ಅಷ್ಟಕ್ಕೂ ಬ್ಯಾರಿ ಭವನ ನಿರ್ಮಾಣಕ್ಕೆ ಈ ಪರಿಯ ವಿರೋಧ ಏಕೆ.?
ಬರೋಬ್ಬರಿ 1200 ವರ್ಷಗಳ ಇತಿಹಾಸದ ದಾಖಲೆಯನ್ನು ಹೊಂದಿದೆ ಬ್ಯಾರಿ ಭಾಷೆ. 25ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ ಬ್ಯಾರಿ ಜನಾಂಗ. ಕರಾವಳಿ ಕರ್ನಾ ಟಕವಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಬ್ಯಾರಿಗಳ ಜನಸಂಖ್ಯೆ ಧಾರಾಳವಿದೆ. ಬ್ಯಾರಿ ಸಾಹಿತ್ಯ-ಸಂಸ್ಕೃತಿಯ ಏಳಿಗೆಗಾಗಿ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸರಕಾರವೇನೂ ಘೋಷಿಸಿ ದಶಕಗಳೇ ಕಳೆದಿದೆ. ಆದರೆ ಭಾಷೆ, ಸಾಂಸ್ಕೃತಿ ಕತೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಲು ಬ್ಯಾರಿ ಭವನ ನಿರ್ಮಾಣ ವಾಗದೆ ಇನ್ನೂ ಮೀನಮೇಷ ಎಣಿಸುತ್ತಿದೆ. ಸರಕಾರ ಆರು ಕೋಟಿ ದುಡ್ಡು ಮಂಜೂರುಗೊಳಿಸಿ ವರ್ಷ ಹಲವಾರು ಸಂದಿದೆ. ಬ್ಯಾರಿ ಭವನ ನಿರ್ಮಾಣದ ದುಡ್ಡು ಬ್ಯಾಂಕಿನಲ್ಲಿ ಕೊಳೆಯುತ್ತಿದೆ. ಸವಾಲು, ಗೊಂದಲ ಗಳಿಂದ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಬ್ಯಾರಿ ಭವನ ನಿರ್ಮಾಣದ ಜಾಗ ಬದಲಾಯಿಸುತ್ತಾ ಕನಸಾ ಗಿಯೇ ಉಳಿದಿದೆ. ಎರಡೆರಡು ಬಾರಿ ಶಿಲಾನ್ಯಾಸಗೊಂಡು, ಸ್ಥಳೀಯರಿಂದ ವಿರೋಧ ವ್ಯಕ್ತವಾಗಿ ಊರಿಂದ ಊರಿಗೆ ಲಗ್ಗೆ ಇಡುತ್ತಿರುವ ಬ್ಯಾರಿ ಭವನಕ್ಕೆ ಇದೆಂತಹ ಸಂಕಷ್ಟ.? ಬ್ಯಾರಿ ಭವನದ ಬಗ್ಗೆ ಏಕೆ ಜನರ ಮುನಿಸು.? ತುಳು ಭವನ, ಕೊಂಕಣಿ ಭವನ, ಅರೆಭಾಷೆ ಭವನಕ್ಕೆ ಇಲ್ಲದ ವಿರೋಧ ಬ್ಯಾರಿ ಭವನಕ್ಕೆ ಯಾಕೆ.?
ಕರಾವಳಿಯ ಪ್ರಬಲ ಸಮುದಾಯವಾಗಿ ಗುರುತಿಸಿ ಕೊಂಡಿರುವ ಬ್ಯಾರಿಗಳ ಅಸ್ಮಿತೆಗೆ ಬಿದ್ದ ಪೆಟ್ಟಲ್ಲವೇ ಇದು? ಸರಕಾರ, ಬ್ಯಾರಿ ಸಾಹಿತ್ಯ ಅಕಾಡೆಮಿ ಇನ್ನಾದರೂ ಬ್ಯಾರಿ ಭವನ ನಿರ್ಮಾಣಕ್ಕೆ ದೃಢ ಹೆಜ್ಜೆ ಇಡಬೇಕಾಗಿದೆ.
ಬ್ಯಾರಿ ಜನಾಂಗವು ತನ್ನ ಮೂಲ ದ್ರಾವಿಡ ಭಾಷಾ ಅಸ್ತಿತ್ವವನ್ನು ಸಮರ್ಪಕವಾಗಿ ಉಳಿಸಿ ಬೆಳೆಸಿ ಸಂರಕ್ಷಿಸಿಕೊಂಡು ಬಂದಿದ್ದು, ಈ ನಾಡಿನ ಜನಪದ, ಶೈಕ್ಷಣಿಕ, ಸಾಮಾ ಜಿಕ, ಸಾಂಸ್ಕೃತಿಕ, ಆರ್ಥಿಕತೆ, ಔದ್ಯೋ ಗಿಕ ರಂಗಕ್ಕೆ ಗಣನಾತ್ಮಕ ಕೊಡುಗೆ ನೀಡಿದೆ. ಬ್ಯಾರಿ ಜನಾಂಗವು ವಿಭಿನ್ನ ಸಮುದಾಯದ ಮಧ್ಯೆ ಸೌಹಾರ್ದತಾ ಜೀವನವನ್ನು ಅನಾದಿಕಾಲದಿಂದ ಪಾಲಿಸುತ್ತಾ ಬಂದಿದೆ. ಬ್ಯಾರಿ ಜನಾಂಗವು ಇಂದು ರಾಜ್ಯ-ದೇಶ ಮತ್ತು ಅಂತರಾಷ್ಟೀಯ ಮಟ್ಟದಲ್ಲಿ ಗುರುತಿಸುತ್ತಿದೆ.
ಬ್ಯಾರಿ ಭಾಷೆ, ಸಂಸ್ಕೃತಿಯ ಉಳಿ ವಿಗಾಗಿ ಬ್ಯಾರಿ ಸಾಹಿತ್ಯ ಅಕಾಡೆಮಿ ಸರಕಾರದಿಂದ ಘೋಷಿಸುವಂತೆ ಅನೇಕ ಬ್ಯಾರಿ ಮುಂದಾಳುಗಳು ಆಂದೋಲನವನ್ನೇ ನಡೆಸಿದ್ದರು. ಸರಕಾರದ ಗಮನ ಸೆಳೆಯಲು ಅಲ್ಲಲ್ಲಿ ಸಮ್ಮೇಳನ ನಡೆಸಿದ್ದರು. ಈ ಎಲ್ಲ ಹೋರಾಟದ ಫಲವಾಗಿ ಅಕಾಡೆಮಿ ಬ್ಯಾರಿಗೆ ಲಭಿಸಿತು. ಆದರೆ ಇದೀಗ ಸರಕಾರದಿಂದ ದುಡ್ಡು ಮಂಜೂರುಗೊಂಡರೂ ಬ್ಯಾರಿ ಭವನ ನಿರ್ಮಾಣಕ್ಕೆ ಮೀನಮೇಷ ಎಣಿಸುತ್ತಿರುವುದು ಬ್ಯಾರಿಗಳ ದೌರ್ಬಲ್ಯ ಎಂದೇ ಹೇಳಬೇಕು.
ಬ್ಯಾರಿ ಭವನ ನಿರ್ಮಾಣ ಹಲವು ಸವಾಲುಗಳ ಮೆಟ್ಟಿಲುಗಳನ್ನು ತುಳಿದು ಬಂದಿದೆ. ಅಂದಿನ ಬಿಜೆಪಿ ಸರಕಾರ ಬ್ಯಾರಿ ಭವನ ನಿರ್ಮಾಣಕ್ಕೆ ಆರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿತು. ಆ ನಂತರ ಅಕಾಡೆಮಿಗೆ 2-3 ಅಧ್ಯಕ್ಷರು ಬಂದರೂ ಬ್ಯಾರಿ ಭವನ ಜಾಗದ ತಕರಾರಿನಲ್ಲೇ ಕಾಲ ಕಳೆದಿದೆ.

ಅಷ್ಟಕ್ಕೂ ಬ್ಯಾರಿ ಭವನ ನಿರ್ಮಾಣಕ್ಕೆ ಈ ಪರಿಯ ವಿರೋಧ ಏಕೆ.?
‘ದೇವರು ಕೊಟ್ರು ಪೂಜಾರಿ ಬಿಡ’ ಅನ್ನುವಂತೆ, ‘ಬಿಜೆಪಿ ಕೊಟ್ರು ಕಾಂಗ್ರೆಸ್ಸಿಗರು ಬಿಡ’ ಅನ್ನುವಂತಾಗಿದೆ ಬ್ಯಾರಿ ಭವನ ನಿರ್ಮಾಣ. ಅಷ್ಟಕ್ಕೂ ಕಾಂಗ್ರೆಸ್ಸಿಗರೆ ಏಕೆ ಕಂಟಕರಾಗುತ್ತಿದ್ದಾರೆ…! ಇಲ್ಲಿದೆ ಕೆಲವು ಸ್ಯಾಂಪಲ್ ಗಳು.
ಅಂದಿನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ನ್ಯಾಯವಾದಿ ಮಹಮ್ಮದ್ ಹನೀಫ್ ರವರು ನೀರುಮಾರ್ಗ ಬೈತುರ್ಲಿ ಬಳಿಯಲ್ಲಿ ಕಷ್ಟಪಟ್ಟು ಮೂಡಾದಿಂದ 25 ಸೆಂಟ್ಸ್ ಜಾಗವನ್ನು ಬ್ಯಾರಿ ಭವನ ನಿರ್ಮಾಣಕ್ಕೆ ಖರೀದಿಸಿದ್ದರು. ಅಂದಾಜು 30ರಿಂದ 40 ಲಕ್ಷ ರೂಪಾಯಿ ಪಾವತಿಸಿ ಖರೀದಿಸಿದ್ದರು. ಆನಂತರ ಅಕಾಡೆಮಿ ಅಧ್ಯಕ್ಷಗಿರಿ ರಹೀಂ ಉಚ್ಚಿಲ್ ತೆಕ್ಕೆಗೆ ಬಂತು. ಬ್ಯಾರಿ ಭವನ ನಿರ್ಮಾಣಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಕಂಪೌಂಡ್, ಇನ್ನಿತರ ಕೆಲಸ ಕಾರ್ಯ ನಡೆಯುತ್ತಿರುವಾಗ ರಾತ್ರೋರಾತ್ರಿ ಸ್ಥಳೀಯರು ಕಂಪೌಂಡ್ ಕೆಡವಿಹಾಕಿದ್ದರು. ಬೈತುರ್ಲಿಯಲ್ಲಿ ಬ್ಯಾರಿ ಭವನ ನಿರ್ಮಾಣವಾಗುತ್ತದೆ ಎಂಬ ಸುದ್ದಿ ಇಲ್ಲಿನ ಪರಿಸರದಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಅಲ್ಲಿ ಮಸೀದಿ ನಿರ್ಮಾಣವಾಗುತ್ತದೆ. ಬಾಂಗ್ ಕೊಡಲಾಗುತ್ತೆ ಅನ್ನುವ ಕಪೋಲ ಕಲ್ಪಿತ ಸುದ್ದಿಗಳು ಹರಿದಾಡಿತು. ಇಲ್ಲಿನ ಹಿಂದೂ ಸಂಘಟನೆಗಳು ಒಗ್ಗಟ್ಟಾದವು. ಬ್ಯಾರಿ ಭವನ ನಿರ್ಮಾಣವಾಗದಂತೆ ತಡೆದರು. ಈ ಎಲ್ಲ ಹೋರಾಟ, ಹಾರಾಟಕ್ಕೆ ನೇತೃತ್ವ ನೀಡಿದ್ದು ಕಾಂಗ್ರೆಸ್ಸಿನ ಕಾರ್ಪೊ ರೇಟರ್.! ಎಂಬುದು ದುರಾದೃಷ್ಟಕರ.
ಸರಕಾರದ ಜಾಗದಲ್ಲಿ ಸರಕಾರದ ಅಧೀನದ ಅಕಾಡೆಮಿಗೆ ಕಚೇರಿ ನಡೆಸಲು ಉದ್ದೇಶಿಸಿ ಈ ಕಾಮಗಾರಿ ನಡೆಯುತ್ತಿದೆ ಅನ್ನುವ ವಿಚಾರ ಕಾರ್ಪೊರೇಟರ್‌ಗೆ ತಿಳಿದಿದ್ದರೂ ಜನಸಾಮಾನ್ಯರಿಗೆ ಅದನ್ನು ಮನವರಿಕೆ ಮಾಡುವ ಕೆಲಸಕ್ಕೆ ಹೋಗಲಿಲ್ಲ. ತನ್ನ ಓಟು ಬ್ಯಾಂಕ್ ಭದ್ರಪಡಿಸಲು ಬ್ಯಾರಿ ಭವನ ವಿರುದ್ಧ ಹೋರಾಟ ಮಾಡುತ್ತಿರುವವರ ಪರವಾಗಿ ನಿಂತರು. ಇಲ್ಲಿನ ಜನ ಪ್ರತಿನಿಧಿ ಕಾಂಗ್ರೆಸ್ಸಿನ ಪ್ರಭಾವಿ ನಾಯಕರೊಬ್ಬರ ಹತ್ತಿರದ ಸಂಬಂಧಿ. ಈ ವಾರ್ಡಿನಲ್ಲಿ ಲೋಕಸಭೆ, ವಿಧಾನಸಭೆಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸುತ್ತೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಈ ವ್ಯಕ್ತಿ ನಿರಂತರವಾಗಿ ಗೆದ್ದು ಬರುತ್ತಾರೆ. ಇದು ಮಿರಾಕಲ್ ಅಲ್ಲವೇ?

ಬೈತುರ್ಲಿಯಲ್ಲಿ ಬ್ಯಾರಿ ಭವನಕ್ಕೆ ಅಡ್ಡಿಯಾಗುತ್ತಿದ್ದಂತೆ ಅಲ್ಲಿಂದ ತೊಕ್ಕೊಟ್ಟಿಗೆ ಶಿಫ್ಟಾಯಿತು. ಅಂದಿನ ಮೂಡಾ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆದು ಅಕಾಡೆಮಿಯಿಂದ ಮೂಡಾ ಪಡೆದುಕೊಂಡಿದ್ದ 40 ಲಕ್ಷ ರೂಪಾಯಿಯನ್ನು ಹಿಂತಿರುಗಿಸಿದರು. ತೊಕ್ಕೊಟ್ಟು ಬಸ್ ನಿಲ್ದಾಣದ ಹಿಂಬದಿಯ ಕಂದಾಯ ನಿರೀಕ್ಷಕರ ಕಟ್ಟಡಕ್ಕೆ ಕಾಯ್ದಿರಿಸಿದ ಜಾಗದಲ್ಲಿ 25 ಸೆಂಟ್ಸ್ ಜಾಗವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮಂಜೂರುಗೊಳಿಸಲಾಯಿತು. ಬ್ಯಾರಿ ಭವನದ ಕಟ್ಟಡದಲ್ಲಿ ಕಂದಾಯ ನಿರೀಕ್ಷಕರಿಗೆ ಕೊಠಡಿ ಯೊಂದನ್ನು ನೀಡಲು ತೀರ್ಮಾನಿಸಲಾಯಿತು. ಅಕಾಡೆಮಿ ಅಧ್ಯಕ್ಷರಾಗಿದ್ದ ರಹೀಂ ಉಚ್ಚಿಲ್ ಬ್ಯಾರಿ ಭವನ ನಿರ್ಮಾಣಕ್ಕೆ ಬೇಕಾಗಿರುವ ಆರ್‌ಟಿಸಿ, ದಾಖಲೆ ಎಲ್ಲವನ್ನೂ ಸಿದ್ದಪಡಿಸಿ ಭೂಮಿ ಪೂಜೆಗೆ ದಿನಾಂಕ ಪ್ರಕಟಿಸಿ, ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದರು. ಶಿಲಾನ್ಯಾಸ ನಡೆಯುವ ಹೊತ್ತಿಗೆ ಅಬ್ಬಕ್ಕ ಉತ್ಸವ ಸಮಿತಿ ಕ್ಯಾತೆ ತೆಗೆಯಿತು. ಬ್ಯಾರಿ ಭವನ ನಿರ್ಮಾಣದ ಜಾಗದ ಪಕ್ಕದಲ್ಲೇ ಅಬ್ಬಕ್ಕ ಭವನ ನಿರ್ಮಾಣಕ್ಕೆ 50 ಸೆಂಟ್ಸ್ ಜಾಗ ಕಾಯ್ದಿರಿಸಲಾಗಿತ್ತು. ಸರಕಾರದಿಂದ ದುಡ್ಡು ಬಿಡುಗಡೆಯಾಗಿದ್ದರೂ ಕೆಲಸ ಮಾಡಿರಲಿಲ್ಲ. ಬ್ಯಾರಿ ಭವನ ನಿರ್ಮಾಣದ ಶಂಕುಸ್ಥಾಪನೆ ವೇಳೆ ಅಬ್ಬಕ್ಕ ಉತ್ಸವ ಸಮಿತಿ ಪ್ರತಿಭಟನೆಗಿಳಿಯಿತು. ಅಬ್ಬಕ್ಕ ಭವನದ ಪಕ್ಕದಲ್ಲಿ ಬ್ಯಾರಿ ಭವನ ಆದರೆ ಇವರಿಗೇನೂ ತೊಂದರೆಯಿಲ್ಲ. ಆದರೆ ಇದರ ಹಿಂದೆಯೂ ರಾಜಕೀಯದ ವಾಸನೆ ಬಡಿಯಿತು. ಅಬ್ಬಕ್ಕ ಉತ್ಸವದ ಹೆಸರಿನಲ್ಲಿ ಪ್ರತಿಭಟನೆಗಿಳಿದ ಪ್ರಮುಖ ನಾಯಕರೊಬ್ಬರು ಕಾಂಗ್ರೆಸ್ ನಾಯಕರಿಗೆ ಹತ್ತಿರವಾದಂತಹ ವ್ಯಕ್ತಿ! ಇಲ್ಲಿನ ಕಾಂಗ್ರೆಸ್ ಶಾಸಕರು ಮನಸ್ಸು ಮಾಡಿದ್ದರೆ ಚಿಟಿಕೆ ಹೊಡೆಯುವಷ್ಟರಲ್ಲಿ ಈ ಸಮಸ್ಯೆಯನ್ನು ಪರಿಹರಿಸಬಹುದಿತ್ತು. ಆದರೆ ಗಡಿಬಿಡಿ ಮಾಡುವುದು ಬೇಡವೆಂದು ಸುಮ್ಮನೆ ಕೂತಿರಬೆಕು.
ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಅಡ್ಡಿಯಾದ ವ್ಯಕ್ತಿ 1994ರಲ್ಲಿ ಉಳ್ಳಾಲದಲ್ಲಿ ಐ.ಎಂ. ಜಯರಾಮ ಶೆಟ್ಟರ ಗೆಲುವಿಗೆ ಪರೋಕ್ಷ ಕಾರಣರಾಗಿದ್ದರು. ಇವರ ಕುಟುಂಬಿಕರೆಲ್ಲರೂ ಕಾಂಗ್ರೆಸ್ಸಿಗರಾದರೂ ಉಳ್ಳಾಲದ ಈ ವ್ಯಕ್ತಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಗೆಲುವಿಗೆ ಕಾರಣರಾಗಿದ್ದರು. ಆ ನಂತರ ಕಾಂಗ್ರೆಸ್ಸ್ ಪಕ್ಷ ಸೇರಿ ಯು.ಟಿ. ಫರೀದ್ ಕೃಪಾಕಟಾಕ್ಷದಿಂದ ಉಳ್ಳಾಲ ನಗರ ಸಭೆಯ ಅಧ್ಯಕ್ಷರೂ ಆಗಿದ್ದರು.
ಕಾಂಗ್ರೆಸ್ ಹಿನ್ನಲೆಯ ವ್ಯಕ್ತಿಯಿಂದಲೇ ತೊಕ್ಕೊಟ್ಟುವಿನಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಅಡ್ಡಿಯಾಗಿತ್ತು.
ಎರಡೆರಡು ಕಡೆ ಕಾಂಗ್ರೆಸ್ಸಿನ ಸ್ಥಳೀಯ ಪುಡಾರಿಗಳ ಕಂಟಕದಿಂದ ದೂರವಾದ ಬ್ಯಾರಿ ಭವನ ಇದೀಗ ಅಸೈಗೋಳಿ ಹತ್ತಿರದ ತಿಪ್ಲೇಪದವಿಗೆ ಸ್ಥಳಾಂತರಗೊಂಡಿದೆ. 50 ಸೆಂಟ್ಸ್ ಜಾಗವನ್ನು ಕಾಯ್ದಿರಿಸಲಾಗಿದೆ. ಆದರೆ ಈವರೆಗೂ ಸೂಕ್ತ ಕಟ್ಟಡ, ನಕ್ಷೆ ತಯಾರಾಗಿಲ್ಲ, ದಾಖಲೆಗಳು ಸಿದ್ಧಗೊಂಡಿಲ್ಲ. ಇದು ಮುಸ್ಲಿಂ ಬಾಹುಳ್ಯ ಪ್ರದೇಶವಾಗಿರುವುದರಿಂದ ಸ್ಥಳೀಯ ಪುಡಾರಿಗಳ ಕಂಟಕ ಇಲ್ಲಿರದು. ಆದರೆ ಆಡಳಿತರೂಢರಿಗೆ ಅದನ್ನು ಮಾಡುವ ಮನಸ್ಸಿರಬೇಕಷ್ಟೆ.
ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಎಂ.ಬಿ. ಅಬ್ದುಲ್ ರಹಿಮಾನ್ ಬ್ಯಾರಿಗಳ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದವರಾಗಿದ್ದರು. ಆನಂತರ ಬಂದ ನ್ಯಾಯವಾದಿ ಮುಹಮ್ಮದ್ ಹನೀಫ್ ಬ್ಯಾರಿ ಸಾಹಿತ್ಯ, ಸಾಂಸ್ಕೃತಿಕ ರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಬ್ಯಾರಿ-ಕನ್ನಡ-ಇಂಗ್ಲೀಷು ನಿಘಂಟು ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರಹೀಂ ಉಚ್ಚಿಲ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬ್ಯಾರಿ ಲಿಪಿ ಸೇರಿದಂತೆ ಅಕಾಡೆಮಿಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದಿದ್ದರು. ಕರಂಬಾರು ಮುಹಮ್ಮದ್ ಅಧ್ಯಕ್ಷ ಅವಧಿಯಲ್ಲೂ ತನ್ನಿಂದಾಗುವ ಸೇವೆ ಸಲ್ಲಿಸಿದ್ದರು. ಈಗಿನ ಅಧ್ಯಕ್ಷರಾಗಿರುವ ಉಮರ್ ಯು.ಎಚ್. ಸಮರ್ಥರು. ಇವರ ಅವಧಿಯಲ್ಲಾದರೂ ಬ್ಯಾರಿ ಭವನ ತಲೆ ಎತ್ತಲಿ ಎಂಬುದೇ ಬ್ಯಾರಿ ಭಾಷಿಗರ ಆಗ್ರಹ.

ಬ್ಯಾರಿಗಳದ್ದು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಪೌರುಷವೇ…?
ಕೊಂಕಣಿ ಭವನ ಅಶೋಕನಗರದಲ್ಲಿ ಮೇಲೇರುತ್ತಿದೆ. ಕೊಡವ, ಅರೆಭಾಷೆ ಭವನಗಳು ಮೇಲೇರುತ್ತಲೇ ಇದೆ. ತುಳು ಭವನ 6 ಕೋಟಿ ಜತೆಗೆ 4 ಕೋಟಿ ಸರಕಾರದಿಂದ ಹೆಚ್ಚುವರಿ ಅನುದಾನ ಬಂದು ಸುಸಜ್ಜಿತವಾಗಿ ನಿರ್ಮಾಣಗೊಂಡು ತಲೆ ಎತ್ತಿದೆ. ಆದರೆ ಬ್ಯಾರಿ ಭವನ ಇನ್ನೂ ಮೇಲೇರದೆ ಕೆಳಗಡೆ ಹೋಗುತ್ತಿದೆ. ಬೈತುರ್ಲಿ-ತೊಕ್ಕೊಟ್ಟಿನಲ್ಲಿ ವಿರೋಧದಿಂದಾಗಿ ತಿಪ್ಲೇಪದವಿಗೆ ಸ್ಥಳಾಂತರಗೊಂಡಿದೆ. ಆದರೆ ಬ್ಯಾರಿಗಳು ಇದಕ್ಕೂ ನಮಗೂ ಸಂಬಂಧವಿಲ್ಲದಂತೆಯೇ ಕೂತಿದ್ದರು. ದೇಶ, ವಿದೇಶದ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೌರುಷ ತೋರುವ ಬ್ಯಾರಿಗಳು ಬ್ಯಾರಿ ಭವನ ಬ್ಯಾರಿಗಳ ಅಸ್ಮಿತೆ ಅನ್ನುವ ಬಗ್ಗೆ ಯೋಚಿಸಿಯೇ ಇದ್ದಂತಿಲ್ಲ. ತುಳು, ಕೊಂಕಣಿ ಇತರ ಅಕಾಡೆಮಿಗೆ ನಗರದಲ್ಲೇ ಕಚೇರಿ ತೆರಳಲು ಅವಕಾಶವಿದೆ. ಬ್ಯಾರಿಗಳು ಅಸೈಗೋಳಿಗೆ ಹೋಗಬೇಕಿದೆ. ಇದು ದುರ್ದೈವ ಅಲ್ಲವೇ.
