ಮಂಗಳೂರು: ಗುಂಪು ಹಲ್ಲೆ; ಕುಡುಪು ಬಳಿ ಯುವಕನೊಬ್ಬನ ಹತ್ಯೆ ಪ್ರಕರಣ 15 ಮಂದಿ ಆರೋಪಿಗಳ ಬಂಧನ

ಕರಾವಳಿ

ಜಿಲ್ಲೆಯಲ್ಲಿ ನಡೆದ ಗುಂಪು ಹತ್ಯೆಯ ಮೊದಲ ಪ್ರಕರಣ, ಮಾಜಿ ಕಾರ್ಪೊರೇಟರ್ ಒಬ್ಬರ ಪತಿ ಕೃತ್ಯದಲ್ಲಿ ಭಾಗಿ

ನಗರದ ಹೊರವಲಯದ ಕುಡುಪುವಿನಲ್ಲಿ ಯುವಕನೊಬ್ಬ ಭಾನುವಾರ ಮೃತಪಟ್ಟಿದ್ದು, ಇದಕ್ಕೆ ಗುಂಪು ಹಲ್ಲೆಯೇ ಕಾರಣ. ಬಲವಾದ ಹಲ್ಲೆಯಿಂದ ದೇಹದೊಳಗೆ ಆಗಿರುವ ಗಾಯಗಳಿಂದ ಯುವಕ ಸತ್ತಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿದೆ. ಆತನಿಗೆ ಹಲ್ಲೆ ನಡೆಸಿದ 15 ಆರೋಪಿಗಳನ್ನು ಬಂಧಿಸಿದ್ದಾರೆ. ಕುಡುಪು ತಿರುವೈಲು ಗ್ರಾಮದ ನಡುಮನೆಯ ಸಚಿನ್, ದೇವದಾಸ್, ಮಂಗಳನಗರದ ಮಂಜುನಾಥ್, ನೀರುಮಾರ್ಗದ ಸಾಯಿದೀಪ್, ಮಂಗಳನಗರ ನಿತೇಶ್ ಕುಮಾರ್ ಅಲಿಯಾಸ್‌ ಸಂತೋಷ್, ಕುಡುಪು ಕಟ್ಟೆ ನಡುಮನೆಯ ದೀಕ್ಷಿತ್ ಕುಮಾರ್, ದೇವರ ಪದವು ನಿವಾಸಿ ಸಂದೀಪ್, ಕುಡುಪು ನಡುಮನೆ ಅಡ್ಡರಸ್ತೆ ನಿವಾಸಿ ವಿವಿಯನ್ ಆಳ್ವಾರಿಸ್, ಕುಡುಪುಕಟ್ಟೆಯ ಶ್ರೀದತ್ತ, ಕದ್ರಿ ಕೈಬಟ್ಟಲ್‌ನ ರಾಹುಲ್, ಕುಲಶೇಖರದ ಪ್ರದೀಪ್ ಕುಮಾರ್, ಶಕ್ತಿನಗರ ಬೌಲ್ಯದ ಮನೀಷ್ ಶೆಟ್ಟಿ, ಕುಡುಪುಕಟ್ಟೆ ನೆಕ್ಕರೆ ರಸ್ತೆಯ ಧನುಷ್, ಕುಲಶೇಖರದ ದೀಕ್ಷಿತ್, ಕುಡುಪು ದೇವಸ್ಥಾನದ ಬಳಿ ನಿವಾಸಿ ಕಿಶೋರ್ ಕುಮಾರ್ ಬಂಧಿತರು. ಇನ್ನುಳಿದ ಆರೋಪಿಗಳ ಪತ್ತೆಗೂ ಕ್ರಮ ವಹಿಸಲಾಗಿದೆ.

ದಿನಾಂಕ 27ರಂದು (ಭಾನುವಾರ) ಸಂಜೆ ಸುಮಾರು 5.30 ಗಂಟೆಗೆ ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಸಮೀಪದಲ್ಲಿ ಯುವಕ ಮೃತದೇಹ ಪತ್ತೆಯಾದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು. ಸ್ಥಳೀಯ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಪರಾಧ ಸ್ಥಳ ಪರಿಶೀಲನಾ ತಜ್ಞರನ್ನು ಹಾಗೂ ವಿಧಿವಿಜ್ಞಾನ ತಜ್ಞರ ಸಂಚಾರ ತಂಡವನ್ನು ಕರೆಯಿಸಿ ಸ್ಥಳ ಪರಿಶೀಲನೆ ನಡೆಸಿದ್ದರು. ಮೃತದೇಹದಲ್ಲಿ ಗಂಭೀರ ಗಾಯಗಳು ಕಂಡುಬಂದಿರಲಿಲ್ಲ. ಸಿಕ್ಕ ಪ್ರಾಥಮಿಕ ಮಾಹಿತಿಗಳ ಆಧಾರದಲ್ಲಿ ಅನುಮಾನಾಸ್ಪದ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ನಗರದ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆ ತಜ್ಞವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಪ್ರಾಥಮಿಕ ವರದಿ ನೀಡಿದ್ದಾರೆ. ಅದರ ಪ್ರಕಾರ, ಮೃತ ಯುವಕನ ಬೆನ್ನಿನ ಭಾಗದಲ್ಲಿ ಬಲವಾದ ಹೊಡೆತದ ಬಹಳಷ್ಟು ಗಾಯಗಳಾಗಿದ್ದು, ಅದರಿಂದ ಉಂಟಾದ ರಕ್ತಸ್ರಾವ, ಆಘಾತ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಯುವಕ ಮೃತಪಟ್ಟಿದ್ದು ಎಂದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ.

ಪೊಲೀಸರ ಇನ್ನೊಂದು ತಂಡವು ಕ್ರಿಕೆಟ್ ಪಂದ್ಯದ ವೇಳೆ ನಡೆದ ಬೆಳವಣಿಗೆಗಳ ಮಾಹಿತಿ ಕಲೆಹಾಕಿದೆ. ಅದರ ಪ್ರಕಾರ ಇದು ಗುಂಪು ಹಲ್ಲೆಯಿಂದ ಆಗಿರುವ ಸಾವು ಎಂದು ಖಚಿತ ಪಟ್ಟಿದೆ. ಭಾನುವಾರ ಮಧ್ಯಾಹ್ನ3 ಗಂಟೆಗೆ ಸುಮಾರಿಗೆ ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಆ ಸಮಯದಲ್ಲಿ ಯುವಕ ಅಲ್ಲಿಗೆ ಹೋಗಿದ್ದ. ಅಲ್ಲಿ ಕ್ರಿಕೆಟ್ ಆಡುತ್ತಿದ್ದವರಿಗೂ ಆತನಿಗೂ ಜಗಳ ನಡೆದಿತ್ತು. ಆರೋಪಿ ಸಚಿನ್‌ ಆತನಿಗೆ ಹಲ್ಲೆ ನಡೆಸಿದ್ದ. ನಂತರ ಅಲ್ಲಿದ್ದ 30ಕ್ಕೂ ಹೆಚ್ಚು ಮಂದಿ ಸೇರಿ ಆತನ ಮೇಲೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಕಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಸ್ಥಳದಲ್ಲಿದ್ದ ಕೆಲವರು ತಡೆಯಲು ಯತ್ನಿಸಿದರೂ ಕೇಳದೇ ಹಲ್ಲೆ ನಡೆಸಿದ್ದರು. ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ. ಮೃತನ ಗುರುತು, ವಿಳಾಸ ಇನ್ನೂ ಗೊತ್ತಾಗಿಲ್ಲ. ಆತ ಬಿಹಾರಿ ಅಥವಾ ಪಶ್ಚಿಮ ಬಂಗಾಳದ ಕಾರ್ಮಿಕ ಆಗಿರಬಹುದು ಎಂದು ಕೆಲವರು ತಿಳಿಸಿದ್ದಾರೆ.

ಕುಲಶೇಖರ ಕೇಶವ ಕಂಪೌಂಡ್‌ನ ನಿವಾಸಿ ದೀಪಕ್ ಕುಮಾರ್ ನೀಡಿದ ದೂರಿದ ಆಧಾರದಲ್ಲಿ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 103(2) (ಐದಕ್ಕಿಂತ ಹೆಚ್ಚು ಜನರ ಗುಂಪು ಸೇರಿ ನಡೆಸುವ ಹಲ್ಲೆ) , 115 (2), 189(2), 190, 191(1), 191(3), 240 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಬಿಎನ್‌ಎಸ್‌ನಲ್ಲಿ ಗುಂಪು ಹಲ್ಲೆಗೆ ಪ್ರತ್ಯೇಕವಾದ ಸೆಕ್ಷನ್‌ 103(2) ಸೆಕ್ಷನ್‌ ಅಳವಡಿಸಲಾಗಿದೆ. ಕಮಿಷನರೇಟ್‌ ವ್ಯಾಪ್ತಿಯಲ್ಲಿ ಈ ಸೆಕ್ಷನ್ ಅಡಿ ದಾಖಲಾದ ಮೊದಲ ಪ್ರಕರಣವಿದು. ಬಹುಶಃ ರಾಜ್ಯದಲ್ಲೂ ಈ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು ಇದೇ ಮೊದಲು ಎನಿಸುತ್ತದೆ. ಈ ಗಲಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಒಬ್ಬರ ಪತಿ ಭಾಗಿಯಾಗಿದ್ದು, ಈತ ಕೋಮುವಾದಿ ಸಂಘಟನೆಯೊಂದರಲ್ಲಿ ಸಕ್ರಿಯ ಕಾರ್ಯಕರ್ತ ಎನ್ನಲಾಗಿದೆ. ಆತನ ಪ್ರಚೋದನೆಯಿಂದಲೇ ಈ ಕೃತ್ಯ ಎಸೆಯಲಾಗಿದೆ ಎಂಬ ಸುದ್ದಿ ಇದೆ.