಿವರ್ತನೆಗೊಂಡಿದ್ದಕ್ಕೆ ದಶಕಗಳ ಇತಿಹಾಸವೇ ಇದೆ. ಇಲ್ಲಿನ ದಲ್ಲಾಳಿಗಳೇ ತಮಗೆ ಬೇಕಾದ ಅಧಿಕಾರಿಗಳನ್ನು ನಿಯುಕ್ತಿಗೊಳಿಸುವಷ್ಟು ಪವರ್ ಫುಲ್ ಆಗಿ ಬೆಳೆದಿರುವುದಂತೂ ಸತ್ಯ. ರಾಜಕೀಯ ಚೇಲಾಗಳೆಲ್ಲ ದಲ್ಲಾಳಿಗಳಾಗಿ ಬದಲಾದ ನಂತರ ಮೂಡದ ಚಿತ್ರಣವೇ ಬದಲಾಗಿದೆ. ತಮ್ಮ ತಮ್ಮ ಪಕ್ಷ ಅಧಿಕಾರದಲ್ಲಿರುವ ಸಂದರ್ಭ ದಲ್ಲಾಳಿಗಳು ತಮ್ಮ ತಮ್ಮ ನಾಯಕರಿಗೆ ದುಂಬಾಲು ಬಿದ್ದು ಅಧಿಕಾರಿಗಳಿಗೆ ಒತ್ತಡ ತಂದು ಕೆಲಸ ಮಾಡಿಕೊಂಡು ಹೋಗುತ್ತಾರೆ. ಇದರಿಂದಾಗಿ ಅಕ್ಷರಶಃ ಬಲಿಪಶುವಾಗುತ್ತಿರುವುದು ಅಧಿಕಾರಿ ವರ್ಗ.
ದಲ್ಲಾಳಿ ಸಂಸ್ಕೃತಿಯನ್ನು ಹುಟ್ಟುಹಾಕಿದ್ದೇ ಅಧಿಕಾರಿ ವರ್ಗ. ಜನಸಾಮಾನ್ಯರಿಂದ ನೇರವಾಗಿ ಲಂಚ ಪಡೆಯಲು ಮುಜುಗರ ಜೊತೆಗೆ ರಹಸ್ಯ ಹೊರಬರದಂತೆ ನೋಡಿಕೊಳ್ಳಲು ಬ್ರೋಕರ್ ಗಳನ್ನು ಇಟ್ಟುಕೊಂಡು ಡೀಲಿಗೆ ಇಳಿದ ಅಧಿಕಾರಿ ಗಳಿಗೆ ಇದೀಗ ಅದುವೆ ತಿರುಗುಬಾಣವಾಗಿದೆ. ಇದೀಗ ದಲ್ಲಾಳಿಗಳಾಗಿ ಕೆಲಸ ಮಾಡುವವರು ಕೆಲವೊಂದು ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ನಾಯಕರ ಹಿಂದೆ ಮುಂದೆ ತಿರುಗಾಡುವ ಖದ್ದರ್ ತೊಟ್ಟವರು. ಇವರು ಹೇಳಿದಂತೆ ಅಧಿಕಾರಿ ವರ್ಗ ಕೇಳಬೇಕು, ಇಲ್ಲವಾದರೆ ತಮ್ಮ ತಮ್ಮ ನಾಯಕರ ಕಿವಿ ಊದಿ ಅಧಿಕಾರಿಗಳಿಗೆ ಬತ್ತಿ ಇಡುತ್ತಾರೆ. ಒಟ್ಟಾರೆ ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಸ್ಥಿತಿ ಅತಂತ್ರವಾಗಿದೆ.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದಲ್ಲಾಳಿಗಳ ಎರಡು ಪ್ರಬಲ ಬಣಗಳಿವೆ. ರಾಜ್ಯದಲ್ಲಿ ಯಾವ ಸರಕಾರ ಅಧಿಕಾರಕ್ಕೆ ಬರುತ್ತೋ ಆ ಬಣದ ದಲ್ಲಾಳಿಗಳ ಕೆಲಸ ಇಲ್ಲಿ ಸಲೀಸು. ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಬಿಜೆಪಿ ಬಣದ ದಲ್ಲಾಳಿಗಳು ಹೇಳಿದಂತೆ ಅಧಿಕಾರಿಗಳು ಕೇಳಬೇಕು. ಒಂದು ವೇಳೆ ಲಕ್ಷ್ಮಣ ರೇಖೆ ದಾಟಿದರೆ ಅಂತಹ ಅಧಿಕಾರಿಗಳನ್ನು ಎತ್ತಂಗಡಿ ಮಾಡುವಷ್ಟು ದಲ್ಲಾಳಿಗಳು ಬೆಳೆದು ನಿಂತಿದ್ದಾರೆ. ಅದೇ ರೀತಿ ಕಾಂಗ್ರೆಸ್ ಸರಕಾರ ಇದ್ದಾಗ ಕಾಂಗ್ರೆಸ್ ಬಣದ ದಲ್ಲಾಳಿಗಳದ್ದೇ ಕಾರುಬಾರು, ಅವರು ಕೊಟ್ಟ ಫೈಲ್ ಗಳನ್ನು ಕಣ್ಣು ಮುಚ್ಚಿ ಸಹಿ ಹಾಕಬೇಕು. ಇಲ್ಲದಿದ್ದರೆ ತೊಂದರೆ ತಪ್ಪಿದ್ದಲ್ಲ. ಇನ್ನು ಒಬ್ಬೊಬ್ಬ ಶಾಸಕರ ಹೆಸರಿನಲ್ಲಿ ಒಂದೊಂದು ದಲ್ಲಾಳಿ ಬಣ ಹುಟ್ಟಿಕೊಂಡಿದೆಯಂತೆ. ವಿಚಿತ್ರ ಎಂದರೆ ಆಯಾಯ ಪಕ್ಷ ಅಧಿಕಾರ ಇದ್ದಾಗ ಈ ದಲ್ಲಾಳಿಗಳು ತಮ್ಮ ಇನ್ನೊಂದು ಬಣದ ದಲ್ಲಾಳಿಗಳಿಗೆ ಚಿವುಟಿ ಮಜಾ ನೋಡುವುದು ಇದೆಯಂತೆ. ಎದುರು ಬದುರು ಪರಸ್ಪರ ನಗುಮುಖ ಬೀರಿದರೆ ಒಳಗೊಳಗೆ ಶೀತಲ ಸಮರ ನಡೆಯುತ್ತಿದೆಯಂತೆ. ಇದೇ ಕಾರಣದಿಂದ ಇವರೊಳಗೆ ನಡೆಯುತ್ತಿದ್ದ ಕೆಲವೊಂದು ರಹಸ್ಯಗಳು ಹೊರಬೀಳುತ್ತಿರುವುದು. ದಲ್ಲಾಳಿ-ಅಧಿಕಾರಿ ಮಧ್ಯೆ ನಡೆದಿರುವ ಕೆಲವೊಂದು ಆಡಿಯೋ, ವಿಡಿಯೋ ಗಳು ಇದಕ್ಕೆಲ್ಲ ಸಾಕ್ಷಿ. ಇತ್ತೀಚೆಗೆ ಮೂಡದಲ್ಲಿ ದಲ್ಲಾಳಿಗಳ ಗುಂಪಿನ ಪ್ರಬಲ ನಾಯಕನೊಬ್ಬ ಅಧಿಕಾರಿಗಳ ಕಚೇರಿಗೆ ತೆರಳಿ ದಸ್ತಾವೇಜು ತಿದ್ದಿದ ವಿಡಿಯೋ ಹೊರಬರುವಂತೆ ಮಾಡಿದ್ದು ಇನ್ನೊಂದು ಬಣದ ದಲ್ಲಾಳಿಗಳಂತೆ. ಈತನಿಗೆ ಗೂಟ ಇಡಲು ಇದನ್ನು ಬಳಸಿಕೊಂಡಿದ್ದಾರೆ ಅನ್ನುವ ಸುದ್ದಿಯಿದೆ. ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ ಸದ್ಯದ ಮೂಡದ ಅಧಿಕಾರಿಗಳ ಸ್ಥಿತಿ.
