ಭಾರತದಲ್ಲಿ ವಕ್ಫ್ ಮತ್ತು ವಕ್ಫ್ ಕಾನೂನುಗಳು

ಕರಾವಳಿ

ಪರೋಪಕಾರದ ಇಸ್ಲಾಮಿಕ್ ಪರಿಕಲ್ಪನೆಯೇ “ವಕ್ಫ್”ನ ಮೂಲಾಧಾರವಾಗಿದೆ.

ಮುಲ್ಲಾಸ್ ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾ” ಪುಸ್ತಕದ ಪ್ರಕಾರ, “ವಕ್ಫ್ ಎಂದರೆ ಏನು.?

✍️. ಇಸ್ಮಾಯಿಲ್ ಎಸ್. ನ್ಯಾಯವಾದಿ, ಮಂಗಳೂರು

ಮುಸ್ಲಿಂ ಸಮಾಜದ ಹಿತದೃಷ್ಟಿಯಿಂದ ಅತ್ಯಂತ ಪ್ರಾಮುಖ್ಯತೆ ಹೊಂದಿರುವ ವಿಷಯದ ಬಗ್ಗೆ ಚರ್ಚಿಸಲು ನಾನು ಈ ಬರಹವನ್ನು ಬರೆಯುತ್ತಿದ್ದೇನೆ. ವಿಷಯಕ್ಕೆ ಬರುವುದಾದರೆ, ಇಂದು ನಾನು ಭಾರತೀಯ ಕಾನೂನಿನಲ್ಲಿ “ವಕ್ಫ್”ನ ಪರಿಕಲ್ಪನೆ, ವಕ್ಫ್‌ಗೆ ಸಂಬಂಧಿಸಿದ ಕಾನೂನುಗಳು ಹಾಗೂ ಕೇಂದ್ರ ಸರ್ಕಾರವು ಮುಸ್ಲಿಮರನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶದಿಂದ ಜಾರಿಗೆ ತರಲು ಉದ್ದೇಶಿಸಿರುವ “ವಕ್ಫ್ ತಿದ್ದುಪಡಿ ಮಸೂದೆ” ಮತ್ತು ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಿದ್ದೇನೆ.

ಪರೋಪಕಾರದ ಇಸ್ಲಾಮಿಕ್ ಪರಿಕಲ್ಪನೆಯೇ “ವಕ್ಫ್”ನ ಮೂಲಾಧಾರವಾಗಿದೆ. ಮುಸ್ಲಿಮರ ಸಮುದಾಯ ಕಲ್ಯಾಣ, ಶಿಕ್ಷಣ ಮತ್ತು ಧಾರ್ಮಿಕ ಅಭಿವೃದ್ಧಿಯಲ್ಲಿ “ವಕ್ಫ್” ಮತ್ತು “ವಕ್ಫ್ ಸಂಸ್ಥೆ”ಗಳು ತಲೆತಲಾಂತರದಿಂದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾ ಬಂದಿವೆ.
ವಕ್ಫ್‌ನ ವ್ಯಾಖ್ಯಾನ, ಅದಕ್ಕೆ ಸಂಬಂಧಿಸಿದ ಕಾನೂನುಗಳು ಮತ್ತು ವಿವಿಧ ರೀತಿಯ ವಕ್ಫ್ ಆಸ್ತಿಗಳ ಬಗ್ಗೆ ಅರ್ಥಮಾಡಿಕೊಳ್ಳುವ ಜೊತೆಗೆ, 1913ರ ವಕ್ಫ್ ಕಾಯಿದೆ, 1995ರ ವಕ್ಫ್ ಕಾಯಿದೆ, 2013ರ ವಕ್ಫ್ ತಿದ್ದುಪಡಿ ಕಾಯಿದೆ ಮತ್ತು 2024ರ ವಕ್ಫ್ (ತಿದ್ದುಪಡಿ) ಮಸೂದೆಯನ್ನು ವಿಶ್ಲೇಷಿಸುವ ಪ್ರಯತ್ನ ಮಾಡೋಣ.

ಭಾರತದಲ್ಲಿ ವಕ್ಫ್ ಕಾನೂನುಗಳ ವ್ಯಾಖ್ಯಾನ ಮತ್ತು ಅನುಷ್ಠಾನವನ್ನು ರೂಪಿಸಿದ ಪ್ರಮುಖ ಕೇಸ್ ತೀರ್ಪುಗಳ ಬಗ್ಗೆ ಹಾಗೂ 2024ರ ತಿದ್ದುಪಡಿ ಮಸೂದೆಯು ಮುಸ್ಲಿಂ ಸಮುದಾಯದ ಮೇಲೆ ಬೀರಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆ ತಿಳಿಸುವ ಸಣ್ಣ ಪ್ರಯತ್ನ ಮಾಡಲು ಉದ್ದೇಶಿಸಿದ್ದೇನೆ.
ಈ ಬರಹವನ್ನು ನಾನು ಕಾನೂನು ಪಂಡಿತನಾಗಿ ಬರೆಯುತ್ತಿಲ್ಲ. ಬದಲಿಗೆ ಕಾನೂನಿನ ವಿದ್ಯಾರ್ಥಿಯಾಗಿ ಬರೆಯುತ್ತಿದ್ದೇನೆ. ಕಾನೂನು ಒಂದು ಮಹಾಸಾಗರದಂತಿದೆ. ಈ ಮಹಾಸಾಗರದ ಆಳ, ಅಗಲವನ್ನು ಸಂಪೂರ್ಣವಾಗಿ ಅರಿತ “ನ್ಯಾಯವಾದಿ”ಗಳಿಲ್ಲ ಎಂದರೂ ತಪ್ಪಾಗದು. ಅದಕ್ಕಾಗಿಯೇ “ನ್ಯಾಯವಾದಿ”ಗಳನ್ನು ಅಥವಾ “ವಕೀಲ”ರನ್ನು “ನ್ಯಾಯ ಪಂಡಿತರು” ಎಂದು ಕರೆಯದೆ, “ಲಾ ಪ್ರಾಕ್ಟೀಷನರ್” ಅಥವಾ “ಕಾನೂನು ಅಭ್ಯಾಸಕಾರ” ಎಂದು ಕರೆಯಲಾಗುತ್ತದೆ.

ಮೊದಲಿಗೆ “ವಕ್ಫ್” ಮತ್ತು ಅದರ ಅಡಿಪಾಯಗಳನ್ನು ಅರ್ಥಮಾಡಿಕೊಳ್ಳೋಣ:
“ವಕ್ಫ್” ಎಂಬ ಪದವು ಅರೇಬಿಕ್‌ನ “ವಕಾಫಾ” ಎಂಬ ಪದದಿಂದ ಬಂದಿದ್ದು, “ನಿಲ್ಲಿಸುವುದು” ಅಥವಾ “ಸಂರಕ್ಷಿಸುವುದು” ಎಂಬ ಅರ್ಥವನ್ನು ಹೊಂದಿದೆ. ಇಸ್ಲಾಮಿಕ್ ನ್ಯಾಯಶಾಸ್ತ್ರದಲ್ಲಿ, ವಕ್ಫ್ ಎಂದರೆ ಧಾರ್ಮಿಕ ಉದ್ದೇಶಗಳಿಗಾಗಿ ಶಾಶ್ವತವಾಗಿ ದಾನವಾಗಿ ಅಥವಾ ದತ್ತಿಯ ರೂಪದಲ್ಲಿ ನೀಡಲಾದ ಚರ ಅಥವಾ ಸ್ಥಿರ ಆಸ್ತಿಯಾಗಿದೆ. ಯಾವುದೇ ಆಸ್ತಿಯನ್ನು “ವಕ್ಫ್” ಎಂದು ಗೊತ್ತುಪಡಿಸಿದ ತಕ್ಷಣ, ಅದರ ಮಾಲೀಕತ್ವವು ಅಲ್ಲಾಹನಿಗೆ ಮರುವರ್ಗಾವಣೆಯಾಗುತ್ತದೆ.

“ವಕ್ಫ್” ಘೋಷಣೆಯ ಸಮಯದಲ್ಲಿ ನಿಗದಿಪಡಿಸಿದ ಇಸ್ಲಾಂ ಅನುಮತಿಸುವ ಧಾರ್ಮಿಕ, ದತ್ತಿ, ದಾನದ ಉದ್ದೇಶಗಳಿಗಾಗಿ ಆ ಆಸ್ತಿಯನ್ನು ಬಳಸಲಾಗುತ್ತದೆ.
“ಮುಲ್ಲಾಸ್ ಪ್ರಿನ್ಸಿಪಲ್ಸ್ ಆಫ್ ಮೊಹಮ್ಮದನ್ ಲಾ” ಪುಸ್ತಕದ ಪ್ರಕಾರ, “ವಕ್ಫ್ ಎಂದರೆ ಒಬ್ಬ ಮುಸ್ಲಿಂ ವ್ಯಕ್ತಿಯು ತನ್ನ ಆಸ್ತಿಯನ್ನು ಶಾಶ್ವತವಾಗಿ ಇಸ್ಲಾಂ ಅಂಗೀಕರಿಸುವ ಧಾರ್ಮಿಕ, ದತ್ತಿ, ದಾನದ ಕೆಲಸಕ್ಕಾಗಿ ಕೊಡುವುದು ಅಥವಾ ಮೀಸಲಿಡುವುದು” ಎಂದು ವ್ಯಾಖ್ಯಾನಿಸಲಾಗಿದೆ.

ಯಾವುದೇ ವಕ್ಫ್ ಮಾನ್ಯವಾಗಲು ಈ ಕೆಳಗಿನ ಷರತ್ತುಗಳಿಗೆ ಬದ್ಧವಾಗಿರಬೇಕು:

  1. ಧಾರ್ಮಿಕ ಉದ್ದೇಶಕ್ಕಾಗಿ ಸಮರ್ಪಣೆ: ಆಸ್ತಿಯನ್ನು ಇಸ್ಲಾಂ ಅಂಗೀಕರಿಸುವ ಮಸೀದಿ, ಶಾಲೆ, ಆಸ್ಪತ್ರೆ ಅಥವಾ ಅನಾಥಾಶ್ರಮ ಸ್ಥಾಪನೆಯಂತಹ ಧಾರ್ಮಿಕ, ದತ್ತಿ ಅಥವಾ ಧಾರ್ಮಿಕ ಉದ್ದೇಶಕ್ಕಾಗಿ ಸಮರ್ಪಿಸಬೇಕು.
  2. ಬದಲಾಯಿಸಲಾಗದಿರುವುದು: ದತ್ತಿಯು ಬದಲಾಯಿಸಲಾಗದಂತಿರಬೇಕು. ಒಮ್ಮೆ ಆಸ್ತಿಯನ್ನು ವಕ್ಫ್ ಎಂದು ಸಮರ್ಪಿಸಿದರೆ, ದಾನಿ ತನ್ನ ಮಾಲೀಕತ್ವವನ್ನು ಮರಳಿ ಪಡೆಯಲು ಅಥವಾ ಉದ್ದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ.
  3. ಶಾಶ್ವತ ಉಳಿವು: ಆಸ್ತಿಯು ಶಾಶ್ವತವಾಗಿ ಉಳಿಯುವಂತಿರಬೇಕು ಮತ್ತು ಅದರ ಪ್ರಯೋಜನಗಳು ಸಮುದಾಯಕ್ಕೆ ಅನಿರ್ದಿಷ್ಟವಾಗಿ ಸೇವೆ ಸಲ್ಲಿಸುವುದನ್ನು ಖಾತ್ರಿಪಡಿಸಬೇಕು.
  4. ಆಸ್ತಿ ವಕೀಫ್‌ನ ಸ್ವಂತದ್ದಾಗಿರಬೇಕು: ವಕ್ಫ್ ಮಾಡುವ ಆಸ್ತಿಯು “ವಕೀಫ್”ಗೆ ಸೇರಿದ್ದಾಗಿರಬೇಕು. ಯಾವುದೇ ವ್ಯಕ್ತಿಯು ತನ್ನ ಸ್ವಂತ ಆಸ್ತಿಯನ್ನು ಮಾತ್ರ ವಕ್ಫ್ ಮಾಡಬಹುದು.
  5. ವಕೀಫ್‌ನ ಯೋಗ್ಯತೆ: ವಕೀಫ್ ಪ್ರಾಯಸ್ಥನಾಗಿರಬೇಕು, ಮತಿಭ್ರಾಂತನಾಗಿರಬಾರದು ಮತ್ತು ವಕ್ಫ್‌ನ ಉದ್ದೇಶವು ಧರ್ಮಸಮ್ಮತವಾಗಿರಬೇಕು.
  6. ಜಂಟಿ ಹಕ್ಕು (ಮುಷಾ): ಯಾವುದೇ ಆಸ್ತಿಯಲ್ಲಿ ಒಬ್ಬ ವಕೀಫ್‌ಗೆ ಇರುವ ಜಂಟಿ ಹಕ್ಕನ್ನು “ವಕ್ಫ್ ಮುಷಾ” ಪ್ರಕಾರ ವಕ್ಫ್ ಮಾಡಬಹುದು. ಆದರೆ, ಮಸೀದಿ, ಖಬರ್ ಸ್ಥಾನ ಮುಂತಾದ ಧಾರ್ಮಿಕ ಕಾರ್ಯಗಳಿಗೆ ಈ ರೀತಿಯ ವಕ್ಫ್ ಮಾಡುವಂತಿಲ್ಲ.
  7. ಈ ತತ್ವಗಳು “ವಕ್ಫ್”ನ್ನು ಶಾಶ್ವತ ಪರಂಪರೆಯಾಗಿ ಉಳಿಸಿವೆ. ಅನಾದಿ ಕಾಲದಿಂದ ವಕ್ಫ್ ಆಸ್ತಿಗಳು ಮುಸ್ಲಿಂ ಸಮಾಜದ ಏಳಿಗೆಗೆ ಕೊಡುಗೆ ನೀಡುತ್ತಾ ಬಂದಿವೆ.
    ವಕ್ಫ್‌ನ ವಿಧಗಳು
    ದತ್ತಿಯ ಸ್ವರೂಪ ಮತ್ತು ರಚನೆಯ ಆಧಾರದ ಮೇಲೆ “ವಕ್ಫ್”ನ್ನು ಹಲವು ವಿಧಗಳಾಗಿ ವಿಂಗಡಿಸಬಹುದು. ವಕ್ಫ್ ವ್ಯವಸ್ಥೆಯ ಅಧ್ಯಯನಕ್ಕೆ ಈ ವಿಧಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.
  8. ಘೋಷಣೆಯ ಮೂಲಕ (ವಕ್ಫ್ ಕೈದ್): ಇದು ವಕ್ಫ್‌ನ ಸಾಮಾನ್ಯ ರೂಪವಾಗಿದೆ. ದಾನಿಯು ತನ್ನ ಆಸ್ತಿಯನ್ನು ನಿರ್ದಿಷ್ಟ ಉದ್ದೇಶಕ್ಕಾಗಿ “ವಕ್ಫ್” ಎಂದು ಸ್ಪಷ್ಟವಾಗಿ ಘೋಷಿಸುತ್ತಾನೆ. ಉದಾಹರಣೆಗೆ, ಮಸೀದಿ ಅಥವಾ ಶಾಲೆಗಾಗಿ ಮನೆಯನ್ನು ಅರ್ಪಿಸುವುದು.
  9. ದೀರ್ಘಾವಧಿ ಬಳಕೆಯಿಂದ (ಬಳಕೆದಾರರಿಂದ ವಕ್ಫ್): ಧಾರ್ಮಿಕ ಅಥವಾ ದತ್ತಿ ಉದ್ದೇಶಕ್ಕಾಗಿ ದೀರ್ಘಕಾಲ ಬಳಸಲಾದ ಆಸ್ತಿಯನ್ನು ಔಪಚಾರಿಕ ಘೋಷಣೆ ಇಲ್ಲದಿದ್ದರೂ “ವಕ್ಫ್” ಎಂದು ಪರಿಗಣಿಸಲಾಗುತ್ತದೆ. ಇದು ಆಸ್ತಿಯ ಸಾಂಪ್ರದಾಯಿಕ ಬಳಕೆಯ ಮೇಲೆ ಆಧಾರಿತವಾಗಿದೆ.
  10. ಉತ್ತರಾಧಿಕಾರದ ಮೂಲಕ (ವಕ್ಫ್-ಅಲಾಲ್-ಔಲಾದ್): ದಾನಿಯ ಉತ್ತರಾಧಿಕಾರಿಗಳ ರೇಖೆ ಕೊನೆಗೊಂಡಾಗ ಅಥವಾ ಕುಟುಂಬದ ಅಳಿವಿನ ನಂತರ ಆಸ್ತಿಯನ್ನು ವಕ್ಫ್ ಎಂದು ಘೋಷಿಸಿದಾಗ ಇದು ಸಂಭವಿಸುತ್ತದೆ. ಉದಾಹರಣೆಗೆ, ಕುಟುಂಬದ ಮನೆ ಖಾಲಿಯಾದರೆ, ಅದನ್ನು ಸಾರ್ವಜನಿಕ ಪ್ರಯೋಜನಕ್ಕಾಗಿ ವಕ್ಫ್ ಆಗಿ ಪರಿವರ್ತಿಸಬಹುದು.
  11. ಚಾರಿಟೇಬಲ್ ವಕ್ಫ್: ಶಿಕ್ಷಣ, ಆರೋಗ್ಯ, ಕೆರೆಗಳು, ಬಾವಿಗಳು, ಮುಸಾಫಿರ್ ಖಾನೆ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಸಮರ್ಪಿಸಲಾದ ವಕ್ಫ್ ಆಗಿದೆ. ಈ ವಕ್ಫ್‌ಗಳು ಸಮುದಾಯವನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿವೆ.
  12. ಧಾರ್ಮಿಕ ವಕ್ಫ್: ಮಸೀದಿಗಳು, ಮದರಸಾಗಳು, ಇತರ ಪ್ರಾರ್ಥನಾ ಸ್ಥಳಗಳು ಮತ್ತು ಖಬರ್ ಸ್ಥಾನಗಳ ನಿರ್ವಹಣೆಗಾಗಿ ಸಮರ್ಪಿಸಲಾದ ವಕ್ಫ್ ಆಗಿದೆ.
  13. ವೈಯಕ್ತಿಕ ವಕ್ಫ್: ಕುಟುಂಬ ಸದಸ್ಯರನ್ನು ಒಳಗೊಂಡಂತೆ ನಿರ್ದಿಷ್ಟ ವ್ಯಕ್ತಿಗಳ ಪ್ರಯೋಜನಕ್ಕಾಗಿ ಸಮರ್ಪಿಸಲಾದ ವಕ್ಫ್ ಆಗಿದೆ. ಇದು ವಿಶಾಲ ಸಮುದಾಯಕ್ಕಿಂತ ನಿರ್ದಿಷ್ಟ ಫಲಾನುಭವಿಗಳ ಮೇಲೆ ಕೇಂದ್ರೀಕರಿಸುತ್ತದೆ.
    ಪ್ರತಿಯೊಂದು ವಕ್ಫ್ ವಿಧವು ವಿಶಿಷ್ಟ ಉದ್ದೇಶವನ್ನು ಪೂರೈಸುತ್ತದೆ. ಧಾರ್ಮಿಕ ಮತ್ತು ದತ್ತಿ ಮೂಲಕ ವ್ಯಕ್ತಿಗಳು ಮತ್ತು ಸಮುದಾಯಗಳು ಸಮಾಜದ ಕಲ್ಯಾಣಕ್ಕೆ ಕೊಡುಗೆ ನೀಡುವ ವೈವಿಧ್ಯಮಯ ವಿಧಾನಗಳನ್ನು ಇದು ಪ್ರತಿನಿಧಿಸುತ್ತದೆ.
    “ವಕ್ಫ್‌ನಾಮ” ನೋಂದಣಿ ಕಾಯಿದೆ ಪ್ರಕಾರ ವಕ್ಫ್ ನೋಂದಣಿ ಕಡ್ಡಾಯವಾಗಿದ್ದರೂ, ಬಾಯಿ ಮೂಲಕ ಅಥವಾ ಕೃತ್ಯದ ಮೂಲಕ ಮಾಡಿದ ವಕ್ಫ್ ಸಹ ಕಾನೂನುಬದ್ಧವೆಂದು ಪರಿಗಣಿಸಲಾಗುತ್ತದೆ.

ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಸರ್ಕಾರದ ಪಾತ್ರ

  1. ವಕ್ಫ್ ಆಸ್ತಿಗಳ ಉಪಯೋಗ: ವಕ್ಫ್ ಆಸ್ತಿಗಳು ಕೇವಲ ವೈಯಕ್ತಿಕ ದತ್ತಿಗಳಿಗೆ ಸೀಮಿತವಲ್ಲ. ಸರ್ಕಾರಗಳು ಶಾಲೆಗಳು, ಆಸ್ಪತ್ರೆಗಳು, ಖಬರ್ ಸ್ಥಾನಗಳು, ಈದ್ಗಾಹ್‌ಗಳು ಮತ್ತು ಸಮುದಾಯ ಕೇಂದ್ರಗಳಂತಹ ಸಾರ್ವಜನಿಕ ಯೋಜನೆಗಳಿಗೆ ಇವನ್ನು ಮಂಜೂರು ಮಾಡುತ್ತವೆ. ವಕ್ಫ್ ಮಂಡಳಿಗಳ ಮೂಲಕ ಆಸ್ತಿಗಳ ಮೇಲ್ವಿಚಾರಣೆ ನಡೆಸಿ, ಕ್ಷೀಣಿಸುತ್ತಿರುವ ಆಸ್ತಿಗಳ ಕ್ರಿಯಾತ್ಮಕತೆಯನ್ನು ಪುನಃಸ್ಥಾಪಿಸಲು ಮತ್ತು ನವೀಕರಿಸಲು ಪ್ರಯತ್ನಿಸುತ್ತವೆ.
  2. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ: ರಾಷ್ಟ್ರೀಯ ಮಟ್ಟದಲ್ಲಿ ವಕ್ಫ್ ಆಸ್ತಿಗಳ ಆಡಳಿತವನ್ನು ಈ ಸಚಿವಾಲಯ ನೋಡಿಕೊಳ್ಳುತ್ತದೆ. 1995ರ ವಕ್ಫ್ ಕಾಯಿದೆಯಡಿ ಪ್ರತಿ ರಾಜ್ಯವು ತನ್ನದೇ ಆದ “ರಾಜ್ಯ ವಕ್ಫ್ ಮಂಡಳಿ”ಯನ್ನು ಹೊಂದಿದೆ. ಈ ಮಂಡಳಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ವಕ್ಫ್ ಆಸ್ತಿಗಳ ಸರಿಯಾದ ಬಳಕೆಯನ್ನು ಮೇಲ್ವಿಚಾರಣೆ ಮಾಡುತ್ತವೆ, ದುರುಪಯೋಗವನ್ನು ತಡೆಯುತ್ತವೆ ಮತ್ತು ಅತಿಕ್ರಮಣಗಳಿಂದ ರಕ್ಷಿಸುತ್ತವೆ.
  3. ಮುತವಲ್ಲಿ:
    a) ಆಸ್ತಿಯ ವಕ್ಫ್ ಘೋಷಣೆಯ ಸಮಯದಲ್ಲಿ ದಾನಿ (ವಕೀಫ್) ತನ್ನನ್ನು ಅಥವಾ ಇತರರನ್ನು “ಮುತವಲ್ಲಿ”ಯಾಗಿ ನೇಮಿಸಬಹುದು. ಮುತವಲ್ಲಿ ವಕ್ಫ್ ಆಸ್ತಿಯ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಾನೆ ಮತ್ತು ಆಸ್ತಿಯನ್ನು ಘೋಷಿತ ಉದ್ದೇಶಕ್ಕೆ ಬಳಸುವುದನ್ನು ಖಾತ್ರಿಪಡಿಸುತ್ತಾನೆ.
    b) ಮುತವಲ್ಲಿ ನೇಮಕವಾಗದಿದ್ದರೆ, ನ್ಯಾಯಾಲಯಗಳು ಅಥವಾ ವಕ್ಫ್ ಮಂಡಳಿಗಳು ಒಬ್ಬರನ್ನು ನೇಮಿಸಬಹುದು. ಒಂದು ಮೊಹಲ್ಲಾದ ಸದಸ್ಯರು ಸಹ ಒಟ್ಟಾಗಿ ನಿರ್ಣಯಿಸಿ ಮುತವಲ್ಲಿಯನ್ನು ಆಯ್ಕೆ ಮಾಡಬಹುದು.
    c) ಕೋರ್ಟ್ ಅಥವಾ ವಕ್ಫ್ ಮಂಡಳಿಯ ಅನುಮತಿಯಿಲ್ಲದೆ ಮುತವಲ್ಲಿ ಯಾವುದೇ ವಕ್ಫ್ ಜಮೀನನ್ನು ಪರಭಾರೆ ಮಾಡುವ, ಮಾರಾಟ ಮಾಡುವ ಅಥವಾ ಈಡೇರಿಸುವ ಅಧಿಕಾರ ಹೊಂದಿರುವುದಿಲ್ಲ.
    d) ಮುತವಲ್ಲಿಗೆ ಆಸ್ತಿ ನಿರ್ವಹಣೆಗಾಗಿ ನ್ಯಾಯಯುತ ಸಂಭಾವನೆ ಅಥವಾ ಪರಿಹಾರ ನೀಡಬಹುದು.
    e) ವಕ್ಫ್ ಕಾಯಿದೆ ಪ್ರಕಾರ, ಎಲ್ಲಾ ಮುತವಲ್ಲಿಗಳು ವಕ್ಫ್ ಆಸ್ತಿಗಳ ದಾಖಲೆಗಳು ಮತ್ತು ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಬೇಕು.
    f) ವಕ್ಫ್ ಮಂಡಳಿಯ ಅನುಮತಿಯಿಲ್ಲದೆ ಅಥವಾ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಮುತವಲ್ಲಿ ಆಸ್ತಿಯನ್ನು ಲೀಸ್‌ಗೆ ನೀಡುವಂತಿಲ್ಲ.
    ಭಾರತದಲ್ಲಿ ವಕ್ಫ್ ಕಾನೂನುಗಳು
    ಭಾರತದಲ್ಲಿ ವಕ್ಫ್ ವ್ಯಾಖ್ಯಾನ ಮತ್ತು ಆಸ್ತಿ ನಿರ್ವಹಣೆಗೆ ಸಂಬಂಧಿಸಿದಂತೆ 1913ರ “ವಕ್ಫ್ ಮಾನ್ಯತಾ ಕಾಯಿದೆ”, 1995ರ “ವಕ್ಫ್ ಕಾಯಿದೆ”, 2013ರ “ವಕ್ಫ್ ತಿದ್ದುಪಡಿ ಕಾಯಿದೆ” ಜಾರಿಯಲ್ಲಿವೆ. ಇವುಗಳ ಜೊತೆಗೆ, ಕೇಂದ್ರ ಸರ್ಕಾರವು 2024ರ ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಿದ ವಿವಾದಾತ್ಮಕ “ವಕ್ಫ್ ತಿದ್ದುಪಡಿ ಮಸೂದೆ”ಯನ್ನು ಜಾರಿಗೆ ತರಲು ಉದ್ದೇಶಿಸಿದೆ.
  4. ವಕ್ಫ್ ಮಾನ್ಯತಾ ಕಾಯಿದೆ, 1913: ಈ ಕಾಯಿದೆಯು “ವಕ್ಫ್”ನ ವ್ಯಾಖ್ಯಾನವನ್ನು ನೀಡಿತು ಮತ್ತು ಖಾಸಗಿ ವಕ್ಫ್‌ಗೆ ಮಾನ್ಯತೆ ಒದಗಿಸಿತು. ದಾನಿ ತನ್ನ ಕುಟುಂಬ, ಮಕ್ಕಳು ಅಥವಾ ವಂಶಸ್ಥರ ನಿರ್ವಹಣೆಗಾಗಿ ವಕ್ಫ್ ಮಾಡುವ ಹಕ್ಕನ್ನು ಇದು ಒಪ್ಪಿತು. ಹನಫಿ ಮುಸ್ಲಿಮರಾದರೆ, ತಮ್ಮ ಜೀವನಾವಧಿಯಲ್ಲಿ ಸ್ವಂತ ನಿರ್ವಹಣೆಗಾಗಿ ವಕ್ಫ್ ಮಾಡಬಹುದು ಮತ್ತು ಆಸ್ತಿಯ ಆದಾಯದಿಂದ ಸಾಲ ಪಾವತಿಗೆ ಬಳಸಬಹುದು ಎಂದು ಅನುಮತಿಸಿತು. ಆದರೆ, ಇಂತಹ ವಕ್ಫ್ ಆಸ್ತಿಯ ಪ್ರಯೋಜನವು ಕಾಲಾಂತರದಲ್ಲಿ ಸಾರ್ವಜನಿಕರಿಗೆ ಮೀಸಲಾಗಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು.
  5. ವಕ್ಫ್ ಕಾಯಿದೆ, 1995: ಭಾರತದಾದ್ಯಂತ ವಕ್ಫ್ ಆಸ್ತಿಗಳನ್ನು ಕ್ರೋಢೀಕರಿಸುವ ಮತ್ತು ನಿಯಂತ್ರಿಸುವ ಗುರಿಯನ್ನು ಈ ಕಾಯಿದೆ ಹೊಂದಿದೆ. ಇದರ ಮುಖ್ಯ ಉದ್ದೇಶಗಳು:
    a) ಸುಗಮ ಆಡಳಿತ: ರಾಜ್ಯ ವಕ್ಫ್ ಮಂಡಳಿಗಳ ಸ್ಥಾಪನೆಯ ಮೂಲಕ ಆಸ್ತಿ ನಿರ್ವಹಣೆಗೆ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳುವುದು.
    b) ಪಾರದರ್ಶಕತೆ ಮತ್ತು ಹೊಣೆಗಾರಿಕೆ: ಆಸ್ತಿಗಳ ನೋಂದಣಿಯನ್ನು ಕಡ್ಡಾಯಗೊಳಿಸಿ, ದುರುಪಯೋಗ ಮತ್ತು ಅಕ್ರಮ ಅತಿಕ್ರಮಣಗಳನ್ನು ತಡೆಗಟ್ಟಲು ವಿವರವಾದ ದಾಖಲೆಗಳನ್ನು ನಿರ್ವಹಿಸುವುದು.
    c) ರಕ್ಷಣೆ: ಆಸ್ತಿಗಳನ್ನು ಅತಿಕ್ರಮಣ, ದುರುಪಯೋಗ ಮತ್ತು ಅನಧಿಕೃತ ವರ್ಗಾವಣೆಯಿಂದ ರಕ್ಷಿಸಲು ಕಾನೂನು ಕ್ರಮಗಳನ್ನು ಒದಗಿಸುವುದು.

ಪ್ರಮುಖ ನಿಬಂಧನೆಗಳು:
a) ಪ್ರತಿ ರಾಜ್ಯದಲ್ಲಿ ವಕ್ಫ್ ಮಂಡಳಿಗಳ ಸ್ಥಾಪನೆ.
b) ಕೇಂದ್ರ ವಕ್ಫ್ ಕೌನ್ಸಿಲ್ ಸ್ಥಾಪನೆಯ ಮೂಲಕ ಸರ್ಕಾರಗಳಿಗೆ ಸಲಹೆ ನೀಡುವ ವ್ಯವಸ್ಥೆ.
c) ಎಲ್ಲಾ ವಕ್ಫ್ ಆಸ್ತಿಗಳ ಕಡ್ಡಾಯ ನೋಂದಣಿ.
d) ಅತಿಕ್ರಮಣದ ವಿರುದ್ಧ ಕಾನೂನು ಕ್ರಮಕ್ಕೆ ಅಧಿಕಾರ.
ಈ ಕಾಯಿದೆ ದೃಢವಾದ ಅಡಿಪಾಯವನ್ನು ಹಾಕಿದರೂ, ಅಧಿಕಾರಶಾಹಿ ಅಸಮರ್ಥತೆ, ಪಾರದರ್ಶಕತೆಯ ಕೊರತೆ ಮತ್ತು ನಿರಂತರ ಅತಿಕ್ರಮಣಗಳಂತಹ ಸವಾಲುಗಳನ್ನು ಎದುರಿಸಿತು. ಇವನ್ನು ಪರಿಹರಿಸಲು 2013ರಲ್ಲಿ ತಿದ್ದುಪಡಿ ತರಲಾಯಿತು.

  1. ವಕ್ಫ್ ತಿದ್ದುಪಡಿ ಕಾಯಿದೆ, 2013: 1995ರ ಕಾಯಿದೆಯ ನ್ಯೂನತೆಗಳನ್ನು ಸರಿಪಡಿಸಲು ಮತ್ತು ಆಸ್ತಿ ರಕ್ಷಣೆಯನ್ನು ಬಲಪಡಿಸಲು ಈ ತಿದ್ದುಪಡಿ ಜಾರಿಗೊಂಡಿತು.
  2. ಪ್ರಮುಖ ಬದಲಾವಣೆಗಳು:
    a) ಅತಿಕ್ರಮಣಕ್ಕೆ ಕಠಿಣ ದಂಡ.
    b) ಆನ್‌ಲೈನ್ ನೋಂದಣಿ ವ್ಯವಸ್ಥೆಗೆ ಚಾಲನೆ.
    c) ವಕ್ಫ್ ಮಂಡಳಿಗಳಿಗೆ ವಿಸ್ತೃತ ಅಧಿಕಾರ.
    d) ನಿಯಮಿತ ಲೆಕ್ಕಪರಿಶೋಧನೆ ಮತ್ತು ತಪಾಸಣೆ ಕಡ್ಡಾಯ.
    ಪರಿಣಾಮ:
    ಈ ತಿದ್ದುಪಡಿಯು ಆಸ್ತಿ ಸಂರಕ್ಷಣೆ ಮತ್ತು ಸಮುದಾಯ ಪ್ರಯೋಜನಕ್ಕಾಗಿ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸಿತು. ಆದರೆ, ಆಡಳಿತದ ಇಚ್ಛಾಶಕ್ತಿ ಕೊರತೆಯಿಂದ ಸಂಪೂರ್ಣ ಯಶಸ್ಸು ಸಾಧಿಸಲಿಲ್ಲ.
  3. ವಕ್ಫ್ (ತಿದ್ದುಪಡಿ) ಮಸೂದೆ, 2024: ಆಗಸ್ಟ್ 8, 2024ರಂದು ಲೋಕಸಭೆಯಲ್ಲಿ ಮಂಡಿಸಲಾದ ಈ ಮಸೂದೆ ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿಯ ಪರಾಮರ್ಶೆಗೆ ಕಳುಹಿಸಲಾಗಿದೆ.
    ಪ್ರಮುಖ ನಿಬಂಧನೆಗಳು:
    a) ಕಾಯಿದೆಯ ಮರುನಾಮಕರಣ: “The United Waqf Management, Empowerment, Efficiency, and Development Act, 1995”.
    b) ಐದು ವರ್ಷ ಇಸ್ಲಾಂ ಆಚರಿಸಿದವರು ಮಾತ್ರ ವಕ್ಫ್ ಮಾಡಬಹುದು ಎಂಬ ನಿರ್ಬಂಧ.
    c) ದೀರ್ಘಾವಧಿ ಬಳಕೆಯಿಂದ ವಕ್ಫ್ ಮಾನ್ಯತೆ ರದ್ದು.
    d) “ವಕ್ಫ್-ಅಲಾಲ್-ಔಲಾದ್”ಗೆ ಕಡಿವಾಣ; ವಾರಸುದಾರರು ಆಸ್ತಿಯನ್ನು ಪಡೆಯಬಹುದು.
    e) ಸರ್ಕಾರಿ ಆಸ್ತಿ ತಕರಾರು ಇದ್ದರೆ ಕಲೆಕ್ಟರ್ ನಿರ್ಧರಿಸುವ ಅಧಿಕಾರ.
    f) ವಕ್ಫ್ ಮಂಡಳಿಗಳ ಆಸ್ತಿ ಗುರುತಿಸುವ ಅಧಿಕಾರ ತೆಗೆದುಹಾಕುವುದು.
    g) ಸರ್ವೇ ಕಮಿಷನರ್ ಬದಲಿಗೆ ಕಲೆಕ್ಟರ್‌ಗೆ ಸಮೀಕ್ಷೆ ಅಧಿಕಾರ.
    h) ಕೇಂದ್ರ ವಕ್ಫ್ ಕೌನ್ಸಿಲ್‌ನಲ್ಲಿ ಮುಸ್ಲಿಮೇತರರಿಗೆ ಸ್ಥಾನ.
    i) ರಾಜ್ಯ ವಕ್ಫ್ ಮಂಡಳಿಗಳಲ್ಲಿ ಧರ್ಮ ಲೆಕ್ಕಿಸದೆ ನಾಮನಿರ್ದೇಶನ.
    j) ಇಬ್ಬರು ಮುಸ್ಲಿಮೇತರರು, ಶಿಯಾ-ಸುನ್ನಿ ಪ್ರತಿನಿಧಿಗಳು, ಮಹಿಳೆಯರು ಕಡ್ಡಾಯ.
    k) ನ್ಯಾಯಮಂಡಳಿಗಳಲ್ಲಿ ಮುಸ್ಲಿಂ ಕಾನೂನು ತಜ್ಞರ ಅಗತ್ಯತೆ ತೆಗೆದುಹಾಕುವುದು.
    l) ನ್ಯಾಯಮಂಡಳಿ ಆದೇಶದ ವಿರುದ್ಧ 90 ದಿನಗಳಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ.
    m) ಕೇಂದ್ರ ಸರ್ಕಾರಕ್ಕೆ ನೋಂದಣಿ, ಲೆಕ್ಕಪರಿಶೋಧನೆ ಅಧಿಕಾರ.
    n) ಶಿಯಾ, ಬೋಹ್ರಾ, ಅಗಾಖಾನಿ ಪಂಗಡಗಳಿಗೆ ಪ್ರತ್ಯೇಕ ಮಂಡಳಿ ಸಾಧ್ಯತೆ.

ಮುಸ್ಲಿಮರ ಮೇಲೆ ಸಂಭವನೀಯ ಪ್ರತಿಕೂಲ ಪರಿಣಾಮಗಳು

  1. ಪ್ರಾತಿನಿಧ್ಯ ದುರ್ಬಲಗೊಳಿಸುವುದು: ಮುಸ್ಲಿಮೇತರರಿಗೆ ಕೌನ್ಸಿಲ್ ಮತ್ತು ಮಂಡಳಿಗಳಲ್ಲಿ ಸ್ಥಾನ ನೀಡುವುದರಿಂದ ಧಾರ್ಮಿಕ ದತ್ತಿಗಳ ಮೇಲೆ ಅನ್ಯಮತೀಯರ ಹಸ್ತಕ್ಷೇಪ ಸಾಧ್ಯವಾಗಬಹುದು.
  2. ಪಾರಂಪರಿಕ ವಕ್ಫ್ ತೆಗೆಯುವಿಕೆ: ದೀರ್ಘಾವಧಿ ಬಳಕೆಯ ವಕ್ಫ್ ಮಾನ್ಯತೆ ರದ್ದತಿಯಿಂದ ಔಪಚಾರಿಕ ಘೋಷಣೆ ಇಲ್ಲದ ಆಸ್ತಿಗಳು ಕಳೆದುಹೋಗಬಹುದು.
  3. ಸರ್ಕಾರಿ ಹಸ್ತಕ್ಷೇಪ: ಕಲೆಕ್ಟರ್‌ಗೆ ಅಧಿಕಾರ ನೀಡುವುದರಿಂದ ಸರ್ಕಾರದ ಅನಗತ್ಯ ಮಧ್ಯಪ್ರವೇಶ ಮತ್ತು ಪಕ್ಷಪಾತದ ನಿರ್ಧಾರಗಳು ಸಂಭವಿಸಬಹುದು.
  4. ಕಾನೂನು ಪರಿಣತಿಯ ಕೊರತೆ: ನ್ಯಾಯಮಂಡಳಿಗಳಿಂದ ಇಸ್ಲಾಮಿಕ್ ಕಾನೂನು ತಜ್ಞರನ್ನು ತೆಗೆದರೆ, ಸೂಕ್ಷ್ಮ ತಿಳುವಳಿಕೆ ಇಲ್ಲದ ತೀರ್ಪುಗಳು ಬರಬಹುದು.
  5. ವಿಘಟನೆ:
    ಪ್ರತ್ಯೇಕ ಪಂಗಡಗಳಿಗೆ ಮಂಡಳಿಗಳು ರಚನೆಯಾದರೆ, ಏಕೀಕೃತ ಆಡಳಿತ ದುರ್ಬಲವಾಗಬಹುದು.
  6. ಕೇಂದ್ರೀಕೃತ ನಿಯಂತ್ರಣ: ಕೇಂದ್ರ ಸರ್ಕಾರದ ವ್ಯಾಪಕ ಅಧಿಕಾರದಿಂದ ಸ್ಥಳೀಯ ಮಂಡಳಿಗಳ ಸ್ವಾಯತ್ತತೆ ಕಡಿಮೆಯಾಗಬಹುದು.
  7. ಸಮುದಾಯ ಟ್ರಸ್ಟ್‌ಗೆ ಧಕ್ಕೆ: ಅಧಿಕಾರಶಾಹಿ ಹಸ್ತಕ್ಷೇಪದಿಂದ ವಕ್ಫ್ ವ್ಯವಸ್ಥೆಯಲ್ಲಿ ನಂಬಿಕೆ ಕುಗ್ಗಿ, ದತ್ತಿಗಳ ಪ್ರಭಾವ ಕಡಿಮೆಯಾಗಬಹುದು.
  8. ⁠ಭಾರತದಲ್ಲಿ ವಕ್ಫ್ ಕಾನೂನುಗಳನ್ನು ರೂಪಿಸಿದ ಪ್ರಮುಖ ಕೇಸ್‌ಗಳು
  9. ಮೊಹಮ್ಮದ್ ಇಸ್ಮಾಯಿಲ್ ವಿರುದ್ಧ ಠಾಕೂರ್ ಸಬೀರ್ ಅಲಿ (1962): ವಕ್ಫ್ ಶಾಶ್ವತತೆ, ಧರ್ಮನಿಷ್ಠೆ ಮತ್ತು ಹಿಂತೆಗೆದುಕೊಳ್ಳಲಾಗದಿರುವ ಗುಣಗಳನ್ನು ಪೂರೈಸಬೇಕು ಎಂದು ಸುಪ್ರೀಂ ಕೋರ್ಟ್ ಒತ್ತಿಹೇಳಿತು.
  10. ಮುತವಲ್ಲಿ ಅಬ್ದುಲ್ ಘನಿ ವಿರುದ್ಧ ಅಡ್ವೊಕೇಟ್ ಜನರಲ್, ಬಿಹಾರ (1984):ಮುತವಲ್ಲಿ ಆಸ್ತಿಗಳನ್ನು ಸಂರಕ್ಷಿಸುವ ಜವಾಬ್ದಾರಿ ಹೊಂದಿದ್ದು, ದುರುಪಯೋಗದಲ್ಲಿ ತಪ್ಪಿತಸ್ಥರಾದರೆ ತೆಗೆದುಹಾಕಬಹುದು ಎಂದು ತೀರ್ಪು.
  11. ಹಾಜಿ ಅಬ್ದುಲ್ ಅಜೀಜ್ ವಿರುದ್ಧ ಬಿಹಾರ ರಾಜ್ಯ (1973): ವಕ್ಫ್ ಆಸ್ತಿಗಳಿಗೆ ಕಾನೂನು ವಿನಾಯಿತಿ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸಿತು.
  12. M/s ಅಲ್-ಹಮೀದ್ ವಿರುದ್ಧ A.P. ಕೃಷಿ ವಿಶ್ವವಿದ್ಯಾಲಯ (1981): ವಕ್ಫ್ ಆಸ್ತಿಗಳನ್ನು ದಾನಿಯ ಉದ್ದೇಶಕ್ಕೆ ಕಟ್ಟುನಿಟ್ಟಾಗಿ ಬಳಸಬೇಕು ಎಂದು ನ್ಯಾಯಾಲಯ ಒಪ್ಪಿತು.
    ಈ ತೀರ್ಪುಗಳು ವಕ್ಫ್ ತತ್ವಗಳನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರವನ್ನು ಒತ್ತಿಹೇಳುತ್ತವೆ.
    ವಕ್ಫ್ ಆಸ್ತಿಗಳ ನೋಂದಣಿ
    ನಮ್ಮ ಹಲವು ವಕ್ಫ್ ಸಂಸ್ಥೆಗಳು ಇನ್ನೂ ವಕ್ಫ್ ಮಂಡಳಿಯಲ್ಲಿ ನೋಂದಾಯಿಸದಿರುವುದು ಗಮನಾರ್ಹ. ಇದರಿಂದ ಅವು ಕಾನೂನು ವಿರೋಧಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದಾಗಬಹುದು. ಸಮುದಾಯದ ಒಳಿತಿಗಾಗಿ ನೋಂದಣಿ ಅನಿವಾರ್ಯವಾಗಿದೆ. ನೋಂದಣಿಗಾಗಿ ಸಂಬಂಧಿತ ದಾಖಲೆಗಳೊಂದಿಗೆ ಜಿಲ್ಲಾ ವಕ್ಫ್ ಕಚೇರಿಗೆ ಭೇಟಿ ನೀಡಿ, ಬೈಲಾ ಅಂಗೀಕರಿಸಿ, ಚುನಾವಣೆ ನಡೆಸಿ, ಆಡಳಿತ ಮಂಡಳಿ ರಚಿಸಿ, ಅರ್ಜಿ ಸಲ್ಲಿಸಬೇಕು.
    ಒಟ್ಟಾರೆ ತೀರ್ಮಾನ
    “ವಕ್ಫ್” ಕೇವಲ ಸಂಸ್ಥೆಯಲ್ಲ, ಇಸ್ಲಾಮಿಕ್ ತತ್ವಶಾಸ್ತ್ರದ ಮೂಲಕ ರೂಪಿತವಾದ, ಮುಸ್ಲಿಮರ, ಬಡವರ ಮತ್ತು ದೀನ ದಲಿತರ ಏಳಿಗೆಗಾಗಿ ಮೀಸಲಾದ ಸ್ವತ್ತು ಎಂದರೆ ಅಲ್ಲಾಹನಿಗೆ ಅರ್ಪಿತವಾದ ಸಮುದಾಯದ ಸ್ವತ್ತಾಗಿದೆ. ಇದು ದಾನ ಮತ್ತು ಧರ್ಮದ ಆಳವಾದ ಆಶಯವನ್ನು ಒಳಗೊಂಡಿದೆ.
    1995ರ ವಕ್ಫ್ ಕಾಯಿದೆ ಮತ್ತು 2013ರ ತಿದ್ದುಪಡಿಗಳು ಆಸ್ತಿಗಳ ನಿಯಂತ್ರಣ ಮತ್ತು ರಕ್ಷಣೆಗೆ ಮಹತ್ವದ ಹೆಜ್ಜೆಗಳಾಗಿವೆ. ಆದರೆ, 2024ರ ತಿದ್ದುಪಡಿ ಮಸೂದೆ ಹೊಸ ಸವಾಲುಗಳನ್ನು ತಂದಿದೆ. ಇದು ವಕ್ಫ್ ನಿರ್ವಹಣೆಯ ಸ್ವಾಯತ್ತತೆ ಮತ್ತು ಪರಿಣಾಮಕಾರಿತ್ವವನ್ನು ದುರ್ಬಲಗೊಳಿಸಬಹುದು, ದತ್ತಿಗಳನ್ನು ಉಳಿಸಿಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು.

ವಕ್ಫ್ ವ್ಯವಸ್ಥೆ ಐತಿಹಾಸಿಕವಾಗಿ ಸಾಮಾಜಿಕ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಇದು ಮುಂದೆಯೂ ಸಮುದಾಯ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುವುದು ಅತ್ಯಗತ್ಯ. ಧಾರ್ಮಿಕ ಮತ್ತು ದತ್ತಿ ಸಾರಕ್ಕೆ ಧಕ್ಕೆಯಾಗದಂತೆ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಸುಧಾರಣೆಗಳನ್ನು ಮಾತ್ರ ನಾವು ಬೆಂಬಲಿಸಬಹುದು. ಆದರೆ, ಧಾರ್ಮಿಕ ಹಕ್ಕುಗಳಿಗೆ ಚ್ಯುತಿ ತರುವ ಅಥವಾ ಆಸ್ತಿಗಳನ್ನು ಅನ್ಯಾಯವಾಗಿ ಅತಿಕ್ರಮಿಸುವ ಯಾವುದೇ ಕಾಯಿದೆಯನ್ನು ಕಾನೂನಾತ್ಮಕವಾಗಿ ಎದುರಿಸಬೇಕಾಗಿದೆ ಹೊರತು ಬೀದಿಗಿಳಿದು ಹೋರಾಡಿದಲ್ಲಿ ಇದರಿಂದ ಹೆಚ್ಚಿನ ಪ್ರಯೋಜನ ಆಗುವುದು ಎಂದು ನನಗೆ ಅನಿಸುವುದಿಲ್ಲ.

ಇಸ್ಮಾಯಿಲ್ ಎಸ್. ನ್ಯಾಯವಾದಿ, ಮಂಗಳೂರು