ಸಾಲೆತ್ತೂರು ಬಳಿ ಗೋಲ್ಮಾಲ್ ಕಿರು ಸೇತುವೆ. ಕಮಿಷನ್ ದಂಧೆಗೆ ಬಲಿಯಾಯಿತೇ ಸರ್ಕಾರದ ಮೂರು ಕೋಟಿ ಅನುದಾನ.?

ಕರಾವಳಿ

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರು ಕಟ್ಟತ್ತಿಲ ಮಠ ಎಂಬಲ್ಲಿ ತೀರಾ ಅವೈಜ್ಞಾನಿಕ ರೀತಿಯಲ್ಲಿ 2.54ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಿರು ಸೇತುವೆಯಿಂದಾಗಿ ಹೊಳೆ ಬದಿಯ ಕೃಷಿಕರು, ಪರಿಸರವಾಸಿಗಳು, ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಹಿಂಸೆ ಅನುಭವಿಸುವಂತಾಗಿದೆ.

ಕೊಳ್ನಾಡು ಗ್ರಾಮದ ಕಟ್ಟತ್ತಿಲ ಮಠ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯ 2.54ಕೊಟಿ ಅನುದಾನದಲ್ಲಿ ಕಿಂಡಿ ಅಣೆಕಟ್ಟು ಮತ್ತು ಕಿರು ಸೇತುವೆ ನಿರ್ಮಾಣ ಆಗಿತ್ತು. ಕಿರು ಸೇತುವೆಯ ಎರಡೂ ಬದಿಯಲ್ಲಿ ಸಾಕಷ್ಟು ತಡೆಗೋಡೆ ನಿರ್ಮಾಣ ಮಾಡಬೇಕಿತ್ತು. ಸೇತುವೆಯ ಎರಡೂ ಬದಿಗಳ ಸಾರ್ವಜನಿಕ ರಸ್ತೆ ಎತ್ತರಿಸಬೇಕಾಗಿತ್ತು. ಹೊಳೆಯಲ್ಲಿರುವ ಹಳೆಯ ಎರಡು ಕಿಂಡಿ ಅಣೆಕಟ್ಟುಗಳನ್ನು ತೆರವು ಮಾಡಬೇಕಾಗಿತ್ತು. ಆದರೆ ಅದ್ಯಾವುದನ್ನೂ ಮಾಡದೇ ತರಾತುರಿಯಲ್ಲಿ ಕುಂದಾಪುರದ ಗುತ್ತಿಗೆದಾರ ರಾಜೇಶ್ ಕಾರಂತ್ ಎಂಬವರು ಕಾಮಗಾರಿ ನಡೆಸಿ ಹರಕೆ ತೀರಿಸಿದ್ದಾರೆ.

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಇದೀಗ ಮಳೆಗಾಲದಲ್ಲಿ ಹೊಳೆಯ ಎರಡೂ ಬದಿಯ ಕೃಷಿ ಜಮೀನು ಮುಳುಗಡೆಯಾಗಿದೆ. ಕಟ್ಟತ್ತಿಲ ಮಠ ಸರ್ಕಾರಿ ಶಾಲೆಯ ಪುಟಾಣಿಗಳು, ಸಾರ್ವಜನಿಕರು ನಡೆದಾಡುವ ರಸ್ತೆ ಸಂಪೂರ್ಣ ಮುಳುಗಡೆಯಾಗುತ್ತಿದೆ. ಈ ಬಗ್ಗೆ ಆರಂಭದಿಂದಲೂ ಸ್ಥಳೀಯರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಅಲ್ಲದೇ ಕಾಮಗಾರಿಯ ಸಂಪೂರ್ಣ ವಿವರಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಅದ್ಯಾಕೋ ಸಂಪೂರ್ಣ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮೂಲಗಳ ಪ್ರಕಾರ ಕೊಳ್ನಾಡು ಗ್ರಾಮದ ಬೇರೆಡೆಗೆ ಕಿಂಡಿ ಅಣೆಕಟ್ಟು ಮತ್ತು ಕಿರು ಸೇತುವೆ. ನಿರ್ಮಾಣಕ್ಕೆ ಬಿಡುಗಡೆಯಾಗಿದ್ದ ಮೂರು ಕೋಟಿ ಅನುದಾನವನ್ನು ಕಟ್ಟತ್ತಿಲ ಮಠ ಪರಿಸರಕ್ಕೆ ರಾಜಕೀಯ ಒತ್ತಡದ ಮೂಲಕ ವರ್ಗಾವಣೆ ಮಾಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಅದೇ ಕಾರಣಕ್ಕಾಗಿ ಕಿರುಸೇತುವೆಯ ಪರಿಸರದಲ್ಲಿ ಯೋಜನೆಯ ಬಗ್ಗೆ ಮಾಹಿತಿ ನೀಡುವ ಯಾವುದೇ ಫಲಕಗಳನ್ನು ಅಳವಡಿಸಿಲ್ಲ ಎಂದು ತಿಳಿದುಬಂದಿದೆ.

ಇದೀಗ ಅವೈಜ್ಞಾನಿಕವಾಗಿ ನಿರ್ಮಿಸಿದ ಕಿರು ಸೇತುವೆಯ ಬಗ್ಗೆ ಸ್ಥಳೀಯ ಮಾಹಿತಿ ಹಕ್ಕು ಕಾರ್ಯಕರ್ತ ದೇವಿಪ್ರಸಾದ್ ಎಂಬವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ತನಗೆ ದೊರಕುವ ಪರ್ಸೆಂಟೇಜ್ ಹಣಕ್ಕಾಗಿ ಸರ್ಕಾರದ ಮೂರು ಕೋಟಿ ಅನುದಾನವನ್ನು ಪುಢಾರಿಗಳು, ಇಂಜಿನಿಯರ್, ಗುತ್ತಿಗೆದಾರ ವ್ಯವಸ್ಥಿತವಾಗಿ ಹಂಚಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಾಜೂಕಾಗಿ ಕನ್ನ ಕೊರೆದಿದ್ದಾರೆಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.