ವಾಮಂಜೂರು ಸಮೀಪದ ಕುಡುಪು ಎಂಬಲ್ಲಿ ಏಪ್ರಿಲ್ 27 ರಂದು ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದ ಕೇರಳ ಮೂಲದ ಕಾರ್ಮಿಕ ಅಶ್ರಫ್ ಎಂಬಾತನ ಮೇಲೆ ಮೂವತ್ತರಷ್ಟು ದುಷ್ಕರ್ಮಿಗಳು ವಿನಾಕಾರಣ ಥಳಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಅಸಹಜ ಸಾವು ಎಂದು ಬಿಂಬಿಸಿ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದ ಆರೋಪದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಶಿವಕುಮಾರ್ ಹಾಗೂ ಅದಕ್ಕೆ ಸಾಥ್ ನೀಡಿದ ಎಸ್ ಬಿ ಚಂದ್ರ ಹಾಗೂ ಪೊಲೀಸ್ ಸಿಬ್ಬಂದಿ ಯಲ್ಲಾಲಿಂಗ ಅವರನ್ನು ಅಮಾನತು ಮಾಡಲಾಗಿದೆ.

ಕರಾವಳಿ ಭಾಗದಲ್ಲಿ ನಡೆದ ಮೊದಲ ಗುಂಪು ಹತ್ಯೆ ಪ್ರಕರಣ ಇದಾಗಿದ್ದು, ಸ್ಥಳೀಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆಡುಕೊಳ್ಳದೆ ಆರೋಪಿಗಳನ್ನು ಬಚಾವು ಮಾಡಲು ಪ್ರಯತ್ನಿಸಿದ್ದು ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಉನ್ನತ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ನೀಡದೆ ಕರ್ತವ್ಯ ಲೋಪ ಎಸಗಿರುವ ಆರೋಪಗಳು ಇವರ ಮೇಲಿದೆ. ಕುಡುಪು ಗುಂಪು ಹತ್ಯೆ ಪ್ರಕರಣ ಪೊಲೀಸರು ನಿಭಾಯಿಸಿದ ರೀತಿಯಿಂದಾಗಿ ಇಡೀ ರಾಜ್ಯ ಸರಕಾರವೇ ಇಕ್ಕಟ್ಟಿಗೆ ಸಿಲುಕಿತ್ತು.
