ಅಂತಿಮಗೊಳ್ಳದ ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ

ರಾಜ್ಯ

ಕಾಂಗ್ರೆಸ್‌ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಅಂತಿಮಗೊಳಿಸಲು ರವಿವಾರ ಹೊಸದಿಲ್ಲಿಯಲ್ಲಿ ಹಿರಿಯ ನೇತಾರರ ಸಭೆ ನಡೆದರೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಕೆಲವು ಪ್ರತಿಷ್ಠಿತ ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಬಾಕಿ 58 ಕ್ಷೇತ್ರಗಳಿಗೆ 3ನೇ ಪಟ್ಟಿಯಲ್ಲಿ ಟಿಕೆಟ್‌ ಘೋಷಿಸಲಾಗುತ್ತದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳ್ಳುತ್ತಿರುವಂತೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಸಭೆ ಕಾಂಗ್ರೆಸ್‌ನ ಮೂರನೇ ಮತ್ತು ಅಂತಿಮ ಪಟ್ಟಿ ಸಿದ್ಧಗೊಳಿಸಲು ರವಿವಾರ ಇಡೀ ದಿನ ಸಕ್ರಿಯವಾಗಿತ್ತು.

ಎರಡನೇ ಪಟ್ಟಿಯ ಬಳಿಕ ಕಾಂಗ್ರೆಸ್‌ ಪಕ್ಷದಲ್ಲಿ ಬಂಡಾಯದ ಬಿಸಿ ಏರುತಿದೆ. ಈ ನಡುವೆ ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಪೈಪೋಟಿ ಮತ್ತು ಕುತೂಹಲ ಇರುವ ಹಲವು ಪ್ರತಿಷ್ಠಿತ ಕಣಗಳನ್ನು ಒಳಗೊಂಡ ಮೂರನೇ ಪಟ್ಟಿಯಲ್ಲಿ ಸಿದ್ಧಪಡಿಸಬೇಕಿದೆ. ದಕ್ಷಿಣಕನ್ನಡ ವ್ಯಾಪ್ತಿಯ 2ನೇ ಪಟ್ಟಿಯಲ್ಲಿಲ್ಲದ 3 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಬಿಜೆಪಿ ಪಟ್ಟಿ ಬಿಡುಗಡೆಗೊಂಡ ಬಳಿಕ ಕಾಂಗ್ರೆಸ್‌ ತನ್ನ ಪಟ್ಟಿಯನ್ನು ಅಂತಿಮಗೊಳಿಸಲಿದೆ ಎನ್ನಲಾಗುತ್ತಿದೆ.