ಅಕ್ರಮ ಮರಳುಗಾರಿಕೆ ಮತ್ತು ಗಣಿಗಾರಿಕೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌

ರಾಜ್ಯ

ಅನಧಿಕೃತ ಮತ್ತು ವಿವೇಚನೆರಹಿತ ಮರಳು ಗಣಿಗಾರಿಕೆಯು ನದಿಗಳ ಬತ್ತುವಿಕೆಗೆ, ನದಿಯ ಸಾವಿಗೂ ಕಾರಣವಾಗಿದೆ

ನದಿ ತಟದಲ್ಲಿ ಅಕ್ರಮ ಮರಳು, ಗಣಿಗಾರಿಕೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, ನದಿ ಪಾತ್ರದಲ್ಲಿನ ಬದಲಾವಣೆಗಳ ಬಗ್ಗೆ ವಾಸ್ತವ ಕಾಲದ ಮಾಹಿತಿ ನೀಡುವ ವ್ಯವಸ್ಥೆ ಅಳವಡಿಸಿ ಕೊಳ್ಳುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ನದಿಗಳ ಗಡಿ, ಮರಳಿನ ದಿಬ್ಬಗಳನ್ನು ಉಪಗ್ರಹ ಚಿತ್ರಗಳ ಮೂಲಕ ಗುರುತಿಸಬೇಕು, ಮತ್ತು ಇದರಲ್ಲಿ ಏನೇ ಬದಲಾವಣೆಯಾದರೂ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಗಳಿಗೆ ತಿಳಿಸುವ ವ್ಯವಸ್ಥೆ ರಚನೆ ಆಗಬೇಕು ಎಂದು ಹೈಕೋರ್ಟಿನ ತೀರ್ಪಿನಲ್ಲಿ ಹೇಳಿದೆ.

ಲಭ್ಯ ಇರುವ ತಂತ್ರಜ್ಞಾನವನ್ನು ಬಳಸಿ ಇಂತಹ ಸಮಸ್ಯೆಗಳನ್ನು ನಿಭಾಯಿಸಲು ಇದು ಒಂದು ಸಕಾಲ. ಆದ್ದರಿಂದ ರಾಜ್ಯ ಸರಕಾರವು ಗಣಿ ಇಲಾಖೆಯ ಮೂಲಕ ಕಂದಾಯ ಮತ್ತು ಅರಣ್ಯ ಇಲಾಖೆ ಮುಂತಾದವುಗಳ ನೆರವಿನಿಂದ ಉಪಗ್ರಹ ಆಧಾರಿತ ಚಿತ್ರಗಳ ವ್ಯವಸ್ಥೆಯನ್ನು ಬಳಸಿಕೊಂಡು ಇಂತಹ ಸಮಸ್ಯೆಗಳನ್ನು ನಿರ್ವಹಿಸಬೇಕು ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ.

ಅನಧಿಕೃತ ಮತ್ತು ವಿವೇಚನೆರಹಿತ ಮರಳು ಗಣಿಗಾರಿಕೆಯು ನದಿಗಳ ಬತ್ತುವಿಕೆಗೆ ಕಾರಣವಾಗಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ನದಿಯ ಸಾವಿಗೂ ಕಾರಣವಾಗಿದೆ ಎಂದು ಹೈಕೋರ್ಟ್‌ ಆತಂಕ ವ್ಯಕ್ತಪಡಿಸಿದೆ. ಇಸ್ರೋದಿಂದ ಅಗತ್ಯ ನೆರವು ಪಡೆದು ನದಿ ಪಾತ್ರ, ಮರಳಿನ ದಿಬ್ಬಗಳಲ್ಲಿ ಕಂಡುಬರುವ ಯಾವುದೇ ಬದಲಾವಣೆಯನ್ನು ವಾಸ್ತವ ಕಾಲದಲ್ಲಿ ಪತ್ತೆಹಚ್ಚಿ ಮಾಹಿತಿ ನೀಡುವ ವ್ಯವಸ್ಥೆಯನ್ನು ರೂಪಿಸಬೇಕು. ಈ ಬಗ್ಗೆ 6 ವಾರದೊಳಗೆ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಸೂಚಿಸಿದ್ದು, ಪ್ರಕರಣದಲ್ಲಿ ತಾನು ನೀಡಿರುವ ನಿರ್ದೇಶನಗಳ ಪಾಲನೆಯ ಬಗ್ಗೆ ಮುಂದಿನ ವಿಚಾರಣೆಯನ್ನು ಎ. 3ಕ್ಕೆ ನಿಗದಿಪಡಿಸಿದೆ.

ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರ ಸೂಚನೆ ಬಳಿಕವೂ ಜಿಲ್ಲೆಯಲ್ಲೂ ಅಕ್ರಮ ಮರಳುಗಾರಿಕೆ ಮುಂದುವರಿಯುತ್ತಿದೆ. ಸದ್ಯ ರಾತ್ರಿ ಸಮಯದಲ್ಲಿ ಮಾತ್ರ ದಂಧೆ ಮುಂದುವರಿಸಿದ್ದಾರೆ. ಈಗಲೂ ಸಾವಿರಾರು ಲೋಡ್ ಮರಳು ರಾತ್ರಿ ಹೊತ್ತಲ್ಲಿ ಸಾಗಟವಾಗುತ್ತಿದೆ, ಆದರೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ

ದ.ಕ ಜಿಲ್ಲೆಯ ಫಲ್ಗುಣಿ ನದಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ಈಗಾಗಲೇ ಮೂರು ಸೇತುವೆಗಳಿಗೆ ಹಾನಿಯಾಗಿವೆ. ಎಷ್ಟೊ ಜೀವಗಳು ಬಲಿಯಾಗಿದೆ. ಮೊದಲಿಗೆ ಮಂಗಳೂರು ಮತ್ತು ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಮುಲ್ಲರಪಟ್ಣ ಸೇತುವೆ ಬಿರುಕುಬಿಟ್ಟು ಸಂಚಾರಕ್ಕೆ ಅಡಚಣೆಯಾಗಿ, ಸೇತುವೆ ಮುರಿದು ನದಿಗೆ ಬಿತ್ತು. ಇದೀಗ ಹೊಸ ಸೇತುವೆ ನಿರ್ಮಾಣಗೊಂಡಿದೆ. ಆ ಬಳಿಕ ವಿಮಾನ ನಿಲ್ದಾಣ ರಸ್ತೆಯ ಮರವೂರು ಸೇತುವೆ ಕೂಡ ಬಿರುಕುಬಿಟ್ಟಿತ್ತು. ಅಲ್ಲಿ ಹೊಸ ಸೇತುವೆಗಳನ್ನು ನಿರ್ಮಿಸಲಾಗಿದೆ. ಅಷ್ಟರಲ್ಲಿ ಅಡ್ಡೂರು ಸೇತುವೆ ಕೂಡ ಶಿಥಿಲಗೊಂಡಿದೆ. ಸದ್ಯ ಅಡ್ಡೂರು ಸೇತುವೆಯಲ್ಲಿ ಘನ ವಾಹನಗಳಿಗೆ ನಿಷೇಧ ಹೇರಲಾಗಿದೆ. ಅಡ್ಡೂರು ಸೇತುವೆಗೆ ಹಾನಿಯಾಗಲು ಅಕ್ಕಪಕ್ಕದಲ್ಲಿ ನಡೆಯುತ್ತಿರುವ ಅಕ್ರಮ ಮರುಗಾರಿಕಯೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.