ಮಂಗಳೂರಿನ ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಿರುದ್ಧ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪರ ವಾದಿಸಲು ವಿಶೇಷ ಸರಕಾರಿ ಅಭಿಯೋಜಕರಾಗಿ ಕೆ. ಶಿವಪ್ರಸಾದ್ ಆಳ್ವರನ್ನು ಸರಕಾರ ನೇಮಕಗೊಳಿಸಿದೆ.
ಮಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದ ಯುವತಿ ಕೆ.ಎಸ್.ಎನ್ ರಾಜೇಶ್ ರವರ ಕರಂಗಲ್ಪಾಡಿಯ ಕಚೇರಿಯಲ್ಲಿ ತರಬೇತಿಗೆ ಸೇರಿದ್ದಳು. ಈ ಸಮಯದಲ್ಲಿ ವಕೀಲ ರಾಜೇಶ್ ರವರು ತನ್ನ ಜೊತೆ ಸೆಕ್ಸ್ ನಡೆಸಲು ಸಹಕರಿಸುವಂತೆ ಯುವತಿಯನ್ನು ಒತ್ತಾಯಿಸುತ್ತಿದ್ದರು. ತನ್ನ ಛೇಂಬರಿಗೆ ಕರೆದು ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನ ನಡೆಸಿದ್ದರು ಎಂದು ಸಂತ್ರಸ್ತೆಯ ದೂರಿನಂತೆ ನ್ಯಾಯವಾದಿ ರಾಜೇಶ್ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಕೀಲ ರಾಜೇಶ್ ಲೋಕಾಯುಕ್ತದಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸರಕಾರಿ ಅಭಿಯೋಜಕರಾಗಿ ಕೆ. ಶಿವಪ್ರಸಾದ್ ಆಳ್ವ ಅವರನ್ನು ಸರಕಾರ ನೇಮಕಗೊಳಿಸಿದೆ. ಸರಕಾರಿ ಅಭಿಯೋಜಕರಾಗಿ ನೇಮಕಗೊಂಡ ಶಿವಪ್ರಸಾದ್ ಆಳ್ವರವರು ಹಲವಾರು ಪ್ರಕರಣಗಳಲ್ಲಿ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುತ್ತಾರೆ.
ಅಂಕೋಲಾದ ಬಿಜೆಪಿ ಮುಖಂಡ, ಉಧ್ಯಮಿ ಆರ್. ಎನ್ ನಾಯ್ಕ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜ ಸಹಿತ 9 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ. ಮಾಜಿ ಶಾಸಕ ರಘಪತಿ ಭಟ್ ರವರ ಪತ್ನಿ ನಾಪತ್ತೆ, ಆತ್ಮಹತ್ಯೆ ಪ್ರಕರಣದಲ್ಲಿ ಅತುಲ್ ರಾವ್ ಗೆ ಜೈಲು ಶಿಕ್ಷೆ ಮತ್ತು ದಂಢ. ಹೀಗೆ ಹಲವಾರು ಕ್ಲಿಷ್ಠಕರವಾದ ಪ್ರಕರಣದಲ್ಲಿಯೂ ಪ್ರಾಸಿಕ್ಯೂಷನ್ ಪರವಾಗಿ ಕೆ. ಶಿವಪ್ರಸಾದ್ ಆಳ್ವರವರು ಸಮರ್ಥವಾಗಿ ವಾದಿಸಿ, ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸುವಂತೆ ಮಾಡಿ, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿರುತ್ತಾರೆ.
