ರಾಜ್ಯದ ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆ ಹೆಸರಿನಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ನಕಲಿ ಅಂಕಪಟ್ಟಿಗಳನ್ನು ನೀಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪ್ರಶಾಂತ್ ಗುಂಡ್ಮಿ, ಮೋನೀಷ್ ಕೆ.ಜೆ ಹಾಗೂ ರಾಜಶೇಖರ ಎಂದು ಗುರುತಿಸಲಾಗಿದೆ. ಕತ್ರಿಗುಪ್ಪೆಯ ರಾಮ್ ರಾವ್ ಲೇಔಟ್‌ನಲ್ಲಿರುವ ಅಕಾಡೆಮಿಯೊಂದರಲ್ಲಿ pucಗೆ ದಾಖಲಾಗಿದ್ದ ವಿದ್ಯಾರ್ಥಿಗೆ ಯಾವುದೇ ಪರೀಕ್ಷೆ ಬರೆಯದೆಯೇ ಆರೋಪಿಗಳು ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಹೆಸರಿನಲ್ಲಿ ಅಂಕಪಟ್ಟಿ ನೀಡಿದ್ದರು. ವಿದ್ಯಾರ್ಥಿಯ ಕಡೆಯವರು ಅಂಕಪಟ್ಟಿ ಪರಿಶೀಲಿಸಿ ಅನುಮಾನಗೊಂಡು ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದರು.

ಬಂಧಿತ ಆರೋಪಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಧ್ಯಯನ ಕೇಂದ್ರಗಳನ್ನು ತೆರೆದು, ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಬಳಿಕ ಅವರಿಗೆ ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಹೆಸರಿನಲ್ಲಿ ಆರೋಪಿಗಳು ಅಂಕಪಟ್ಟಿಗಳನ್ನು ನೀಡಿ 5 ರಿಂದ 10 ಸಾವಿರ ರೂಪಾಯಿ ಹಣ ಪಡೆದು ನಕಲಿ ಅಂಕಪಟ್ಟಿ ನೀಡುತ್ತಿದ್ದರು. ಆರೋಪಿಗಳಿಂದ ನಕಲಿ ಅಂಕಪಟ್ಟಿ ಪಡೆದವರು ಸರಕಾರದ ಇಲಾಖೆಗಳಲ್ಲಿ ವಿವಿಧೆಡೆ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ಕೆಲಸ ನೀಡುವ ಮೊದಲು ಪರಿಶೀಲನೆ ಮಾಡಿದಾಗಲೂ ಸಹ ಅಸಲಿ ಅಂಕಪಟ್ಟಿ ಎಂದೇ ಆರೋಪಿಗಳು ಮಾಹಿತಿ ನೀಡಿದ್ದರು. ಸದ್ಯ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ನಕಲಿ ಅಂಕಪಟ್ಟಿ ಹಾಗೂ ಸಂಬಂಧ ಪಟ್ಟ ಸೊತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ಆರೋಪಿಗಳು ಧಾರವಾಡ ಮತ್ತು ಬೆಂಗಳೂರಿನಲ್ಲಿ ಅಂಕಪಟ್ಟಿ ಪ್ರಿಂಟ್ ಮಾಡಿರುವುದು ಪತ್ತೆಯಾಗಿದ್ದು, ಈವರೆಗೂ ಸುಮಾರು 350 ಜನರಿಗೆ ನಕಲಿ ಅಂಕಪಟ್ಟಿ ನೀಡಿರುವುದು ತನಿಖೆಯಿಂದ ತಿಳಿದು ಬಂದಿದೆ.
