ಸ್ಪೀಕರ್ ಕ್ಷೇತ್ರದಲ್ಲಿ ಹೆದ್ದಾರಿ ಮರಣ ಗುಂಡಿಗೆ ಮಹಿಳೆ ಬಲಿ.!

ಕರಾವಳಿ

ಹೆದ್ದಾರಿ ಮರಣಗುಂಡಿಯ ಬಗ್ಗೆ ಈ ಹಿಂದೆಯೇ ಪ್ರತಿಭಟಿಸಿದ್ದ ನಾಗರಿಕ ಸಂಘಟನೆಗಳು; ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ, ಶಾಸಕರು.!

ಸರಕಾರಿ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ಜೀವಹಾನಿಯಾಗುತ್ತದೆ ಎಂಬುದಕ್ಕೆ ಮತ್ತೊಂದು ಘಟನೆಯು ಸಾಕ್ಷಿಯಾಗಿದೆ. ಉಳ್ಳಾಲದ ತೊಕ್ಕೊಟ್ಟು ಚೆಂಬುಗುಡ್ಡೆ ಹೆದ್ದಾರಿಯ ಮರಣ ಗುಂಡಿಯ ಬಗ್ಗೆ ಈ ಹಿಂದೆಯೇ DYFI ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟಿಸಿದರೂ ಜಿಲ್ಲಾಡಳಿತವಾಗಲಿ, ಶಾಸಕರಾಗಲಿ ಸ್ಪಂದಿಸಲೇ ಇಲ್ಲ. ಈ ರಸ್ತೆಯಲ್ಲಿ ಹಲವು ಬಾರಿ ಸಣ್ಣ ಪುಟ್ಟ ಅಪಘಾತ ನಡೆದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಲೇ ಇಲ್ಲ. ಇದೀಗ ಹೆದ್ದಾರಿ ಮರಣ ಗುಂಡಿಗೆ ಬಿದ್ದು ಪತ್ನಿ ಮೃತಪಟ್ಟರೆ, ಪತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಮಂಗಳೂರಿನ ಸ್ಪೀಕರ್ ಕ್ಷೇತ್ರದ ರಸ್ತೆಯ ಕಥೆ.

ಇಂದು ಸಂಜೆ ಟ್ಯಾಂಕರ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೊಕ್ಕೊಟ್ಟು – ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ಚೆಂಬುಗುಡ್ಡೆ ಕೆರೆಬೈಲ್ ಬಳಿ ಸಂಭವಿಸಿದೆ. ರಸ್ತೆ ಅವ್ಯವಸ್ಥೆಯಿಂದ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನಿಟ್ಟು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಒಂದು ಗಂಟೆಯ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆಯೂ ನಡೆದಿದೆ.

ಸುರತ್ಕಲ್‌ನ ಕುಳಾಯಿ ನಿವಾಸಿ ದೇರಳಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ರೆಹಮತ್ (47) ಮೃತ ದುರ್ದೈವಿ . ಇಂದು ಸಂಜೆ ಅಕ್ಕನ ಮಗಳು ದುಬೈಗೆ ತೆರಳುತ್ತಿರುವುದರಿಂದ ಬಜಪೆ ಏರ್ ಪೋರ್ಟ್ ಗೆ ಸ್ಕೂಟರ್ ನಲ್ಲಿ ಗಂಡ ಹೆಂಡತಿ ತೆರಳುತ್ತಿದ್ದ ಸಂದರ್ಭ ತೊಕ್ಕೊಟ್ಟು ಚೆಂಬುಗುಡ್ಡೆ ಬಳಿ ಹೆದ್ದಾರಿ ಮರಣ ಗುಂಡಿ ತಪ್ಪಿಸಲು ಹೋಗಿ ಸ್ಕೂಟರ್ ಸ್ಕಿಡ್ಡಾಗಿ ಬಿದ್ದಿದ್ದು,ಈ ಸಂದರ್ಭ ರಸ್ತೆಗೆ ಬಿದ್ದಿದ್ದ ರೆಹಮತ್ ರ ಮೇಲೆ ಹಿಂಬದಿಯಲ್ಲಿದ್ದ ಟ್ಯಾಂಕರ್ ಲಾರಿಯ ಹಿಂಬದಿಯ ಚಕ್ರ ಚಲಿಸಿದೆ. ಪರಿಣಾಮವಾಗಿ ರೆಹಮತ್ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಪತಿ ರಶೀದ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತದೇಹ ಕೊಂಡೊಯ್ಯಲು 108 ಆಂಬ್ಯುಲೆನ್ಸ್ ವಿನಾ ಕಾರಣ ತಡಮಾಡಿದ ಕಾರಣ ಜನರು ಇಲಾಖೆಯ ವಿರುದ್ಧ ರೊಚ್ಚಿಗೆದ್ದ ಘಟನೆಯು ಜರುಗಿತು. ರಾಜ್ಯದಲ್ಲಿ ಉನ್ನತ ಹುದ್ದೆಯಲ್ಲಿರುವ ಕ್ಷೇತ್ರದಲ್ಲೇ ರಸ್ತೆಯ ಸ್ಥಿತಿ ಈ ರೀತಿ ಯಾದರೆ ಉಳಿದ ಕಡೆಯ ಸ್ಥಿತಿ ಇನ್ನೇಗಿರಬೇಡ?