ಬೆಳ್ತಂಗಡಿ: ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ, ಪ್ರಕರಣ ದಾಖಲು.

ಕರಾವಳಿ

ಗುರುವಾಯನಕೆರೆಯಲ್ಲಿ ಮೇ 12ರಂದು ನಡೆದ ಸುಹಾಸ್ ಶೆಟ್ಟಿ ನುಡಿನಮನ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಶೆಟ್ಟಿ ಎಂಬ ಮಹಿಳೆ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಮುಸ್ಲಿಂ ಸಮುದಾಯದವರೊಂದಿಗೆ ಯಾವುದೇ ವ್ಯವಹಾರ ನಡೆಸಬಾರದು, ಅವರೊಂದಿಗಿರುವ ಸಂಬಂಧವನ್ನು ಬಹಿಷ್ಕರಿಸಬೇಕೆಂದು ಸಾರ್ವಜನಿಕವಾಗಿ ಬಹಿರಂಗ ಹೇಳಿಕೆ ನೀಡಿರುವುದನ್ನು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಹರಿಪ್ರಸಾದ್ ಇರುವರ್ತಾಯ ಎಂಬುವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಸಾಯಿರಾಮ್ ಫ್ರೆಂಡ್ಸ್ ಸಂಘಟನೆ ವತಿಯಿಂದ ಗುರುವಾಯನಕೆರೆಯಲ್ಲಿ ನಡೆದ ಸುಹಾಸ್ ಶೆಟ್ಟಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತಿ ಶೆಟ್ಟಿ, ‘ಗುರುವಾಯನಕರೆಯಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿ , ಮುಸ್ಲಿಮರ ಬಳಿ ವ್ಯಾಪಾರ, ವ್ಯವಹಾರ ಮಾಡುವುದನ್ನು ನಿಲ್ಲಿಸಬೇಕು. ಮುಸ್ಲಿಂ ರಿಕ್ಷಾ ಚಾಲಕರು ನಮ್ಮಲ್ಲಿ ಚಂದವಾಗಿ ಮಾತನಾಡಿ ನಮಗೆ ಗೊತ್ತಿಲ್ಲದೆ ಮೋಸ ಮಾಡುತ್ತಾರೆ ಎಂದು ತುಳು ಭಾಷೆಯಲ್ಲಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದ, ಕೋಮು ಸಂಘರ್ಷ ಸೃಷ್ಟಿಸುವ ಉದ್ದೇಶದಿಂದ ಈ ರೀತಿ ಮಾತನಾಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ’ ಹರಿಪ್ರಸಾದ್‌ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹರಿಪ್ರಸಾದ್ ಇರುವರ್ತಾಯ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.