ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ನೇರ ಪ್ರಯಾಣ ಅವಕಾಶವನ್ನು ರದ್ದುಪಡಿಸಲಾಗಿದೆ.
ಕೋವಿಡ್ ಸಾಂಕ್ರಾಮಿಕದ ಬಳಿಕ ಮತ್ತೆ ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ತೆರಳಲು ಯಾತ್ರಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಹಜ್ ಯಾತ್ರೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿಯೂ ಯಾತ್ರಿಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಮಾನ ಹತ್ತುವ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಭಾರತೀಯ ಹಜ್ ಸಮಿತಿಯು ದೇಶದ ಹಲವಾರು ರಾಜ್ಯಗಳಲ್ಲಿನ ವಿಮಾನ ಹತ್ತುವ ಕೇಂದಗಳನ್ನು ರದ್ದು ಪಡಿಸಿದ್ದು, ಇದರಲ್ಲಿ ಮಂಗಳೂರು ವಿಮಾನ ನಿಲ್ದಾಣ ಸಹ ಸೇರಿದೆ.
ರಾಜ್ಯದ ಹಜ್ ಯಾತ್ರಿಗಳು ಬೆಂಗಳೂರು,ಮಂಗಳೂರು, ಗೋವಾ ಹಾಗೂ ಹೈದರಾಬಾದ್ ಮೂಲಕ ಹಜ್ ಯಾತ್ರೆಗೆ ತೆರಳುತ್ತಿದ್ದರು. ಇದೀಗ ಮಂಗಳೂರು ಎಮ್ರಿಗೇಶನ್ ಪಾಯಿಂಟ್ ರದ್ದು ಮಾಡುವುದರಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಯ ಯಾತ್ರಿಗಳು ತೊಂದರೆಗೆ ಸಿಲುಕಿದ್ದು, ಭಾರತೀಯ ಹಜ್ ಸಮಿತಿಯು ಈ ಐದು ಜಿಲ್ಲೆಗಳ ಯಾತ್ರಿಗಳಿಗೆ ಕೇರಳದ ಕಣ್ಣೂರು, ಕೊಚ್ಚಿ, ಬೆಂಗಳೂರು ಹಾಗೂ ಚೆನ್ನೈ ಈ ಪಾಯಿಂಟ್ ಆಯ್ಕೆ ಮಾಡಿಕೊಳ್ಳಲು ತಿಳಿಸುತ್ತಿದೆ.
ಕಳೆದ ವರ್ಷ ಕೋವಿಡ್ ಕಾರಣದಿಂದ ಮಂಗಳೂರಿನಿಂದ ನೇರವಾಗಿ ಹಜ್ ಯಾತ್ರೆಗೆ ಅವಕಾಶ ಕಲ್ಪಿಸಿರಲಿಲ್ಲ. ಈ ಬಾರಿ ಮಂಗಳೂರಿನಿಂದ ನೇರವಾಗಿ ಯಾತ್ರೆ ಕೈಗೊಳ್ಳಲು ಅವಕಾಶ ನೀಡುವಂತೆ ಕೇಂದ್ರದ ಹಜ್ ಸಮಿತಿಯನ್ನು ಕೋರಲಾಗಿತ್ತು. ಆದರೆ ಯಾತ್ರಿಕರು ಹೊರಡುವ ಸ್ಥಳಗಳ ಪಟ್ಟಿಯಿಂದ ಮಂಗಳೂರನ್ನು ಸಮಿತಿ ಕೈಬಿಟ್ಟಿದೆ ಎನ್ನಲಾಗಿದೆ.