ಮಂಗಳೂರು ಮಹಾನಗರ ಪಾಲಿಕೆ ಉಪಮೇಯರ್ ಆಗಿದ್ದ ಮುಹಮ್ಮದ್ ಕುಂಜತ್ತಬೈಲ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ನೇರನಡೆನುಡಿಯ ಸರಳಸಜ್ಜನಿಕೆಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಬಡವರ, ದೀನದಲಿತರ, ಶೋಷಿತರ ಪರವಾಗಿ ಕೆಲಸ ಮಾಡುವ ನೈಜ ಜನಪ್ರತಿನಿಧಿಯಾಗಿದ್ದರು. ಕುಂಜತ್ತಬೈಲ್ ವಾರ್ಡ್ ಕಾರ್ಪೊರೇಟರ್ ಆಗಿದ್ದ ಸಂದರ್ಭ ಕುಂಜತ್ತಬೈಲ್, ಕಾವೂರು, ಪಂಜಿಮೊಗರು ಮೊದಲಾದ ಪ್ರದೇಶಗಳಲ್ಲಿ ವಾಸವಿದ್ದ 800 ರಿಂದ 900 ರಷ್ಟು ಬಡಜನರು ಹಕ್ಕುಪತ್ರವಿಲ್ಲದೆ ಸರಕಾರಿ ಸೌಲಭ್ಯದಿಂದ ವಂಚಿತರಾಗಿದ್ದ ಸಮಯದಲ್ಲಿ ಅಂತಹವರಿಗೆ ಹಕ್ಕುಪತ್ರ ನೀಡಿದ್ದ ಹಿರಿಮೆ ಕುಂಜತ್ತಬೈಲ್ ಅವರದ್ದು.
1997 ರಲ್ಲಿ ಜನತಾಪಕ್ಷದಿಂದ ರಾಜಕಾರಣ ಆರಂಭಿಸಿದ ಮುಹಮ್ಮದರು ಆನಂತರ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿದ್ದರು. ಬೇರೆ ಪ್ರತಿನಿಧಿಗಿರುವಂತೆ ಗತ್ತು, ಗೈರತ್ತು ಇವರಲ್ಲಿರಲಿಲ್ಲ. ಅಪಾರ ಜ್ಞಾನ ಭಂಡಾರ ಹೊಂದಿದ್ದರು.

ನೋಬೆಲ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿ, ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾಗಿ , ಅಖಿಲ ಭಾರತ ಬ್ಯಾರಿ ಪರಿಷತ್ ನ ಉಪಾಧ್ಯಕ್ಷರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚಿನ ದಿನಗಳಲ್ಲಿ ಎಡಪಂಥೀಯ ಸಂಘಟನೆಯೊಂದಿಗೆ ನಿರಂತರ ಸಂಪರ್ಕವಿದ್ದು ಹಲವಾರು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಬೆನ್ನೆಲುಬಾಗಿ ಕೆಲಸ ಮಾಡಿದ್ದರು. ಕೂಳೂರು ಹೆದ್ದಾರಿ ಪ್ರತಿಭಟನೆ ಸಂದರ್ಭ ಪೊಲೀಸರು ಹೋರಾಟಗಾರರ ಮೇಲೆ ಎಫ್ಐಆರ್ ದಾಖಲಿಸಿದ್ದ ಸಂದರ್ಭ ಅವರ ಹೋರಾಟದ ಭಾಷಣಗಳು ಜನರೆಡೆಯಲ್ಲಿ ವ್ಯಾಪಕ ಪ್ರಶಂಸೆ ಗಿಟ್ಟಿಸಿತ್ತು. ಓರ್ವ ನೈಜ ಜನಪ್ರತಿನಿಧಿ, ನೈಜ ಹೋರಾಟಗಾರರಾಗಿದ್ದರು.
