ಸುಹಾಸ್ ಶೆಟ್ಟಿ ಹತ್ಯೆಯ ನಂತರ ಮುಸ್ಲಿಂ ಅಧಿಕಾರಿಗಳನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿರುವ ಸಂಘಪರಿವಾರ.. ಮುಸ್ಲಿಂ ಆಫೀಸರ್ಸ್ ಜಿಹಾದ್ ಹಿಂದಿನ ಷಡ್ಯಂತ್ರ ಏನು.?
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ದೇಶದಲ್ಲಿರುವ ವಕ್ಫ್ ಆಸ್ತಿಯನ್ನು ಆ ಸಮುದಾಯದ ಮುಖಂಡರು ಸಮುದಾಯದ ಸಬಲೀಕರಣಕ್ಕೆ ಬಳಸಿಕೊಂಡಿದ್ದರೆ ಮುಸ್ಲಿಂ ಸಮುದಾಯ ಪಂಕ್ಚರ್ ಹಾಕುವ ಕೆಲಸ ಮಾಡುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಅದೇ ರೀತಿ ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಮಹರಾಷ್ಟ್ರದಲ್ಲಿರುವ ಸುಲಭ್ ಶೌಚಾಲಯದಲ್ಲಿ ಇಪ್ಪತ್ತೆರಡಕ್ಕೂ ಹೆಚ್ಚು ಮಂದಿ ಮುಸಲ್ಮಾನರು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದ್ದರು. ಈ ಇಬ್ಬರು ಬಿಜೆಪಿ ನಾಯಕರ ಮಾತುಗಳನ್ನು ಮಾಧ್ಯಮಗಳು ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಈಗಲೂ ಪಂಕ್ಚರ್ ಹಾಕುವ, ಶೌಚಾಲಯದಲ್ಲಿ ದುಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಬಿಂಬಿಸಿತ್ತು.
ಬಿಜೆಪಿಯ ಪ್ರಮುಖ ನಾಯಕರ ಈ ಹೇಳಿಕೆಗಳು ಮುಸ್ಲಿಂ ಸಮುದಾಯ ಈಗಲೂ ಎರಡನೇ ದರ್ಜೆಯ ನಾಗರಿಕರಾಗಿ ದುಡಿಯುತ್ತಿದ್ದು, ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕೆಂಬ ತಿರುಳು ಹೊಂದಿತ್ತು ಎಂದು ದೇಶದಾದ್ಯಂತ ವಿಶ್ಲೇಷಣೆ ನಡೆದಿತ್ತು. ಆದರೆ ಕರಾವಳಿ ಭಾಗದಲ್ಲಿ ಸಂಘಪರಿವಾರ ವಿಭಿನ್ನ ಹಾದಿ ತೋರುತ್ತಿದ್ದು ಮುಸ್ಲಿಂ ಆಫೀಸರ್ಸ್ ಗಳನ್ನೇ ಕಟಕಟೆಯಲ್ಲಿ ನಿಲ್ಲಿಸುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದೆ. ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ನಂತರ ಸಂಘಪರಿವಾರದ ನಾಯಕರು ನೇರವಾಗಿ ಕರಾವಳಿ ಭಾಗದ ಪೊಲೀಸ್ ಇಲಾಖೆಯ ಹಲವು ಆಯಕಟ್ಟಿನ ಜಾಗದಲ್ಲಿರುವ ಮುಸ್ಲಿಂ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದು, ಅವರ ಜಂಘಾಬಲವನ್ನು ಹುದುಗಿಸುವ ಕೆಲಸ ಮಾಡುತ್ತಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಖಾಸಗಿ ಮಾಧ್ಯಮವೊಂದರಲ್ಲಿ ಸಿಸಿಬಿ ಇಲಾಖೆಯಿಂದ ಹಿಡಿದು ಹಲವು ಪೊಲೀಸ್ ಠಾಣೆಗಳಲ್ಲಿ ಝಂಡಾ ಹೂಡಿರುವ ಮುಸ್ಲಿಂ ಪೊಲೀಸ್ ಅಧಿಕಾರಿಗಳಿಂದಲೇ ಇಲ್ಲಿನ ರಹಸ್ಯಗಳೆಲ್ಲ ನೇರವಾಗಿ ಆರೋಪಿಗಳ ಕೈ ಸೇರುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಆಫೀಸರ್ಸ್ ವಿರುದ್ಧವೇ ಹರಿಹಾಯ್ದಿದ್ದರು. ಬಿಜೆಪಿಯ ಮಹಾನ್ ನೇತಾಗಳು ಒಂದು ಕಡೆ ಮುಸ್ಲಿಂ ವಿರುದ್ಧ ಕನಿಕರದ ರೀತಿಯ ಮಾತುಗಳನ್ನಾಡಿದರೆ, ಇನ್ನೊಂದು ಕಡೆ ಬಿಜೆಪಿ, ಸಂಘಪರಿವಾರದ ನಾಯಕರೇ ಸರಕಾರಿ ಕಚೇರಿ, ಪೊಲೀಸ್ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಸ್ಲಿಂ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡುವ ಹಂತಕ್ಕೆ ಬಂದು ನಿಂತಿದ್ದಾರೆ. ಇದು ಅವರ ಇಬ್ಬಗೆಯ ಮುಖವಾಡವನ್ನು ತೋರಿಸುತ್ತಿದೆ. ಮುಸ್ಲಿಂ ಸಮುದಾಯ ಪಂಕ್ಚರ್ ಹಾಕುವ, ಶೌಚಾಲಯದಲ್ಲಿ ಕೆಲಸ ಮಾಡುವ ಕೆಲಸ ಮಾತ್ರ ಮಾಡಬೇಕೇ.? ಸರಕಾರಿ ಇಲಾಖೆಗಳಲ್ಲಿ, ಪೊಲೀಸ್ ಇಲಾಖೆಗಳಲ್ಲಿ ಸಮರ್ಥವಾಗಿ ಕೆಲಸ ಮಾಡುವುದನ್ನು ಸಹಿಸಲು ಆಗುತ್ತಿಲ್ಲವೇ.? ಶೈಕ್ಷಣಿಕವಾಗಿ ಉನ್ನತಿಗೇರುತ್ತಿರುವ ಒಂದು ಸಮುದಾಯದ ಜಂಘಾಬಲವನ್ನು ಹುದುಗಿಸುವ ಪ್ರಯತ್ನ ಇದಲ್ಲವೇ. ಇದು ಸಂಘಪರಿವಾರದ ಹಿಡನ್ ಅಜೆಂಡಾ ಅಂದರೂ ಸುಳ್ಳಲ್ಲ.
ಮೇ 1 ರಂದು ರಾತ್ರಿ ಒಂಭತ್ತು ಗಂಟೆಯ ಸಮಯದಲ್ಲಿ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಜಂಕ್ಷನ್ ಬಳಿ ದುಷ್ಕರ್ಮಿಗಳ ಗುಂಪೊಂದು ರೌಡಿ ಶೀಟರ್ ಸುಹಾಸ್ ಶೆಟ್ಟಿ ಮೇಲೆ ಅಟ್ಯಾಕ್ ನಡೆಸಿ ಜನನಿಬಿಡ ಪ್ರದೇಶದಲ್ಲಿ ಆತನನ್ನು ಹತ್ಯೆ ಮಾಡಿ ಪರಾರಿಯಾಗುತ್ತದೆ. ಪೊಲೀಸರು ಈ ಹತ್ಯೆಯ ಹಿಂದಿರುವ ಹಂತಕರನ್ನು ಸದೆಬಡಿದು ಬಂಧಿಸುತ್ತಾರೆ .ಈ ಹತ್ಯೆಯಲ್ಲಿ ಚಿಕ್ಕಮಗಳೂರು ಕಳಸ ಭಾಗದ ಇಬ್ಬರು ಹಿಂದೂ ಯುವಕರು ಭಾಗಿಯಾಗುತ್ತಾರೆ. ಗ್ಯಾಂಗ್ ವಾರ್ ಕಾರಣಕ್ಕೆ ನಡೆದ ಈ ಹತ್ಯೆಯನ್ನು ಬಿಜೆಪಿ, ಸಂಘಪರಿವಾರ ಧರ್ಮ ಕಾರಣಕ್ಕೆ ನಡೆದ ಕೊಲೆ ಎಂದು ಬಿಂಬಿಸಿ ಹುಯಿಲೆಬ್ಬಿಸುತ್ತದೆ. ಈ ಹತ್ಯೆಗೆ ಪ್ರತೀಕಾರಕ್ಕಾಗಿ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನಾಲ್ಕು ಕಡೆಗಳಲ್ಲಿ ಚೂರಿ ಇರಿತ ಪ್ರಕರಣಗಳು ಕೂಡ ನಡೆಯುತ್ತದೆ.

ಸುಹಾಸ್ ಶೆಟ್ಟಿ ಹಂತಕರ ಬಂಧನದ ನಂತರ ಸಂತುಷ್ಟರಾಗದ ಸಂಘಪರಿವಾರ ಈ ಹತ್ಯೆಯಲ್ಲಿ ಬಜಪೆ ಪೋಲಿಸ್ ಠಾಣೆ ಹೆಡ್ ಕಾನ್ಸ್ ಟೇಬಲ್ ರಶೀದ್ ಪರೋಕ್ಷ ಪಾತ್ರದ ಬಗ್ಗೆ ಗಂಭೀರ ಆರೋಪ ಮಾಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕಟ್ಟುಕತೆ ಕಟ್ಟಿ ಪ್ರಚಾರ ಮಾಡಲಾಗುತ್ತಿದೆ. ಮೂಡಬಿದ್ರೆಯ ಹಿಂದೂ ಕಾರ್ಯಕರ್ತ ಸಮಿತ್ ರಾಜ್ ಧರೆಗುಡ್ಡೆ ಎಂಬಾತ ‘ಸುಹಾಸ್ ಕೊಲೆಯಲ್ಲಿ ಬಜಪೆ ಠಾಣೆಯ ಕಾನ್ಸ್ ಟೇಬಲ್ ರಶೀದ್ ನೇರ ಕೈವಾಡ, ಯಾವಾಗ ಬಂಧನ ಮಾಡುತ್ತೀರಿ?’ ಎಂದು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿ ಮುಸ್ಲಿಂ ಪೊಲೀಸ್ ಅಧಿಕಾರಿಗಳನ್ನೇ ಆರೋಪಿಗಳೆಂದು ಚಿತ್ರಿಸಿದ್ದ. ಹಿಂದೂ ಜಾಗರಣ ವೇದಿಕೆ ಮುಖಂಡ ಕೆಟಿ ಉಲ್ಲಾಸ್ ಅನ್ನುವಾತ ‘ಸುಹಾಸ್ ಶೆಟ್ಟಿ ಗೆ ರಶೀದ್ ಬಹಳಷ್ಟು ಟಾರ್ಚರ್ ಕೊಡುತ್ತಿದ್ದರು. ಕೊಲೆಯಾಗುವ ಮೂರು ದಿನಗಳ ಹಿಂದಷ್ಟೇ ಶಸ್ತ್ರಾಸ್ತ್ರ ತೆಗೆಸಿದ್ದರು. ಆ ಸುದ್ದಿ ಆರೋಪಿಗಳಿಗೆ ಹೇಗೆ ಗೊತ್ತಾಯಿತು? ಬಲವಾದ ಮಾಹಿತಿಯನ್ನು ರಶೀದ್ ಆರೋಪಿಗಳಿಗೆ ನೀಡಿರಬೇಕು. ರಶೀದ್ ಅವರನ್ನು ತನಿಖೆಗೆ ಒಳಪಡಿಸಬೇಕು ‘ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದರು. ಇವಿಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿಕೊಂಡು ಹಲವು ರೀತಿಯ ಕಟ್ಟುಕತೆಯನ್ನು ಹರಡಲಾಗಿತ್ತು. ಈ ಬಗ್ಗೆ ಸ್ವತಹ ರಶೀದ್ ಅವರೇ ಸಮಿತ್ ರಾಜ್ ಧರೆಗುಡ್ಡೆ, ಕೆಟಿ ಉಲ್ಲಾಸ್ ಮೇಲೆ ಅನಾವಶ್ಯಕವಾಗಿ ಈ ಕೇಸಿನಲ್ಲಿ ತನ್ನನ್ನು ಎಳೆದು ತಂದ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ರೌಡಿಗಳ ಚಲನವಲನ, ಅವರ ವಾಹನಗಳನ್ನು ತಪಾಸಣೆ ನಡೆಸುವುದು ತಪ್ಪೆ?
ಕರಾವಳಿ ಭಾಗದ ಹಲವು ಠಾಣೆಗಳಲ್ಲಿ ಮುಸ್ಲಿಂ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇದನ್ನು ಸಹಿಸದ ಸಂಘಪರಿವಾರ ಮುಸ್ಲಿಂ ಆಫೀಸರ್ಸ್ ಜಿಹಾದ್ ಅನ್ನುವ ಷಡ್ಯಂತ್ರ ನಡೆಸುತ್ತಿದ್ದಾರೆ. ಹಲಾಲ್, ಲವ್ ಜಿಹಾದ್ ಸೃಷ್ಟಿಸಿದಂತೆ ಮುಸ್ಲಿಂ ಆಫೀಸರ್ಸ್ ಜಿಹಾದ್ ಅನ್ನುವ ನೆರೆಟಿವಿಟಿ ಸೃಷ್ಟಿಸುವ ಹುನ್ನಾರದ ಭಾಗವಷ್ಟೇ.

ಕರಾವಳಿಯಲ್ಲಿ ಸುಹಾಸ್ ಶೆಟ್ಟಿ ಅವರದ್ದೇ ಮೊದಲ ಹತ್ಯೆಯಲ್ಲ. ಕಳೆದ ಒಂದು ದಶಕಗಳಿಂದ ಹಲವಾರು ಸೆನ್ಸೇಷನಲ್ ಹತ್ಯೆಗಳು ಕೂಡ ನಡೆದಿದೆ. ಪೊಳಲಿ ಅನಂತು ವಿನಿಂದ ಹಿಡಿದು ಸುಖಾನಂದ ಶೆಟ್ಟಿಯವರೆಗೆ ಹಲವಾರು ಹತ್ಯೆಗಳು ಜರುಗಿದೆ. ಈ ಕೇಸಿನಲ್ಲಿದ್ದ ಮುಸ್ಲಿಂ ಹಂತಕರನ್ನು ಮುಸ್ಲಿಂ ಅಧಿಕಾರಿಗಳೇ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಕಾನೂನಿನ ಅಡಿಗೆ ತಂದಿದ್ದಾರೆ. ಇದೀಗ ಸಂಘಪರಿವಾರ ಪೊಲೀಸ್ ಇಲಾಖೆಯಲ್ಲಿ ಹಿಂದೂ -ಮುಸ್ಲಿಂ ಅನ್ನುವ ತನ್ನ ಅಜೆಂಡಾವನ್ನು ಸಕ್ರೀಯಗೊಳಿಸಲು ಯತ್ನಿಸುತ್ತಿದ್ದು ನಾಡಿನ ಪ್ರಜ್ಞಾವಂತರು ಸಂಘಪರಿವಾರದ ಕಪಟತೆಯನ್ನು ಬಯಲಿಗೊಳಿಸಬೇಕಿದೆ. ಪೊಲೀಸ್ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಿಸಬೇಕಿದೆ.
