ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಭೀಕರ ದಾಳಿ ವೇಳೆ ತನ್ನ ಪ್ರಾಣವನ್ನು ಲೆಕ್ಕಿಸದೇ ದಾಳಿಯಲ್ಲಿ ಗಾಯಗೊಂಡಿದ್ದ ಪ್ರವಾಸಿಗರನ್ನು ಉಳಿಸುವಲ್ಲಿ ಸಾಹಸ ಮೇರೆದ ಸ್ಥಳೀಯ ನಿವಾಸಿ ರಯೀಸ್ ಅಹ್ಮದ್ ಭಟ್ ಅವರನ್ನು ‘ಪಹಲ್ಗಾಮ್ ಹೀರೋ’ ಎಂದು ಗೌರವಿಸಲಾಗುತ್ತಿದೆ. ಭೀಕರ ದಾಳಿಯ ವೇಳೆ 5 ರಿಂದ 6 ಜನರ ಜೀವ ಉಳಿಸಿದ ರಯೀಸ್ ಅಹ್ಮದ್ ಭಟ್ ಇದೀಗ ‘ಪಹಲ್ಗಾಮ್ ಹೀರೋ’ ಆಗಿದ್ದಾರೆ. ದಾಳಿಯ ವೇಳೆ ಗಾಯಗೊಂಡ ಪ್ರವಾಸಿಗರಿಗೆ ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಹಾಯ ಮಾಡಿದರು. ದಾಳಿಕೋರರ ದಾಳಿಗೆ ಸತ್ತರೂ ಪರವಾಗಿಲ್ಲ ಎಂದು ಭಾವಿಸಿ ಭಟ್ ಒಬ್ಬಂಟಿಯಾಗಿ ತಮ್ಮ ಕಚೇರಿಯಿಂದ ಪ್ರವಾಸಿಗರಿಗೆ ಸಹಾಯ ಮಾಡಲು ಬಂದು 5 ಮಂದಿಯ ಪ್ರಾಣ ಉಳಿಸಿದ್ದಾರೆ.

ಭಯೋತ್ಪಾದಕ ದಾಳಿಯ ಸ್ಥಳವನ್ನು ಅವರು ಸಮೀಪಿಸುತ್ತಿದ್ದಂತೆ, ಜನರು ಕೆಸರಿನಲ್ಲಿ ಬರಿಗಾಲಿನಲ್ಲಿ ಓಡುತ್ತಿದ್ದರು ಮತ್ತು ಸಹಾಯಕ್ಕಾಗಿ ಕಿರುಚುತ್ತಿದ್ದರು. ಈ ವೇಳೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವತ್ತ ತಮ್ಮ ಗಮನವಿದೆ ಎಂದು ಅರಿತ ಭಟ್, ಭಯಭೀತರಾಗಿ ಮತ್ತು ದಣಿದ ಪ್ರವಾಸಿಗರಿಗೆ ಬಾಯಾರಿಕೆ ನೀಗಿಸಲು ನೀರು ಕೊಡುವ ಮೂಲಕ ಸಹಾಯ ಮಾಡಿದರು. ನಾವು ಕಾಡಿನಿಂದ ಬರುತ್ತಿದ್ದ ನೀರು ಸರಬರಾಜಿನ ಪೈಪ್ ಒಡೆದು ಅವರಿಗೆ ನೀರು ಕೊಟ್ಟು, ಅವರನ್ನು ಸಮಾಧಾನಪಡಿದ್ದರು. ಅಲ್ಲದೆ, ಅವರಿಗೆ ‘ಈಗ ನೀವು ಸುರಕ್ಷಿತ ಪ್ರದೇಶದಲ್ಲಿದ್ದೀರಿ’ ಎಂದು ಹೇಳಿದ ಮೇಲೆ ಬದುಕುಳಿದವರು ನಿಟ್ಟುಸಿರು ಬಿಟ್ಟರು.

ಪ್ರವಾಸಿಗರು ಭಯಭೀತರಾಗಿದ್ದರೂ ಸಹ, ಹಿಂಸಾಚಾರ ಪೀಡಿತ ಸ್ಥಳಕ್ಕೆ ಭೇಟಿ ನೀಡಲು ಹೆಚ್ಚಿನ ಸ್ಥಳೀಯ ಕುದುರೆ ಸವಾರರ ಮನವೊಲಿಸಿ ಅವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ 35 ವರ್ಷಗಳ ಜೀವನದಲ್ಲಿ, ಪಹಲ್ಗಾಮ್‌ನಲ್ಲಿ ಇಂತಹ ಘಟನೆ ಎಂದಿಗೂ ಸಂಭವಿಸಿಲ್ಲ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
